Friday, April 26, 2013

ಮಲ್ಲಿಗೆಯ ಸ್ವಗತ!


ಗೋಣಿಚೀಲದ ಒಳಗೆ ತುಂಬಿ ತುರುಕಿದರೆನ್ನ
ಬಸ್ಸುಗಳ ಮೇಲುಗಡೆ ಪೇರಿಸಿದರು;
ಬಂತು ಬೆಂಗಳೂರೆಂದು ಎತ್ತಿ ರಸ್ತೆಗೆ ಹಾಕಿ
ಮಲ್ಲಿಗೆಗೆ ರೇಟೆಸ್ಟು ಎನ್ನುತಿಹರು

ನೂರು ಗೋಣಿಗೆ ಕೊಡು; ಇಪ್ಪತ್ತು ನಿನಗೆ
ಎಂದೊಂದು ವ್ಯವಹಾರ ಕುದುರಿಸಿದರು
ದರದರನೆ ಎಳದೆನ್ನ ಸಂತೆಪೇಟೆಗೆ ತಂದು
ಕೇಜಿಗಿನ್ನೂರೆಂದು ಕೂಗುತಿಹರು.

ಸಣ್ಣ ಹುಡುಗಿಯು ತನ್ನ ಮೃದುವಾದ ಕೈಯ್ಯಲ್ಲಿ
ಎತ್ತಿ ನನ್ನನು ಚುಚ್ಚಿ ಬಂಧಿಸಿದರು
ಮೊಳಕೆ ಮೂವತ್ತಂದು ಹದಿನಾರು ಕಂಠದಲಿ
ಕೂಗಿ ನನ್ನನು ಮಾರಿ ಖುಷಿಪಟ್ಟರು.

ನನ್ನ ಸಂಬಂಧಿಕರು ದೇವರಿಗೆ ಮುಡಿಪಂತೆ
ನಾನಿರುವೆ ಮಂಚದಲಿ ಸುಖಿಪರಾರು?
ಇನ್ನೆಷ್ಟು ಗಳಿಗೆಯೋ ನನ್ನ ಜೀವನಯಾತ್ರೆ
ನನ್ನ ಕನಸನು ಅರಿತ ಜೀವನಾರು?

5 comments:

Badarinath Palavalli said...

ಹೂವಿನ ನೋವನ್ನು ಬದುಕಿಗೂ ಸಮೀಕರಿಸುತ್ತಾ ಬರೆದುಕೊಟ್ಟ ಈ ಕವನದ ಹೂರಣ ಬಹಳ ಆಳವಾಗಿದೆ. ಅಭಿನಂದನೆಗಳು.

Manjunatha Kollegala said...

ಮಲ್ಲಿಗೆ ಹೂವಿನಷ್ಟೇ ನವಿರಾದ ಸಂವೇದನೆ, ಸಹಜ ಲಯ-ಪ್ರಾಸ. ಸೊಗಸಾದ ಕವನ.

prashasti said...

ಮಲ್ಲಿಗೆಯ ಸುಮದಷ್ಟೇ ಮಧುರ ಕವನ ಕಿಣ್ಣ :-)

sunaath said...

ಮಲ್ಲಿಗೆಯಂತಹ ಮನಸ್ಸಿನವರಿಗಷ್ಟೇ, ಮಲ್ಲಿಗೆಯ ವೇದನೆ ಅರ್ಥವಾದೀತು!

Sachin Bhat said...

ಬಾಗು೦ದಿ. ನಿನ್ನ ಕವನ ಓದದೇ ಸುಮಾರು ದಿನವಾಗಿತ್ತು.