ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿಯೆ
ಚಿಕ್ಕ ಕಲ್ಲಿನ ರಾಶಿ ಏಕೆ ಗೊತ್ತೇ?
ಅವಳ ನಾ ಕಾದಿರುವ ಗುರುತನ್ನೇ ಇಟ್ಟಿರುವೆ
ಕಲ್ಲು ಹೆಚ್ಚಾದಂತೆ ಹೆಚ್ಚು ಮುತ್ತೆ!
ನಾ ದಿನವು ವೇಗದಲಿ ಬೆಟ್ಟ ದಿಬ್ಬದಿ ಕುಳಿತು
ಕಾಯುವುದು ಅವಳಿಗೆ ತಿಳಿದಂತಿದೆ
ಮುತ್ತ ಹೆಕ್ಕುವ ನೆಪದಿ ತಡವಾಗಿಯೇ ಬಂದು
ಕಲ್ಲುಗಳ ಎಣಿಸುವಳು ಮುತ್ತನಿಕ್ಕಿ!
ಒಂದೊಮ್ಮೆ ಬಾರದಿರೆ ಮೊದಲ ಹನಿ ಬಿದ್ದಂತೆ
ದಿಬ್ಬ ಮಣ್ಣಿನ ಮೇಲೆ ನೋಡಿ ಗುರುತು
ಮಾರನೆಯ ದಿನದಲ್ಲಿ ಅಳುವ ಮುಖಮಾಡುವಳು
ಮತ್ತೆ ಕರಗುವೆ ನಾನು; ಲೆಕ್ಕ ಮುತ್ತು!
ಈ ಬೆಟ್ಟ ಈ ದಿಬ್ಬ ಈ ಎರಡು ಮನಸುಗಳ
ಮುತ್ತನ್ನೆ ತುಂಬಿರುವ ಈ ಕಲ್ಗಳು
ನಾಳೆಯಾ ಬಣ್ಣಗಳ ಆಸೆಗಳ ಹೊತ್ತಿರುವ
ಗುಟ್ಟು ಹೇಳದೆ ಉಳಿವ ಆ ಕಂಗಳು!
ಪ್ರಕೃತಿಗೂ ಪುರುಷನಿಗು ಈ ನೆಪಗಳು
ಅವಳು ನಾನೇ ಆಗಿ ನಾನು ಅವಳು!
5 comments:
ಪ್ರಣಯರಾಜ, ಕವಿರಾಜ!
ಒಮ್ಮೆ ತಾರುಣ್ಯಕ್ಕೆ ಇಣುಕಿ ಬಂದೆ, ಪಾರ್ಕಿನ ಕಲ್ಲು ಬೆಂಚು ಈಗಲೂ ಇದೆಯೋನೋ ಹಾಗೇ! ವಾವ್ ಮಲ್ಲಿಗೆ ಕವಿ.
ಬಹಳ ದಿನದ ನಂತರ ಒಲವಿನ ಕಿರಣ
ದಿಬ್ಬ ಕಲ್ಲು , ಕಾಯುವಿಕೆ ಮತ್ತು ಮುತ್ತು ಜೋಡಿಸಿದ ಪರಿ ಸೊಗಸಾಗಿದೆ
ಅಭಿನಂದನೆಗಳು
ಮಸ್ತ್ ಕವಿತೆ... :)
Facebookನ ಲಿಂಕನ್ನು ಹಿಡಿದು ಇಲ್ಲಿ ಬಂದೆ, ಬಂದದ್ದು ವ್ಯರ್ಥವಾಗಲಿಲ್ಲ. ನವಿರಾದ ಭಾವಗಳನ್ನು ಎಲ್ಲಿಯೂ ಅಸಹಜವೆನಿಸದಂತೆ ಸೊಗಸಾಗಿ ಹೆಣೆಯುತ್ತೀರಿ.
ಮುತ್ತ ಹೆಕ್ಕುವ ನೆಪದಿ ತಡವಾಗಿಯೇ ಬಂದು
ಕಲ್ಲುಗಳ ಎಣಿಸುವಳು ಮುತ್ತನಿಕ್ಕಿ!
ಎಷ್ಟು ಮಧುರವಾದ ಸಾಲುಗಳು! ಮೆಚ್ಚಾಯಿತು.
Post a Comment