Thursday, January 10, 2013

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ನಿನಗಾಗಿ ಹಾತೊರೆದ ಹಳೆಯ ಸರಕು!
ಕೆಣಕುತಲಿ ಕಾಡುವುದು, ನಿನ್ನನ್ನೇ ಬೇಡುವುದು
ನೆನಪು ಇಬ್ಬನಿಯಂತೆ ತೋಯ್ವ ಬಿರುಕು!

ಎದೆಯೊಳಗೆ ಕೆತ್ತಿಲ್ಲವಾದರೂ ಬಲು ಹೆಸರು
ಮರೆತಿಲ್ಲ ಗೆರೆಗಳನು,ಕೊರೆದವರನು
ಅಂತಹಾ ಗೀಚುಗಳ ಮತ್ತೆ ಫಳಫಳ ಹೊಳೆಸಿ
ಹಾಡಲಾರೆನು ನೋವ ಕತೆಗಳನ್ನು.

ಸೋತೆನೆಂದರೂ ಸರಿಯೆ, ಮತ್ತೇನೂ ಹೇಳೆನು
ಗೆದ್ದೆನೆಂದಾದರೂ ಮಾತು ಬೇಡ,
ಹೀಗೆ ನೋಡುತಲಿರುವೆ ಶಶಿಯ ಕಾಯುತಲಿರುವೆ
ಬರುವನೆಂದಾದರೂ ಸರಿಸಿ ಮೋಡ!

ನಿನ್ನ ನೆನೆದರೆ ಸಾಕು ಈಗೀಗ ನನ್ನೊಳಗೆ
ಹರಿಯುವುದು ಹೊಸತನದ ಒಲವ ನಡಿಗೆ!
ಅದನೆ ಪೋಷಿಸುತಿರಲಿ ಅದನೆ ಬೆಳೆಸುತ ಬರಲಿ
ನಿನ್ನೊಲವೆ ಹರಿಯಲೆನ್ನಾತ್ಮ ಗುಡಿಗೆ.

5 comments:

Badarinath Palavalli said...

ಪುಳಕವೇ ಮೈ ಹೊದ್ದು ಕವನವಾದರೆ ಅದು ಹೀಗೇ ಅಕ್ಷರವಾಗುತ್ತದೆ.

ಕವಿಯು ಓದುಗನ ತಂತಿಗಳನೂ ಮೀಟ ಬಲ್ಲವನಾದರೆ ಮಾತ್ರ ಕವನಕ್ಕೂ ಸಾರ್ಥಕ್ಯ. ಻ದು ಈ ಕವನದ ವೈಶಿಷ್ಯ. :)

ಚಿನ್ಮಯ ಭಟ್ said...

ವಾಹ್..
ನೀವು ಸರಳ ಶಬ್ಧಗಳಲ್ಲಿ ಕಟ್ಟಿಹಾಕುವ ಭಾವವೇ ಸುಂದರ..
ಇಷ್ಟವಾಯ್ತು...
ಚಂದಿರನ ಕಾಯುತಿರುವೆ ಮೋಡವ ಸರಿಸಿ...ಇಷ್ಟವಾಯ್ತು...
ಹಾಂ ಹರಿಯಲೆನ್ನಾತ್ಮ ಅಂದ್ರೆ ಏನು???ಗೊತ್ತಾಗ್ಲಿಲ್ಲ..
ಬರೆಯುತ್ತಿರಿ..
ನಮಸ್ತೆ..

ಸಂಧ್ಯಾ ಶ್ರೀಧರ್ ಭಟ್ said...

ಎದೆಯೊಳಗೆ ಕೆತ್ತಿಲ್ಲವಾದರೂ ಬಲು ಹೆಸರು
ಮರೆತಿಲ್ಲ ಗೆರೆಗಳನು,ಕೊರೆದವರನು
ಅಂತಹಾ ಗೀಚುಗಳ ಮತ್ತೆ ಫಳಫಳ ಹೊಳೆಸಿ
ಹಾಡಲಾರೆನು ನೋವ ಕತೆಗಳನ್ನು.
.....
sooooper ..saalugalu...

ಶ್ರೀವತ್ಸ ಕಂಚೀಮನೆ. said...

ಚಂದದ ಸಾಲುಗಳು...

sunaath said...

Hats off!