Sunday, February 8, 2015

ಕಾವು!

ಒಂದೆರಡು ದಿನವಿದ್ದು ಹೋಗಬಾರದು ಏಕೆ
ಮೊನ್ನೆಯೋ ಮಳೆಗಾಲ;ಬಹಳ ನೀರು
ಬೆಂಬಿಡದೆ ಕಾಡುತಿದೆ ಇಂದು ವಿರಹದ ಬೇಗೆ
ನೀಡಬಾರದೆ ಚೂರು ಒಲವ ಹಸಿರು.

ಸುಳಿವುದದು ಬಿರುಗಾಳಿ ಮೈಗೆ ಕಿಚ್ಚನು ಹಚ್ಚಿ
ಬೆಂಕಿಯಾಡುವ ಮನವು ಹುಚ್ಚಾಗಿದೆ
ತೆಗಳುವುದು ಸರಿಯೇನು? ಈ ಬಿಸಿಯ ಗಾಳಿಯನು
ನಿನ್ನೊಲವ ಕಾಯುವುದು ಹೆಚ್ಚಾಗಿದೆ.

ಯಾವುದೋ ಧಾಟಿಯಲಿ ಯಾವುದೋ ರಾಗದಲಿ
ಹಾಡುವಾತನ ಕೊರಳು ದಣಿದುಹೋಗಿ
ನಿನ್ನ ಪ್ರೀತಿಯ ಸ್ವಲ್ಪ ಪಡೆದು ಬಾ ಎನುತಲಿದೆ
ಬರೆವ ಪದಗಳ ಸಾಲು ಮರವೆಯಾಗಿ

ನಾಳೆದಿನ ಮಧ್ಯಾಹ್ನ ಕೆಂಪುಹೂಗಳ ಬನದಿ
ನಿನ್ನ ಕರೆಯಲು ಬರುವೆ, ನೀನು ಬರುವೆ
ಎಂದೆನುವ ಮಾತಿನಲಿ ಇಷ್ಟು ದಿನ ಕಾದಿರುವೆ
ಇನ್ನೆರಡು ದಿನವೇನು? ಕಾಯುತಿರುವೆ.

2 comments:

Badarinath Palavalli said...

ಬೇಸಿಗೆ ಅಪ್ಪುಗೆಯ ವಿರೋಧಿ!

sunaath said...

ಒಲವಿನಾ ಕನ್ಯೆಯು ಬರದೆ ಹೋದರು ಏನು?
ಕಾವ್ಯಕನ್ಯೆಯು ಸುಳಿಯುತಿಹಳು ಇಲ್ಲಿ!
ಅವಳನ್ನೆ ಒಪ್ಪಿಕೊ, ಅವಳನ್ನೆ ಅಪ್ಪಿಕೊ,
ಜಾಜಿ ಮಲ್ಲಿಗೆ ಕಂಪು ಹರಡುವಲ್ಲಿ!