Sunday, February 8, 2015

ಸಾವಿನ ದಿನ; ಆ ನಾಲ್ಕು ಜನ

ನಾಲ್ಕು ಜನರಿಗೆ ಹೀಗೆ ಕಾಯಿಲೆಯು ಬಂತು

ಮುಂದೆ ಇದ್ದವನೊಬ್ಬ ಹಳೆಪಾತ್ರೆ ವ್ಯಾಪಾರಿ
ನನ್ನ ಬಳಿಯಲ್ಲಿಷ್ಟು ಸಾಲಮಾಡಿ
ಕೊನೆಗೊಂದು ದಿನಬಂದು ನಷ್ಟವಾದುದ ಹೇಳಿ
ಜೊತೆಯಾದ ಬದುಕಲ್ಲಿ ಪುಷ್ಟವಾಗಿ

ಎಡಬದಿಯ ಸಣಕಲನು ನನ್ನ ಓರಗೆಯವನು
ಎದುರಬೆಂಚಿನ ಹುಡುಗ, ಒಳ್ಳೆಯವನು
ಸಣ್ಣಬೆನ್ನಿನ ಗೆಳೆಯ ಕಂಪೆನಿಗೆ ಬೆನ್ನೆಲುಬು
ಖಾರವಿಲ್ಲದ ಊಟ ಸವಿಯುವವನು

ಹಿಂದೆ ಬಂದವನೊಬ್ಬ ನನ್ನ ಆಸರೆಯಲ್ಲಿ
ನನಗಾಗಿ ನನ್ನಿಂದ ಬೆಳೆದ ಹುಡುಗ
ಯಾವುದೋ ಊರಿಂದ ಬಂದ ಒಳ್ಳೆಯ ಅಕ್ಕಿ
ನನ್ನ ಬಿಸಿನೀರಿನಲಿ ಬೆಂದ ಅನ್ನ.

ಅವನ ಜೊತೆ ನಡೆಯುವವ ನನ್ನ ಅಣಕಿಸುವಾತ
ಅವನ ತೊಗಲಿಗೆ ಸರಿಯೆ ನನ್ನ ಚರ್ಮ?
ನಾನಡೆವ ದಾರಿಯಲಿ ಬಹಳ ತಡವಾಗಿರುವ
ಅವನ ದಾರಿಯ ಕಾವುದೆಂತ ಖರ್ಮ

ಇಂತ ನಾಲ್ವರ ಜೊತೆಗೆ ನಾನು ಹೋಗುವ ಕನಸು
ಬಲುಸಮಯದಿಂದೀಚೆ ಎದೆಯೊಳಿತ್ತು
ನಾನು ಹೋಗುವ ದಾರಿ, ನಡೆಯುವರ ಕೈಕಾಲು
ನಾನಿರುವ ತನಕವೂ ಗಟ್ಟಿಯಿತ್ತು.

ನಾಲ್ಕು ಜನರಿಗೆ ಹೀಗೆ ಕಾಯಿಲೆಯು ಬಂತು
ನಾನು ಉಳಿದಿದ್ದೇನೆ ಹೀಗೆ ಸತ್ತು!

2 comments:

Badarinath Palavalli said...

ನಾನಿರುವವರೆಗೂ ಗಟ್ಟಿಯಿದ್ದ ಆ ನಾಲ್ವರೂ ಖಾಯಿಲೆ ಬಿದ್ದದ್ದು ಕವನದಾಳದ ಬದುಕಿನ ತಿರುವುಗಳನ್ನೂ, ತಾಳಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಹಾಗೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಬೋಧಿಸುತ್ತಿದೆ.

sunaath said...

ಅದ್ಭುತ ಕವನ.