Tuesday, December 25, 2012

ಪ್ರೀತಿಯೆಂದರೆ,..


"ನನ್ನ ಒಲವಿನ ಮಾತು ಕೇಳಿ ನಸುನಕ್ಕಳು
ನಿನಗೂ ಪ್ರೀತಿಯೆ ಹುಡುಗ? ಎಂದಳವಳು!
ಏನೆಂದು ಉತ್ತರವ ಬಯಸಿದಳೋ ಅವಳು
ಪ್ರೀತಿಯೆಂದರೆ ಕನಸು ಎಂದೆ ನಾನು!

ಕನಸು ಎಂದರೆ ಸಾಕೆ, ಕನಸೊಳೇತಕೆ ಇರುವೆ
ಕನಸಲ್ಲಿ ಬರುವೆನೇ? ಕೇಳ್ದಳಾಕೆ!
ಕನಸಿನೊಳು ಕಂಡಿಲ್ಲ, ಕನಸೆಂದುಕೊಂಡಿಹೆನು
ಎನುವ ಉತ್ತರ ಕೊಟ್ಟೆ! ಮುನಿದಳಾಕೆ.

ಸುಮ್ಮನಿರು ಮೌನದಲಿ, ನಾನು ಮಾತಾಡೆನು
ಎನುವ ಬಿಂಕದಿ ಅವಳು ನೋಡಲೆನ್ನ.
ಕಣ್ಣುಗಳ ನೋಡುವುದು, ಸುಮ್ಮನೇ ಕೆಣಕುವುದು
ಮತ್ತೆ ಮಾತಿಗೆಳಸುವುದು; ಏನು ಚೆನ್ನ!

ನಾಳೆ ಬರುವೆನು ಎಂಬ ಮಾತಿನೊಳಗಡೆ ಬೇನೆ
ಬೇಡ ಹೋಗದಿರೆಂಬ ಭಾವ ಮನದಿ
ನಿನ್ನಲ್ಲೇ ಇರುವೆನು ಎಂದೆನುವ ಧನ್ಯತೆಯು
ಒಲವು ಹರಿಸುವ ಅವಳೆ ಜೀವದನದಿ."

Wednesday, December 19, 2012

ಸೀತೆಯ ಮಾತು.

ಜನಕನಾ ಮನೆಬಿಲ್ಲು ತುಕ್ಕು ಹಿಡಿಯಲಿ ಎಂದು
ಹರಸಿದ್ದ ಗಳಿಗೆಯನು ನೆನೆದುಕೊಂಡು
ಅದ್ವಿತೀಯನ ಹಿಂದೆ ಕಾಡು ಸೇರಿದ ಜೊತೆಗೆ
ಚಿನ್ನಬಣ್ಣ; ಸೆಳೆತದಲಿ ಕನಸನುಂಡು.

ಬೆಳಕಿದ್ದ ಕಡೆಗೆಲ್ಲ, ಮೋಸವಾಗದು ಎಂಬ
ತನ್ನಾತ್ಮವಿಶ್ವಾಸ ಸುಳ್ಳು ಎಂದು.
ಚಿನ್ನದಾ ಜಿಂಕೆಯನು ಕಾಣುತ್ತ ಮನಸೆಳೆದು
ಬಣ್ಣಗಾರಿಕೆ ಸಾಕು, ಸುಳಿಯೊಳಂದು.

ರಾವಣನ ನೋವಿಗೆ ನಾನೆಂತು ಔಷಧವು?
ಕಾಮುಕರಿಗೆ ಬೇಕೆ ಕಾಳುಮೆಣಸು?
ಜೀರ್ಣವಾದೀತು ಉರಿ; ರಾಮಬಾಣದ ಹೆಗಲು
ಬೆಂದಿದ್ದು ಅಪರಂಜಿ ರಾಮಕನಸು.

ವಸ್ತ್ರದಲಿ ಒಂದೆಳೆಯು ಹೊರಗೆ ಬಂದರೆ ಈಗ
ಎಳೆಯನ್ನು ಕತ್ತರಿಸಿ ಬಿಸುಡಬೇಕು,
ರಾಜಾರಾಮನು ತಾನು ವಸ್ತ್ರಸುಡುವವನಲ್ಲ!
ವಿಧಿವಿಲಾಸವಿದೆಂದು ಸಹಿಸಬೇಕು.
--
ಕೋದಂಡರಾಮನ ನೋಡಬಂದಳು ಸೀತೆ
ಅವನ ಕೈಯೊಳಗಿದ್ದ ದಂಡ ಕಂಡು ಮರುಗಿ;
ಇನ್ನು ಪ್ರೇಮದ ದಾನ ನಾನು ಕೇಳುವುದಿಲ್ಲ,
ಭೂಮಿ ಸೇರಿದಳವಳು; ಮಣ್ಣಿನಣುಗಿ!

೧೯-೧೨-೧೨

Tuesday, December 18, 2012

ಈ ಕೆರೆಯ ದಂಡೆಯಲಿ ಹೀಗೆ ಕುಳಿತಿರುವಾಗ


ಈ ಕೆರೆಯ ದಂಡೆಯಲಿ ಹೀಗೆ ಕುಳಿತಿರುವಾಗ
ಹಳೆಯ ದಿನಗಳ ನೆನಪು ಹೀಗೆ ಬಂದು,
ಏನೋ ಹೇಳಲು ನೀನು ಕಾತರಿಸಿ ಕರೆದಂತೆ
ಅಂದು ನೀ ಬಂದಿದ್ದೆ ಹೇಳಲೆಂದು.

ನಿನ್ನ ಹೆಜ್ಜೆಯಲೆಲ್ಲ ಇಣುಕುತಿದ್ದವು ಭಾರ
ಹೃದಯದೊಳಗಿನ ಭಾವ; ಮಾತು ಹುದುಗಿ!
ಮಾತಿನಲಿ ಹೇಳದೆಯೆ ಆಗ ಅಡಗಿದ ದನಿಯ
ಕಣ್ಣುಗಳು ಹೇಳಿತ್ತು! ಹೌದೆ ಹುಡುಗಿ?

ಒಲವ ಹೇಳದೆ ನೀನು ಹೀಗೆಲ್ಲ ಮರುಗಿದರೆ
ನನಗೇಕೋ ನೋವಿತ್ತು; ಹೇಳದಾದೆ!
ನೀನೆ ಹೇಳಿದ ಮೇಲೆ ಇನ್ನೇನು ಸಂಕೋಚ
ಕಾಯುವಿಕೆ, ಬೇಸರವ ಮರೆತುಹೋದೆ.

ಈಗ ಧನ್ಯತೆ ತುಂಬಿ ನಿನ್ನ ಸಾಮೀಪ್ಯದಲಿ
ಒಲವು ಆರದೆ ಇರಲಿ, ಬತ್ತದಿರಲಿ
ಎತ್ತರದ ಬದುಕಿಗೆ ನಿನ್ನ ಕಾಣ್ಕೆಯು ಜೊತೆಗೆ,
ನಿನ್ನ ಒಲವಿಗೆ ನನ್ನ ಬಾಳು ಇರಲಿ.

೧೭-೧೨-೧೨

Sunday, December 16, 2012

ಅವಳಿಗಾಗಿ.

ನಿನಗಾಗಿ ತಂದಂತ ಈ ಗುಲಾಬಿಯ ಹೂವ
ನೀನು ಹೆರಳೊಳಗಿಟ್ಟು ನಗಿಸಬೇಕು
ಯಾಕೆ ಮಲ್ಲಿಗೆ ತರದೆ, ಈ ಗುಲಾಬಿಯ ತಂದೆ?
ಎಂದೆನ್ನ ಕಾರಣವ ಕೇಳಬೇಕು.

ನೀ ಕೇಳದಿದ್ದರೂ ನಾನೆ ಹೇಳುವೆ ಗೆಳತಿ
ಮಲ್ಲಿಗೆಯ ತರದಿದ್ದ ಕಾರಣವನು
ಈ ಗುಲಾಬಿಯ ಕೆಂಪು ನಿನ್ನ ಕೆನ್ನೆಯ ಹೊಳಪು
ಬಿಳಿಯ ಮಲ್ಲಿಗೆಯಲ್ಲಿ ಕಂಡಿತೇನು?

ಮಲ್ಲಿಗೆಯ ಕೊಯ್ದು ನಾ ಮಾಲೆಯನು ಕಟ್ಟುತಲಿ
ನಿನಗಾಗಿ ಕೊಡಲೆಂದು ದೂರದಿಂದ
ಬಂದಾಗ ತಡವಾಗಿ; ನೀ ಹೀಗೆ ನುಡಿದಿದ್ದೆ
ಪ್ರಿಯೆಯ ಕಾಯಿಸುವುದೇನು ಚಂದ?

ಹೀಗೆಂದು ತಂದಿಹೆನು ಈ ಗುಲಾಬಿಯ ಚೆಲುವೆ
ನಾನಾಗೆ ತೊಡಿಸಲೇ ನಿನ್ನ ಮುಡಿಗೆ?
ಮಲ್ಲಿಗೆಯ ಮನಸವಳೆ, ಈ ಗುಲಾಬಿಯೆ ಚಂದ
ಯಾವ ಉಡುಗೊರೆ ಕೊಡುವೆ ನನ್ನ ನುಡಿಗೆ?


೧೬-೧೨-೨೦೧೨

ಚಿತ್ರಮಾಡಿಕೊಟ್ಟವರು: ವೆಂಕಟ್ ಕೋಟೂರು
.ಇನ್ನೊಂದು ಫೇಸ್ಬುಕ್ಕಿನ ಮಿತ್ರರಿಂದ.

Thursday, December 13, 2012

ಮಲ್ಲಿಗೆಯವಳು


ಮಲ್ಲಿಗೆಯ ತಂದವಳು, ಮಾತಿಂಗೆ ಸಿಕ್ಕವಳು
ಮರೆವ ನಟನವನಾಡಿ ಹೋದರೇನು?
ಹಿಂತಿರುಗಿ ನೋಡುತಲೆ ಕಿರುನಗೆಯ ಬೀರಿದಳು
ಕಣ್ಣುಗಳು ದೋಣಿಯಲಿ ಸಿಕ್ಕ ಮೀನು!

ನಡೆವ ದಾರಿಯ ಘಮಲು ಎಲ್ಲ ನಿಜ ನುಡಿದೀತು
ನೀ ಕೊಟ್ಟ, ನಾ ಪಡೆದ ಮಲ್ಲೆಗಳನು.
ತಲುಪಲಾರದೆ ಹೋದ ಸಂಭ್ರಮದ ಉತ್ತುಂಗ
ಕಟ್ಟಲಾರದೆ ಹೋದ ಮಾಲೆಗಳನು.

ಮಲ್ಲಿಗೆಯ ತಂದವಳು ಬಂದೆ ಬರುವಳು ನಾಳೆ
ಹೊಸಹೂವ ಮತ್ತೊಮ್ಮೆ ಬಿಡಿಸಬೇಕು
ನೀವಾದರೂ ಹೇಳಿ; ಮಲ್ಲೆ ಹೂವಿಲ್ಲದೆಯೆ
ಬಾಳುವುದು ಹೇಗೆಂದು ಕಲಿಸಬೇಕು.

೧೩-೧೨-೧೨
ಫೋಟೋ : ಗೂಗಲ್ ಮಹಾಶಯನದ್ದು.

Sunday, December 2, 2012

ಚಂದ್ರ-ಚಂದ್ರಿಕೆ


ಸಿಗ್ಗಿನಲಿ ಬಂದನದೋ ಚಂದ್ರ ಆಗಸದಲ್ಲಿ
ನಿನ್ನ ಮೊಗದಲಿ ಕೆಂಪು ಏರಿತೇನು?
ತಂಗದಿರ ಕಿರಣಗಳ ಕಂಪು ಮೈಮನವೇರೆ
ಸಿಂಗರದ ನತ್ತಾಗಿ ಹೊಳೆಯಿತೇನು?

ಆ ತಾರೆ ಅರಿಷಿಣದ ಲೇಪನವ ಮಾಡಿದಳೆ?
ಚಂದ್ರ ತುಂಬಿದ ಬಣ್ಣದೋಕುಳಿಯಲಿ
ಪ್ರೀತಿ ಹೆಚ್ಚಾದಂತೆ ಚಂದ್ರನೋ ಬಹುಬಿರುಸು!
ಹಿಗ್ಗಿ ನಡೆಯುವ ಮುಗಿಲ ಸಾಲುಗಳಲಿ

ಕಣ್ಣಂಚು ಜಿನುಗಿತೆ, ಕಾಣಿಸದು ಕತ್ತಲೆಗೆ
ಇನ್ನೆಂದು ಬಹನವನು? ಕೇಳು ನೀನು.
ಇಷ್ಟೊಂದು ಬೇಯುವೆಯೆ ಎನ್ನುತಲಿ ಕನಿಕರದಿ
ಇದ್ದು ಹೋದಾನವನು ಸಂಜೆಗೂನು!

ತೀರದದು ಆಸೆಗಳು, ಮಿತಿಮೀರಿ ಸಾಗುವುದು
ಉಬ್ಬರವು ಸಾಗರದಿ ಚಂದ್ರ ಬರಲು!
ನಿಶೆಯು ಕಳೆದಂತೆಲ್ಲಾ, ನಿದ್ದೆಗಣ್ಣಲಿ ಉರಿಯೆ
ಶಾಂತಾವಾದೀತು ಇದು ಮೊರೆವ ಕಡಲು.

೨-೧೨-೧೨

ತೀರ್ಥಹಳ್ಳಿಯ ಸಿಗರೇಟು


ಮಣಿಪಾಲದಿಂದ ಶಿವಮೊಗ್ಗೆಗೆ
ಬರುವಾಗೊಮ್ಮೆ ಬ್ರೇಕು
ತೀರ್ಥಹಳ್ಳಿಯಲಿ.
ಆಗುಂಬೆಯ ಮುಕ್ಕಾಲು ನೋವಿಗೆ
ಬಸ್ಸಿನ ಕಾಲುನೋವು ಸೇರಿ
ಪರಿಪೂರ್ಣ ಒಂದು.

ಸಿಗರೇಟು ಖಂಡಿತ ಬೇಡವಿತ್ತು
ಎನ್ನುತ್ತಾ ಖರೀದಿಸುವಾಗ
ಬಸ್ಸು ಹೊರಟಿದ್ದು ಸರಿ, ನನಗಲ್ಲ, ಡೈವರನಿಗೆ.
ಬೆಂಕಿ ಹತ್ತಿಸಲಾರದೆ
ಜೇಬಿಗೆ ತುರುಕಿ ಬಸ್ಸಲ್ಲೆ ಕುಳಿತೆ.

ಸಿಗರೇಟು ಒಳ್ಳೆಯದಲ್ಲ ಎಂಬುದು ಅವಳ ವಾದ.
ಬೆಂಕಿ ಒಳ್ಳೆಯದಲ್ಲ ಎನ್ನುವುದು ನನ್ನ ವಾದ.
ಕೊನೆಗೂ ತೀರ್ಥಹಳ್ಳಿಯ ಸಿಗರೇಟು
ಇನ್ನೂ ಹಸಿಯಾಗಿಯೇ ಇದ್ದು
ಹಾನಿಕಾರಕವಲ್ಲ! ನಿರ್ವಿವಾದ.

೨-೧೨-೧೨

Monday, November 26, 2012

ಇನ್ನೆಷ್ಟು ಕಾಲ ಕಾಯಬೇಕೇ?


ಇನ್ನೆಷ್ಟು ಕಾಲ ಕಾಯಬೇಕೇ
ಜೊತೆಗೆ ನಡೆಯಲು?
ಒಂಟಿಯಾಗಿ ಸವೆಯಬೇಕೇ
ನನ್ನ ದಿನಗಳು?

ಉಳಿಸಿ ಹೋದ ಮಾತುಗಳಲಿ
ಕತೆಯು ಬದುಕಿದೆ
ಮೌನ ಆಳೋ ಸಮಯದಲ್ಲಿ
ನೋವು ಕೆದಕಿದೆ.

ಎಲ್ಲೊ ಅರಳಿ ಎಲ್ಲೊ ಹೊರಳಿ
ನಗುವು ಬಳಲಿದೆ
ಇನ್ನೂ ಕಾಲ ಒದಗಲಿಲ್ಲ
ಎನುತ ಒಣಗಿದೆ.

ಕಾಯುವುದೋ ನೋಯುವುದೋ
ಏನೋ ಅರಿಯೆನು
ನಿನ್ನ ಒಳಗೇ ಹರಿಯುತಿರುವೆ
ಎಂದುಕೊಳುವೆನು.

ಚಿತಕೃಪೆ : ವೆಂಕಟ್ ಕೋಟೂರ್
(ಒಂದೇ ಹೆಜ್ಜೆಯ ಗುರುತು)

Friday, November 9, 2012

ಆಲದ ಮರ ಹೇಳಿದ ಕತೆ.


"ನಿನ್ನೆ ಹಂಪಿಯ ಬಳಿಯ ರಸ್ತೆಯಲ್ಲಿ
ಆಲದಾ ಮರದ ಬಳಿ ಜೊಂಪಿನಲ್ಲಿ.
ಬಿಳಲು ಹೇಳುವ ಕತೆಯ ಕೇಳುತಿದ್ದೆ
ಮೋಹ ಬಿಟ್ಟೆನು ಅಲ್ಲೆ, ಬೆವರಿ ಒದ್ದೆ!

ನನಗೋ ವಯಸಿಷ್ಟು ಹೇಳಲಾರೆ
ಬುಡದಲ್ಲಿ ಏನುಂಟೋ ತಿಳಿಯಲಾರೆ
ಜೊತೆಗೆ ಬಂದವರೆಲ್ಲ ಹೋದರೆಂದೋ!
ನಾನು ನಿಂತಿದ್ದೇನೆ, ಸಾಯಲಾರೆನೆಂದೋ?

ಈನಾಡನಾಳಿದವ ಇಲ್ಲೆ ಇದ್ದ
ಬಾಲ್ಯದಲಿ ಇದೆ ಬಿಳಲ ಎಳೆಯುತಿದ್ದ
ಕತ್ತಿ ಕೈಯ್ಯಲಿ ಕರೆಯೆ, ನನ್ನ ಬಿಟ್ಟೋಡುತಲೆ
ಬಂದ ಕಣ್ಣೀರನ್ನು ಒರೆಸಿ ನಡೆದ.

ಹತ್ತೋ ಹದಿನೈದೋ ಅವಗೆ, ರಾಜ್ಯವಿತ್ತು
ಹೂ, ಫಲವ ಬಿಡದುದಕೆ ಬಂತು ಕುತ್ತು!
ಸುಭೀಕ್ಷವೆಂದದರ ಕರೆದರೆಲ್ಲಾ
ನಾನೆಂತೋ ಬದುಕುಳಿದೆ! ಸಾಯಲಿಲ್ಲ!!

ಹೀಗಿರಲು ಒಂದೊಮ್ಮೆ ಯುದ್ಧವಂತೆ
ಇಲ್ಲಿಗೂ ಅಲ್ಲಿಗೂ ಕತ್ತಿ ಬಾಣ ಸಂತೆ
ಕೋಟೆ ಒಡೆದರು;ಇರಲಿಲ್ಲವಂತೆ ಸಂಧಿ
ಉಳಿದದ್ದು ಬರಿ ಅಂತಃಪುರದ ಮಂದಿ.

ಏನಾಯ್ತು ಗೊತ್ತೇನು ಬೆಳಗು ಜಾವದಲ್ಲಿ
ಕತ್ತಿಯೇಟಿಗೆ ಬಿದ್ದ ಕೊರಳು ಇಲ್ಲಿ,
ನೀ ಜೋತು ಬಿದ್ದಂತ ಬಿಳಲು ಗೂಡು
ಇನ್ನು ನೆತ್ತರು ಕಲೆಯು ಇಹುದು ನೋಡು.

ಹೀಗೆ ಹೇಳಿದ ಕತೆಯ ಕೇಳಿದವರು
ಕಡಿದರೆನ್ನಯ ಬಿಳಲು, ಕ್ರಾಂತಿಯವರು
ನೀನು ಕಡಿವೆಯ ಹೇಳು ನನ್ನ ಬಿಳಲು?
ಬಿಳಿಯ ಮೇಣವೆ ಸಾಕ್ಷಿಗೆನ್ನ ಅಳಲು!"


ಕವನವನ್ನು ಮೀರಿದ ಚಿತ್ರ: ವೆಂಕಟ್ ಕೋಟೂರು.
http://www.facebook.com/venkat.raj.184

Friday, November 2, 2012

ಹನಿಗವನಗಳು- ಒಂದು


"ಒಂದಿಷ್ಟು ನಗೆಯೆನಗೆ ಬಿಟ್ಟು ಹೋಗೇ ಗೆಳತಿ
ಸತ್ತಾಗ ಕಣ್ಣು ನೋಡದು, ಕಿವಿಯೂ ಇರದು
ಬರಿಯ ಎಲುಬು ಮತ್ತೆ ಹಲ್ಲುಗಳು ಉಳಿದೀತು!"
-----------------------------------------------------
"ಹಾರಿ ಹೋಯಿತು ಹಕ್ಕಿ
ಕೊಂಬೆಯ ಮೇಲೆ ಹಕ್ಕಿಯ ಗುರುತು ಇರಲಿಲ್ಲ.
ಮಂಗ ನೆಗೆಯಿತು,
ಕೊಂಬೆ ಮುರಿದು ತಣಿಯಿತು."
-----------------------------------------------------
ಕನ್ನಡಕ್ಕೆಂದು ನೀ ಕೊಲೆ ಮಾಡಬೇಕಿಲ್ಲ
ಕನ್ನಡವ ಕಂಡೊಡನೆ ನಲಿದಾಡು ಸಾಕು.
ಕನ್ನಡದಿ ಮಾತಾಡು, ಕನ್ನಡದಿ ನೀನಾಡು
ಕನ್ನಡವನುಳಿಸಲು ಬೇರೇನು ಬೇಕು?
-----------------------------------------------------
"ಯಾವತ್ತೂ ಹಿತವಾಗಿ
ರೋಮಾಂಚಿತನನ್ನಾಗಿಸಿ
ನಗುತ್ತಾ ಸ್ವಾಗತಿಸುವವಳು ಒಬ್ಬಳೇ
ನಿದ್ರಾದೇವಿ."
-----------------------------------------------------
"ಪ್ರತಿಪುಟದಲ್ಲೂ ಒಂದು
ವಿರಾಮ ಬೇಕೆಂದು ಬಯಸುತ್ತೇನೆ.
ವಿರಾಮದ ಮೊದಲು ಬರೆಯುವುದೇನು?
ತಿಳಿದಿಲ್ಲ!."
-----------------------------------------------------
"ಕೆಲವು ಬಣ್ಣಗಳು ಹೀಗೇ
ಗಾಢವಾಗುತ್ತಾ ಕಾಡುತ್ತವೆ.
ಕೊನೆಗೆ
ಕಪ್ಪು ಎಂದೇ ಅನಿಸುತ್ತದೆ."
-----------------------------------------------------
"ಸೋತು ಬರೆಯುವ ಚಟ ನಿನಗೆ
ಎಂದು ಜರೆಯದಿರು
ಗೆದ್ದಾಗ ಸಂಭ್ರಮಿಸುತ್ತೇನೆ
ಬರೆಯಲಾಗುವುದಿಲ್ಲ."
-----------------------------------------------------
"ಬರೆದರೆ ನೋವು ಮಾಯವಾಗುತ್ತದೆ ಎಂದು
ದೊಡ್ಡ ಅಕ್ಷರದಲ್ಲಿ ನೋವು ಎಂದು ಬರೆದ.
ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಬಿದ್ದು
ಅಕ್ಷರ ಅಳಿಸಿದಂತೆ ಭಾಸ."
-----------------------------------------------------
"ಸಖೀ,
ನೀ ಬಂದ ದಾರಿ ಬೇರೆ
ನನ್ನ ದಾರಿಯೂ ಬೇರೆ
ಎಂದಾದರೂ ದಾರಿಗಳು ಸೇರಿದರೆ
ಜೊತೆಯಾಗಿ ಸಾಗೋಣ
ಇಲ್ಲವೇ
ಹೀಗೆಯೇ ಹೋಗೋಣ."
-----------------------------------------------------
"ಹತ್ತು ಕಡೆ ಕಣ್ಣು ಹಾಯಿಸಿದರೂ
ನಗುವವರು ಸಿಕ್ಕಿಲ್ಲ.
ನಾನು ನಗುತ್ತಿದ್ದೆ
ನಗದವರೆಲ್ಲ ಸೇರಿಕೊಂಡು
ನನ್ನನ್ನು ಹುಚ್ಚ ಎಂದರು."
-----------------------------------------------------
"ಚುಕ್ಕಿಯಿಟ್ಟದ್ದನ್ನು
ನೇರ ನೋಡಲಿಲ್ಲ
ಬಿದ್ದು, ವಿಮರ್ಶೆ ಮಾಡುತ್ತಾ ನೋಡಿದೆ
ಅದುವೇ
ನಮ್ಮಿಬ್ಬರ ನಡುವೆ ಗೆರೆಯಂತಿದೆ ಈಗ."
-----------------------------------------------------
"ನಿನ್ನ ನೆನೆಯುತ್ತಾ
ನಿದ್ದೆಗೆ ಜಾರುವಾಸೆ ನನ್ನದು
ಎಚ್ಚರವಾಗದಿರಲಿ ನಾಳೆ
ಎಂದು ಹಾರೈಸಿಬಿಡು."
-----------------------------------------------------
"ಹುಣ್ಣಿಮೆಯನ್ನು ಅವ ದ್ವೇಷಿಸುತ್ತಾ ಕಳೆದ!
ಕಳೆದ ಹುಡುಗಿಯ ಮುಖ
ನೆನಪಾಗುವುದೆಂದು,
ಚಂದ್ರನನ್ನು ಪೂರ್ಣ ನೋಡಲಾರೆ ಎಂದ."
-----------------------------------------------------
"ನಿದ್ದೆಗೆ ಜಾರುವಾಗ ಮತ್ತು ಬೆಳಗ್ಗೆ ಏಳುವಾಗಷ್ಟೇ
ಕೆಂಪಾಗಲು ನಾ ಸೂರ್ಯನಲ್ಲ!
ನೋವಿಗೂ ನಲಿವಿಗೂ ಕೆಂಪಾದೀತು ಕಣ್ಣು."
-----------------------------------------------------
"ಸಂಪಿಗೆ ಗಿಡ ನೆಟ್ಟದ್ದಕ್ಕೆ ಹೂವಾದೀತು
ಮಲ್ಲಿಗೆ ಬಳ್ಳಿ ಊರಿದ್ದಕ್ಕೆ ಹೂವಾದೀತು
ನಿನ್ನೊಲವಿನ ದಾರಿಯಲ್ಲೇ ಕಾದಿದ್ದೇನೆ
ಖಂಡಿತ ಬರದಿದ್ದರೆ ನೋವಾದೀತು!"
-----------------------------------------------------
"ಕಣ್ಣು ತೋರಿದ್ದಕ್ಕೆಲ್ಲಾ ಸರಿ ಎನ್ನಲಾರೆ!
ಸುಣ್ಣ ಕಂಡಿತು; ಹಚ್ಚಿದೆ
ಹೆಣ್ಣು ಕಂಡಿತು; ಮೆಚ್ಚಿದೆ
ಮಣ್ಣು ಕಂಡಿತು ಈಗ ಬೆಚ್ಚಿದ್ದೇನೆ."
-----------------------------------------------------
"ನಿನ್ನ ನೆನಪುಗಳೆಲ್ಲ ನನಗೆ ಗೌಣ
ಎಂದಾಗ ಕೋಪಿಸಬೇಡ,
ಲೆಕ್ಕಿಸದಿದ್ದಾಗಲೇ
ನೋವು ವಿಪರೀತ ಕಣಾ!"
-----------------------------------------------------
"ಮಳೆ ಹನಿ ಬಂತೆಂದು ಖುಷಿಗೊಂಡು
ತಲೆ ಎತ್ತಿದ!
ಮಳೆ ನಿಂತಿತು,
ತಲೆ ತಗ್ಗಿಸಿದ."
-----------------------------------------------------
"ಹಸಿ ಹಸಿ ಗಾಯ
ಕೆರೆದ ಮೇಲೆ
ನಾಳೆ,
ಪುನಃ ತೊಗಟೆ ಕೆರೆಯಬೇಕು
ಎನ್ನುವ ವಿಚಿತ್ರ ಸಮಾಧಾನ."
-----------------------------------------------------
"ಸಂಪೂರ್ಣ ಖಾಲಿಯಾಗಿದ್ದೇನೆ
ಬಂದು ತುಂಬಿಕೊಳ್ಳುವುದು.
ಏಕೆಂದರೆ, ಖಾಲಿಯಾದಾಗ
ನೋವು ತಬ್ಬಿಕೊಳ್ಳುವುದು."
-----------------------------------------------------
"ನಾನು ಕಬ್ಬನ್ನು ತಿಂದೆ
ಸಿಹಿಯಾಗುತ್ತಿದ್ದೇನೆ.
ಅಗಿದು ಉಗುಳಿದ ಸಿಪ್ಪೆ
ಮೂದಲಿಸುತ್ತಿದೆ
ನಾಳೆ ಒಣಗುತ್ತೇನೆಂದು."
-----------------------------------------------------
"ಶಿಕಾರಿಗೆ ಹೊರಟವನಿಗೆ ಸಿಕ್ಕಿದ್ದು
ಅವನದೇ ಪೂರ್ವಜರ ತಲೆಬುರುಡೆ
ಹಾಗೆಯೇ
ಬರೆದವನಿಗೆ ಸಿಕ್ಕಿದ್ದು
ಬೇರೆಯವರು ಬರೆದುದುದರಲ್ಲಿ
ಹೇಳಲಾಗದೆ ಉಳಿಸಿದ್ದು."
-----------------------------------------------------
"ಸಿಗರೇಟು ಸೇದಿದ,
ಕೆಮ್ಮಿದ,
ಉಗುಳಿದ.
ಎಂಜಲು ಹೃದಯದಾಕಾರದಲ್ಲಿ ಬಿದ್ದಿತ್ತು!"
-----------------------------------------------------
"ಬುಗುರಿ ಮರ ಕಂಡಾಗ,
ಬೆಳಗ್ಗೆ ನೋಡಿದ ಹುಡುಗಿಯ ನೆನಪು!
ಬುಗುರಿ ಮರದಲ್ಲೂ ಹಾಗೇ
ಬೆಳಗ್ಗಿನ ಹಳದಿ ಹೂ
ಸಂಜೆ ಕೆಂಪಾಗಿತ್ತು!"
-----------------------------------------------------
"ನೋವು ನಲಿವು ಬೇರೆಯಲ್ಲ
ನೋವನ್ನು ಬಿಡಿಸುತ್ತಾ ಹೋದಂತೆ ನಲಿವು
ಕಣ್ಣೀರನ್ನು ಒರಸುತ್ತಾ
ಮುಖಕೆ ಕನ್ನಡಿಯ ಹೊಳಪು!"
-----------------------------------------------------
"ನಿನ್ನನ್ನು ಎತ್ತರಿಸುತ್ತಾ ಸಾಗುವಾಗ
ನನ್ನ ನೆರಳು
ಉದ್ದವಾಗುತ್ತಿದೆಯೆಂದು ನಂಬಿಕೆ.
ನಾನಲ್ಲ ಉದ್ದವಾಗುವುದು,
ವಾಸ್ತವ."
-----------------------------------------------------
"ಅಮ್ಮಾ ಕತ್ತಲಾಯಿತು,
ಬೆಳಗ್ಗಿನ ತಂಪಿನ, ಮಧ್ಯಾಹ್ನದುರಿಯ, ಸಂಜೆಯ ಕೆಂಪಿನ
ಆಹಾರ
ಕತ್ತಲ ಹಸಿವೆಯಲ್ಲಿ ಸವೆದು ಹೋಯಿತು!
-ತಗೋ ಮಗನೇ
ತಿಂಗಳ ರೊಟ್ಟಿ."
-----------------------------------------------------
"ರಾಮನನ್ನು ಕಾಡಿಗಟ್ಟು
ರಾಜ್ಯವಾಳುವಾಸೆಯಿಟ್ಟು
ಎಂದ ಮಂಥರೆ
ಮಾತುಗಳನ್ನು ನಡೆಸಿದ್ದಕ್ಕೆ
ಭರತ ಖತಿಗೊಂಡು, ಅವಳ ಹೊರಗಟ್ಟಿದ.
ಇಲ್ಲಿ ಮಹಿಳೆಯ ಶೋಷಣೆಯೆಂದು
ಪರವೂರಿನ ಮಹಿಳೆಯರು
ಸೇರಿದ್ದಾರೆ.
ಭರತನಿಗೂ ರಾಜ್ಯವಿಲ್ಲ
ರಾಮ ರಾಜ್ಯದಲ್ಲೇ ಇಲ್ಲ
ಬೆನ್ನುಬಾಗಿದ ಮಂಥರೆಯ ಪ್ರತಿಮೆ
ಇಡಬೇಕೆಂದು ಆಗ್ರಹಿಸಿದ್ದಾರೆ."
-----------------------------------------------------
"ಕಪ್ಪು?.. ನೀಲ
ಮುರಳೀಲೋಲ
ಹಗಲು ಗೊಲ್ಲ
ರಾತ್ರಿ ನಲ್ಲ!"
-----------------------------------------------------
"ನಿಶೆಯೇರಿ ಹೋದಂತೆ,
ಮಳೆಹನಿ ಮೆಲ್ಲನೆ ಚುಚ್ಚುವಂತೆ,
ಅವಳು!
ಕಪ್ಪಾಗುತ್ತಾ ತಂಪೀಯುವಳು!"
-----------------------------------------------------

Sunday, October 28, 2012

ನಾನು ಮತ್ತು ಬೆಳಕು


ನಾನು ಮತ್ತು ಬೆಳಕು ಎದುರಾಗಿದ್ದು ಇತ್ತೀಚೆಗೆ
ಅದು ಬೆಳಗುತ್ತಿತ್ತು.
ಎಣ್ಣೆ ಸುಡುವ ವಾಸನೆಗೆ
ಮತ್ತು ಬಂದಂತೆ ನಾನು ಕುಳಿತಿದ್ದೆ.

ಹಿಂದೆ ಬೆಂಕಿ ಕಂಡವ ಉಳಿಸಿದ್ದನ್ನು
ನಾನು ನೋಡುವುದೇ?
ಅಲ್ಲ. ಅವನಂತೆಯೇ
ನನಗೂ ಒಂದು ಬೆಳಕಿನ ಪರೀಕ್ಷೆ ಅಷ್ಟೆ.

ಅಪ್ಪ ಹೇಳಿದ ಬೆಳಕು,
ಅಮ್ಮ ಹೇಳಿದ ಬೆಳಕು
ಎರಡೂ ಬೇರೆ ಬೇರೆ, ಆದರೂ
ಈ ಬೆಳಕು ಅದೆರಡೂ ಅಲ್ಲ. ಭಿನ್ನ.

ಸುಡುವುದು ಬೆಂಕಿ,
ಸುಟ್ಟದ್ದನ್ನು ತೋರಿಸುವುದು ಬೆಳಕು
ಎಂದು ಅರಿವಾಗುವ ವೇಳೆಗೆ
ಎಣ್ಣೆ ಮುಗಿಯುವುದು
ಪದ್ಧತಿ.

Saturday, October 27, 2012

ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ


ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ
ಇಣುಕಿ ನೋಡದೆ ಹೋಗಳೆನ್ನ ಚೆಲುವೆ
ಸುತ್ತಮುತ್ತಲು ಯಾರೂ ಇರದಂತ ವೇಳೆಯಲಿ
ಕೆಣಕು ಮಾತಲಿ ನನ್ನ ಕರೆಯದಿಹಳೆ?

ಬಾಗಿಲಿನ ಬಳಿಯಲ್ಲಿ ನಿಂದು ಬಳಿ ಕರೆದಂತೆ
ಬಳೆಯ ದನಿಯನು ಮಾಡಿ ಓಡುತಿಹಳೇ
ಅಲ್ಲೆಲ್ಲೋ ಕಾಣಿಸುತ, ಇನ್ನೆಲ್ಲೋ ಮಾಯದಲಿ
ಬಳಿಗೆ ಬಂದರೆ ಮೂಕ, ಮತ್ತೆ ಅವಳೇ!

ಹಬ್ಬದಲಿ ಜಾತ್ರೆಯಲಿ ಪೇಟೆಯಲಿ ಬೀದಿಯಲಿ
ಅವಳ ಹೆಜ್ಜೆಯ ಹುಡುಕಿ ನಡೆವೆ ಎಂದು
ಅವಳೋ ಬಲುಜಾಣೆ, ನನಗಿಂತ ಬಲುಚುರುಕು
ಗುರುತುಗಳನಿಟ್ಟಿಹಳು, ನಾ ಬರುವೆನೆಂದು!

Tuesday, October 23, 2012

ಬರಿಯ ನಾನು!


ನನ್ನ ಕಾಯುವ ಅವಳು ಕರಿಮುಗಿಲೊ ಸುಳಿಮಿಂಚೊ
ಸುಮ್ಮನುರಿಯುವ ಹಗಲೊ ತಿಳಿಯದಾದೆ
ಸೆಳೆತವೇನೋ ತಿಳಿಯೆ, ಮತ್ತೇನೂ ಹೇಳದೆಯ
ಇನ್ನೂ ಕಾಯುತಲಿರಲಿ; ತಿರುಗಿ ಬಂದೆ!

ಹೇಗೆ ಹೇಳುವುದಿನ್ನು ಒಲವೆಂದೊ ಚೆಲುವೆಂದೊ
ಸಾಗಹಾಕುವ ಸಮಯ ಸಾಕು ಎಂದೋ?
ನೋಡನೋಡುತ್ತಲೇ ಬೆಳೆದ ಮಲ್ಲಿಗೆ ಬಳ್ಳಿ
ಹೂ ಬಿಡದೆ ಸೊರಗೀತೆ? ತಪ್ಪು ನಿನ್ನದೆಂದು?

ಮಳೆಯ ಹನಿ ಬರಬೇಕು, ಒಡೆದು ಆ ಮುಗಿಲುಗಳು
ಕರಗಬೇಕು ಅಲ್ಲಿ ಹಾಲು ಜೇನು!
ಇಲ್ಲವಾದರೆ ಸುಟ್ಟು ಕರಕಲಾಗುತ ಹೀಗೆ
ಇರಬೇಕು ಇನ್ನು ನಾನು ನೀನು!

Saturday, October 20, 2012

ಹೊಸ ಹುಟ್ಟು.


ಬಾಗಿಲು ತೆರೆದ ದನಿ ಕೇಳಿಸಿತು
ಒಳನಡೆದೆ, ಹಿತದ ಕತ್ತಲು
ಕೇಳಿದೆ; ಯಾರಿಲ್ಲಿ?

ಬಾ ಮಗನೇ ಬಾ, ನೋಡು
ಇದು ಕಂಬ, ಇದು ಮಾಡು,
ಇದು ನನ್ನ ಗೂಡು.

ಒಳಗಿದೆಯೊ ಒಂದಿಷ್ಟು ಹಳೆಯ ಮಡಕೆಯ ಚೂರು!
ಆರಿಲ್ಲವಿನ್ನೂ ನೆತ್ತರು. ಪುನಃ ಇಹುದೆ ಚಿಗುರು?
-
ಹೊರಗೆ ಮಳೆಯಾದಂತೆ ಸದ್ದು,
ಹನಿ ಬಿದ್ದರೆ ಸಾಕು, ಜಗ್ಗನೇಳುವ ಬೀಜ
ಇನ್ನೇನು ಕಳವಳಿಕೆ?
ಹೊರಗೆ ಬಂದೆ.
ನಾಳೆ ಬಂದೀತೆಂದು ಹೊಸತು ಮೊಳಕೆ!

Monday, July 9, 2012

ಹಕ್ಕಿ ಕಲಿಸಿದ್ದು.


ಹಕ್ಕಿನೋಡಿ ಮರುಳಾಗಿ
ಅಂತೆಯೇ ಹಾರಬಯಸಿದೆ
ಬಿದ್ದೆ, ಸಾವರಿಸಿಕೊಂಡು ಎದ್ದೆ.
ಕೈಗಳೇಕೋ ರೆಕ್ಕೆ ಆಗಲೇ ಇಲ್ಲ.

ಲೆಕ್ಕವಿರಿಸಿಕೊಂಡೆ
ಒಂದು ಎರಡು ಅಲ್ಲ ಮೂವತ್ತಮೂರು!
ಕೊನೆಗೆ ದಕ್ಕಿದ್ದೆಷ್ಟು?
ಬರಿಯ ಹಿಕ್ಕೆ!

ಅವು ಹಾಗೇ ಹಾರುವುದಿಲ್ಲ
ತತ್ತಿ, ಬಿರಿದೊಡೆಯಬೇಕು
ಮತ್ತೇನೋ ಬಿಸಿ ಮುಟ್ಟಿ
ಹೊಟ್ಟೆ ಚುರುಕ್ಕೆಂದಾಗ
ಗೂಡಿನ ಜಾಗ ಸಾಲುವುದಿಲ್ಲ
ಎನಿಸಬೇಕು.

ಅರಿವಾದಾಗ ಹಾರುವುದು
ಹಾರಿದಂತೆಯೇ ಅರಿವು.

Thursday, July 5, 2012

ಇಂದ್ಯಾಕೆ ತೊರೆದೆ ಹೇಳು


ಇಂದ್ಯಾಕೆ ತೊರೆದೆ ಹೇಳು
ನೀನಿರದೆ ಇಹುದೆ ಬಾಳು
ಒಂದೆ ಭಾವ ಒಂದೆ ಜೀವ
ಇಂದು ಎರಡು ಹೋಳು!

ಬಿತ್ತಿದಾಸೆ ಚಿಗುರುಗನಸು
ಮತ್ತೆ ಬೆಳೆಯೆ ಪ್ರೇಮಜಲದಿ
ಸುತ್ತ ಬರುವ ಬೆಂಕಿ ವಿರಸ
ಹಿತವಾಯಿತೆ ಹೇಳು?

ಒಲವು ಪಾಶ ನಾನೆ ಕೊರಳು
ನೀನೆ ಎಳೆವ ನೋವಿನಬಲ
ಕರಗಿ ಹೋಗಲೆಲ್ಲ ನೋವು
ವಶವಾಗಲಿ ಸಾವು!

Tuesday, July 3, 2012

ಬಾರೋ ಬೇಗ ಬಾರೋ


ಬಾರೋ ಬೇಗ ಬಾರೋ ಇಳೆಗಿಳಿವಾ ಮಳೆಯ ಹಾಗೆ
ಸೇರೋ ಈಗ ಸೇರೋ ನಿನ್ನ ಸೆಳೆವೆ ನನ್ನ ಕಡೆಗೆ.

ಈಟಿಯಂತೆ ದಾಟಿ ಬಾರೊ ಅಂತರಂಗ ಕುಲುಮೆಯ
ಮೀಟುವಂತ ನೋವಿನೊಳಗೆ ಬೆಳಗು ಪ್ರೇಮಜ್ವಾಲೆಯ
ಕೂಟವಾಗೆ ಮೆರೆದು ಪೂರ್ಣ ಫಲವ ಧರಿಪ ಇಳೆಯೊಲು
ಸಾಟಿಯಹುದೆ ಈ ಸೃಷ್ಟಿಗೆ ನಾನು ನೀನು ಬೆರೆಯಲು!

ಹರಿದು ಧಮನಿಯೊಡೆದು ಬರಲಿ ನಿನ್ನಾವೇಶ ಮೀರೆ
ಇಳಿದು ಸೆಳೆತಪಡೆದು ಕರಗಿ ನಿನ್ನ ಒಲವ ಧಾರೆ
ಮಿಂಚು ಬೆಳಕಿನಾಟದಂತೆ ಸಿಡಿದ ಪ್ರೇಮ ಮಾಲೆ
ಪಡೆದು ನಾನು ಹಡೆವೆ ಚಿಗುರ ನಿನ್ನಕರುಣೆ ಲೀಲೆ

ಹಳೆಯ ಗುಣವು ಜಾರಿ ಹೋದರೇನು ಜಾವದಂತೆಯೆ
ಹೊಸತು ಸೃಷ್ಟಿ ಸೃಜಿಸಿ ಮೆರೆವ ವೇಳೆ ಮೀರದಂತೆಯೆ
ಬಾರೊ ಬೇಗ ಬಾರೋ ನಾವು ಜಗಕೆ ಮೊದಲ ದೇವರು
ಸೇರೊ ಒಲಿದು ಸೇರೋ ನಾವೆ ಇದಕು ಅದಕು ಜೀವರು!

೦೩-೦೭-೨೦೧೨

Friday, June 29, 2012

ಕಾಯುವುದು ನಿನಗೆ ನಾ, ಬೇಯುವುದು ನೆನೆದು ನಾ

ಕಾಯುವುದು ನಿನಗೆ ನಾ, ಬೇಯುವುದು ನೆನೆದು ನಾ
ನೋಯುವುದು ಸರಿಯೆ ನಾ, ಹೇಳು ನೀನು
ನಿನ್ನ ಕನಸನು ಹೊತ್ತು, ಅವಕೆ ಆಸರೆಯಿತ್ತು
ಅದಕಿಷ್ಟು ಮೆರುಗು ನಾ ತುಂಬುತಿಹೆನು

ನಿನ್ನ ಜೊತೆಯಿರೆ ನಾನು ಬೆಟ್ಟಗಳ ಕುಣಿಸುವೆ
ಕಾಲುದಾರಿಗೆ ಹೂವ ಚೆಲ್ಲಬಲ್ಲೆ!
ಬರದೆ ಹೋದರೆ ನೀನು, ಇವು ಎನ್ನ ಕೆಣಕುವುದು
ಹೇಗೆ ನಾ ಏಕಾಂಗಿ ನಡೆಯಬಲ್ಲೆ?

ಹುಚ್ಚುಹಿಡಿಸುವ ನಗುವು;ಮಳೆಗರೆವ ಮಾತಿನೊಳು
ನನ್ನಂತರಂಗವನು ತುಂಬಬಲ್ಲೆ
ನಿನ್ನ ಸಾಮೀಪ್ಯದೊಳು ಪರಿಪೂರ್ಣ ನಾನೀಗ
ಎದೆಯ ಆನಂದಕ್ಕೆ ಇಲ್ಲ ಎಲ್ಲೆ

ಒಲವದೇನೆಂದು ಅರಿತು ನಾ ಹೇಳುವುದೆ?
ಪದದಿ ಭಾವದ ಸಾರ ತುಂಬಬಹುದೇ?
ನಿನ್ನ ಸಂಗವೆ ಒಲವೆ? ನೀನು ಇರದಿರೆ ಒಲವೆ?
ಮೋಡಗಳ ತೆರದಲ್ಲಿ ಹೊಂಚುತಿಹುದೇ?

೩೦-೦೬-೨೦೧೨

Monday, June 25, 2012

ಹೀಗೇಕೆ


ಅಮ್ಮ ಹೀಗೇಕೆ,
ಇಷ್ಟು ಹೆತ್ತರೂ , ಕರೆಗಾಳಿ ಗೀರಿದರೂ
ತೊಗಟೆಯಿಂದೊಡೆವ ಮಕ್ಕಳು
ನಿನ್ನ ಹಳದಿ ಎಲೆಗಳನ್ನ ನೋಡಿ ಕನಿಕರಿಸುವುದಿಲ್ಲ.

ಅವನು ಗಾಳಿ,
ಎಷ್ಟೊ ಮರಗಳ ಮೈದಡವಿ ಹೋದರೂ
ಮುಪ್ಪಿಲ್ಲವಂತೆ.
ಹೆತ್ತ ಹೆಂಗಳೆಯಂತೆ ಮೈಯ್ಯೂ ಸುಕ್ಕುಗಟ್ಟುವುದಿಲ್ಲ
ಜಂಭ ಅವಗೆ!

ಹೀಗೇ, ತಿರುತಿರುಗಿ, ಕೊನೆಗೆ
ಮನೆಯ ಬಾಗಿಲು ತಟ್ಟೆ
ಹಿತ್ತಿಲಿನ ಬಾಗಿಲು ಮುಚ್ಚಿದಂತೆ ಅನಿಸಿ
ಗಾಬರಿಗೊಂಡಿದ್ದೇನೆ.

ಅನ್ನದಾತನ ನೆನೆಯುತ್ತಾ!

ಅನ್ನದಾತನ ದಿನವು ನೆನೆಯಿರಿ, ನೆನೆಯುತ್ತಾ ಇರಿ
ಬರೀ ನೆನೆದರೆ ಸಾಕು! ಜಪಿಸುತ್ತಿರಿ ಆಗಾಗ 
ಒಂದು ಹೊತ್ತಿನ ಊಟ, ಅಲ್ಲ ಹನಿ ನೀರು 
ಕೊಟ್ಟು ಬಿಡಬೇಡಿ ಬಳಿಗೆ ಬಂದಾಗ.

ಬಸ್ಸು ಟ್ರೈನುಗಳ ಹತ್ತಿಯಾರಿವರು !
ನೋಡಿಕೊಳ್ಳಿ ನಿಮ್ಮ ಬಿಳಿ ಷರಟು ಪ್ಯಾಂಟು!
ಕೊಳೆಯಾಗದಂತೆ ದೂರ ತಳ್ಳಿಬಿಡಿ,
ಹಿಡಿದುಕೊಳ್ಳಿ ಕಿಟಿಕಿಯ ಬದಿ ಸೀಟು !

ರಸ್ತೆಯಲ್ಲಿ ಉಗುಳಬೇಡಿ, ಸಿಪ್ಪೆಯ ಎಸೆಯಬೇಡಿ
ಎನ್ನಿ. ಅವರೇನು ನಾಗರಿಕರೇ ? ಅಲ್ಲ !
ನಿಮ್ಮ ಪ್ಲಾಸ್ಟಿಕ್, ಕಂಪ್ಯೂಟರುಗಳ ಗ್ರಹಿಸರು
ನಮ್ಮಿಂದ ಉದ್ದಾರ ತಾನೆ ಎಲ್ಲ !

ಎತ್ತರಕಟ್ಟಿದ ಮಹಲಿನ ಮೇಲಿಂದ ಬೆಟ್ಟಗುಡ್ಡಗಳ ಹಿಡಿದು
ನೀರು ಹರಿವಲ್ಲೆಲ್ಲಾ ಕ್ಯಾಮೆರದಲಿ ಬಡಿದು
ಬಗ್ಗಿದ ರೈತನ ಹೊಗಳಲೋಸುಗ ಬಾಯಿ ಮುಚ್ಚಿಸಿ
ಕೆಂಪು ಹಲ್ಲು, ಕಂಡೀತೆಂದು ಬಾಯಿಯೊಡೆದು !

ಛೇ, ನೀನೇ ಬೆಳೆಯಬೇಕೆಂದಿಲ್ಲ ಗೋಧಿ. ಇದೆ ದಾಸ್ತಾನು
ವೀರ್ಯದ ಲೆಕ್ಕವೂ ಇದೆ ನನ್ನಲ್ಲಿ, ಎಷ್ಟು ಹುಟ್ಟಿಸಬೇಕು?
ಮುಕ್ಕಾಲು ಪಟ್ಟಣದೊಳಗೆ ,ಕಾಲು ಗದ್ದೆಗೆ ಇಹುದು
ಕಾಲು ಬೆಳೆಸಲು ಬೇಕು ! ಉಳಿದ ಪರಾಕು !

Saturday, June 23, 2012

ಒಂದಿಷ್ಟು ಸತ್ಯ


ಅಲ್ಲೆಲ್ಲೋ ಅಡಗಿದ್ದ ಬೆಂಕಿಯನ್ನು ತಿಂದು
ಕಲ್ಲಿದ್ದಲು ಮಾಡಿದ ನಿನ್ನ ತಾಕತ್ತನ್ನು
ಸುಳ್ಳು ಎನ್ನಲಾರೆ!

ನಿಲ್ಲು! ಒಂದಿಷ್ಟು ಪರಮಾನ್ನವೋ
ಅಲ್ಲ ಪಾಯಸವೋ ಕಟ್ಟಿಕೊಟ್ಟು
ಗಂಟಲಿಗೇರುವ ಉಪ್ಪಿನಕಾಯಿಯ ಗುಟ್ಟು
ಬಿದ್ದಲ್ಲಿಗೇ ಒಂದು ಕೋಪದ ಏಟು
ಇನ್ನೊಂದು ಬೀಳುವಾಗೊಮ್ಮೆ ನೀ ಇತ್ತ ಸಾರೋಟು!
ಮರೆಯಲಾರೆ.

ಚೆಲ್ಲಿದ ಚಿಲ್ಲರೆ ಕಾಸು, ಬಳೆಯ ಚೂರು
ಬಾಳೆ ಹಣ್ಣು, ಮತ್ತೇನೌಷಧಿಯ ತೊಗಟೆ!
ಮಳೆಯ ದಿನದ ಕತ್ತಲಲ್ಲಿ
ಎಲ್ಲವನ್ನೂ ಮೆಟ್ಟಿ ಜಾರಿ ಬಿದ್ದಾಗ
ಈ ಕಾಸು, ಸಿಪ್ಪೆ, ಚೂರುಗಳನ್ನ ಆಯಲಾಗದೇ
ಎಲ್ಲವೂ ಮಣ್ಣು ಎನ್ನಲಾರೆ.

ಕಿಲುಬಿಗಂಟಿದ ಮಣ್ಣು ತೊಳೆದುಕೊಡು,
ಬಾಳೆಯ ಪುಳ್ಳೆಗಳನ್ನ ಪೊರೆವಂತೆ ಮಾಡು
ತೊಗಟೆ ಜಾರದ ಹಾಗೆ ಕಟ್ಟು ಕಾವಿಯ ಪಂಚೆ!
ಗೀರುತ್ತಿರಲಿ ನಿನ್ನ ಹದಿಬದೆಯ ಬಳೆಯ ಚೂರು.

Monday, April 30, 2012

ಹೆಸರಿಡದ ಚಿತ್ರಗಳು !


ಬೆನ್ನಿನಲ್ಲಿ ಗೆರೆಯೆಳೆದ
ಮೊನ್ನಿನ ಮಳೆಗೆ ಹೀಗೆಯೇ !
ಹುಟ್ಟಲಾರದ ಕೆಲವು ಆಸೆಗಳು
ಮೊಟ್ಟೆಯಿಟ್ಟಿದೆ.

ಈ ಸಲವಾದರೂ ಮೋಸವಾಗದೆ
ಹೊಸ ಜೀವದ ಹುಟ್ಟು ಕಾಯುವ ಕ್ರೌಂಚ!
ಬೇಡ!
ಕೆಮೆರಾದ ಕಣ್ಣಲ್ಲಿ ಕಾಯುತ್ತಿದ್ದಾನೆ !

ಸುಡದೆ ಶುದ್ದವಾಗುವ ಸೀತೆ
ಸಿದ್ದಳಾಗುವಳೆಂದು,
ಒಳಗೆ ರಾವಣ ನಗುತ್ತಿದ್ದಾನೆ !

ಇದನ್ನೆಲ್ಲ ಒಂದೇ ಚೌಕಟ್ಟಿನಲ್ಲಿ
ಹಿಡಿದಿಡಲಾಗದೆ!
ಬೆಳಗಿನ ಜಾವದ ಅವಳ ಮುಂಗುರುಳಾಗಿದೆ

Wednesday, April 25, 2012

ಯುವಕನ ಹಾಡು !

೧.
ಓ ತಂದೆ
ಈ ಬಿಸಿಲು ಏಕೆ ತಂದೆ ?

ಹೀಗೆಂದ ಯುವಕ
ಕರಬೂಜ ತಿಂದ,
ಭಿತ್ತಕ್ಕೆ ಬಿಸಿಲು,
ಬಿಸಿಗೆದ್ದ ತೊಗಟೆ
ಮೊದಲ ಮಳೆಗೆ
ಟಿಸಿಲೊಡೆದದ್ದ ಕಂಡ


ಅವನು ಗುರು
ಚೈತನ್ಯದ ಚಿಗುರು!

ಬಂದವರಿಗೆಲ್ಲಾ ಆನಂದ ತಂದ
ಈ ಯುವಕ ಬಂದ !
ಗುರುವಿನ ಕಾವಿಯ ನೂಲು
ಸೀರೆಯ ರೇಶಿಮೆಯ ಜೊತೆಗಿತ್ತು !

೩.
ಬೆಂಕಿ ಸ್ವಾಮಿ !
ಮುಟ್ಟಲಿಲ್ಲವೋ ಕಾಮಿ,

ವಯಸ್ಸೆಷ್ಟು ? ಕೇಳಿದ
ಯುವಕಗಿಪ್ಪತ್ತಾರು ಎಂದ !
ಇದ್ದ ಕಾಮಕ್ಕೋ ನೂರು
ಒಣಗಿದ ಗಿಡಮರಕ್ಕೆ ಹಸಿರು ಬೇರು !

೪.
ಒಡತಿ ಇದ್ದಾಳೆಯೇ ?
ಇದ್ದವಳು ವಶ್ಯ !

ಹುಡುಕಿದ್ದು ಗಂಧ
ಮೀನಲ್ಲಿ ಸಿಕ್ಕಿದ್ದು ಯಾವ ಬಂಧ ?
ಧಾತುಚಲನೆಗೆ
ಮೀನಿನ ಹೆಜ್ಜೆಗಳು
ಕಾಣಲಾರದು, ಯುವಕನೆಂದ !

Tuesday, April 17, 2012

ಪ್ರೀತಿ ಎಂದರೇನೆ ಸಖಿ ?

ಗುರುತಿಲ್ಲದ ಹೂಗಳಾಯ್ದು
ಸರತಿಯಲ್ಲೆ ಪೋಣಿಸುತ್ತ
ಧರಿಪ ಮಾಲೆಯೆನ್ನುವುದು !
ಪ್ರೀತಿ ಎಂದರೇನೆ ಸಖಿ ?

ಮಳೆಗೆಜ್ಜೆಯ ತಾಳದಲ್ಲಿ
ಹಳೆಯ ಕೊಳೆಯ ತೊಳೆಯುತಿಂತು
ಸುಳಿವ ನವೋತ್ಸಾಹ ಸೊಗಸೆ !
ಪ್ರೀತಿ ಎಂದರೇನೆ ಸಖಿ ?

ನನಗೆ ನೀನು ಕಾಯುವುದು
ನಿನ್ನ ನೆನೆದು ಬೇಯುವುದು
ಕನಸು ನನಸು ನೋವು ನಲಿವು !
ಪ್ರೀತಿ ಎಂದರೇನೆ ಸಖಿ ?

Sunday, April 8, 2012

ಇನ್ನೊಂದು ಕೋರಿಕೆ !


ಏಕಾಂತವನು ಹುಡುಕಿ
ಅವಳ ಮುಂಗುರುಳ ನೇವರಿಸಿ
ಗಲ್ಲವ ಹಿಡಿದು
ಮುತ್ತನೊತ್ತುವ ಸಮಯದೊಳು
ನೀ ರಿಂಗಣಿಸದಿರು ಮೊಬೈಲೇ !
ಏಕಾಂತವಿದ್ದರೂ ಅದು ಜೈಲೇ !!

ನರುಗಂಪಿನ ಅವಳ ತುಟಿಗಳು
ನನ್ನ ಮೋರೆಯನ್ನಪ್ಪಿ ಚುಂಬಿಸೆ
ಅದುರುತ್ತಿರುವ ವೇಳೆ
ನೀ ಕಾಡಬೇಡ ಕ್ಯಾಮೆರದ ಕಣ್ಣೆ
ಅವಳ ಮತ್ತೆ ನನ್ನ ಚಿತ್ರವ
ಹಳೆತಾಗಿಸಿ ಉಪ್ಪಿನಕಾಯಿ ಹಾಕಬೇಕಾಗಿಲ್ಲ !

ದೂರದ ದರ್ಶನ ಮಾಟ !
ಸಮಯಕ್ಕೂ ಸರಸಕ್ಕೂ ಬೇಟ
ಜಗಳ,ವಾರ್ತೆ, ಆಟಗಳ ನೋಡಿ
ನಾಳೆಯ ಚಿಂತೆಗಳ ದೂಡಿ
ನಿರ್ಭಂದಿಸಿದ ಗಳಿಗೆಯೊಳು ಇಷ್ಟೇ
ಎಂದೆನುತನುಭವಿಸಬೇಕು !
ಇಲ್ಲವಾದರೆ ನೆಮ್ಮದಿಯ ನಾಳೆ ಇಲ್ಲ?

Saturday, March 31, 2012

ನಾನು ಅವಳು !


ನಗುವಲ್ಲೆ ಸಿಕ್ಕಿರುವ ಅವಳ ನಾನು ನಗಿಸಬೇಕು
ನಗುತ ನೋವು ಕರಗಬೇಕು
ಬಿಗಿಯಾದ ತೋಳಿಂದ ಅವಳ ಬಳಸಬೇಕು
ಬಳಸಿ ನೀ ನನಗೆನಬೇಕು !

ಕಾರಿರುಳ ಕತ್ತಲಲಿ, ಅವಳ ಕೂಗಿ ಕರೆಯಬೇಕು
ಕರೆದು ಕೆನ್ನೆ ಚಿವುಟಬೇಕು
ಹುಸಿಮುನಿಸು ತೋರಿಸುವ ಅವಳ ನೋಡಬೇಕು
ನೋಡಿ ಮತ್ತೆ ರಮಿಸಬೇಕು !

ಮೋಹದಲೆ ತಲೆಗುರುಳ ಸಿಕ್ಕು ಬಿಡಿಸಬೇಕು
ಬಿಡಿಸಿ ಮಲ್ಲೆ ಮುಡಿಸಬೇಕು
ಹೂವುಗಳ ಮಾತುಗಳ ಇಂಪಾಗಿಸಬೇಕು
ಇಂಪಲಿ ನನ್ನೇ ಮರೆಯಬೇಕು !

ಎಲ್ಲೆಲ್ಲೋ ನೋಡುತಿಹ ಕಣ್ಣ ಸೆಳೆಯಬೇಕು
ಸೆಳೆದು ಹೆಣ್ಣೇ ಎನಬೇಕು
ಒಲವಿಂದ ನಲಿವಿಂದ ಮುತ್ತ ಕದಿಯಬೇಕು
ಕದ್ದು ಪ್ರೀತಿ ಗೆಲ್ಲಬೇಕು !

ಸೋಲಿರದಾ ಪ್ರೀತಿಯಲಿ ಸೋಲು ಕಾಣಬೇಕು
ನಾನು ಸೋತೆ ಎನಬೇಕು !
ಜೀವಗಳ ಪಯಣದಲಿ ಸೋಲೆ ಗೆಲಬೇಕು
ಜೀವನ ಗೆದ್ದು ಮೆರೆಯಬೇಕು !

೩೧-೦೩-೧೨
ಫೋಟೋ :- ಗೂಗಲ್ !

Friday, March 30, 2012

ನೀ ದೊರೆತ ಮೇಲೆ ನನಗಿನ್ನಾರು ಬೇಕು ?

ನೀ ದೊರೆತ ಮೇಲೆ ನನಗಿನ್ನಾರು ಬೇಕು
ನಿನ್ನೊಲವಲೇ ನಾನು ಬೆಳಗಬೇಕು !
ನಗೆಯೆಷ್ಟೋ ನೋವೆಷ್ಟೊ ಹಂಚಬೇಕು
ನನ್ನ ಬಾಳಿನ ಪುಟಕೆ ನಿನ್ನ ಕುಂಚ ಸಾಕು !

ನೋವು ಸಾವಿರಬರಲಿ, ನಗೆಗೆ ಸಾವಿರದಿರಲಿ
ಒಲವೆಂಬ ಒಳನದಿಯು ಚಿಮ್ಮುತಿರಲಿ
ಮನದ ವನದೊಳಗೆ ಹೂವರಳಿ ನಗುತಿರಲಿ
ಎಲ್ಲ ಹೃದಯದ ಮಾತು ಹರಿದು ಬರಲಿ

ಪ್ರೇಮವೆಂಬುದು ಬರಿದೆ, ಅಲ್ಲ ಬರಿ ಕಲ್ಪನೆಯೆ
ಮೋಸದಲಿ ಸಿಲುಕಿಸುವ ಪಾಶ ನೊಣೆಯೆ ?
ಮೋಹದಾತುರದಲ್ಲಿ ಹುಟ್ಟಿಬಹ ಕಾಮನೆಯೆ
ಜೀವಿ ಜೀವಿಗು ಇರುವ ಭಾವದೆಣೆಯೆ ?

೩೦-೦೩-೨೦೧೨

Friday, March 16, 2012

ನನ್ನವಳು !



ನನ್ನವಳು ಕೈಹಿಡಿದ ಮಲ್ಲಿಗೆ ಬಳ್ಳಿ, ಹೆರಳೋ
ಕಾನನದ ಕತ್ತಲಿನಂತೆ, ಹುಬ್ಬೆರಡು ಸೋನೆ
ಚಿನ್ನದ ಮಳೆಗೆ ಮೂಡಿದ ಕಾಮನಬಿಲ್ಲು !
ಮುನ್ನಿನಾ ಮಾತುಗಳೆ ಕೋಗಿಲೆಯ ಕುಕಿಲು !

ಅವಳತ್ತಾಗ ಒಂದು ಹನಿ , ಅಲ್ಲೆ ಮೂಗನು
ಸವರಿ ನತ್ತಾಯಿತೇ? ಎಂದು ಕನವರಿಕೆ !
ಇವೆರಡು ಕಂಗಳ ನೋಟಕ್ಕೆ ಮನಕರಗಿ
ತವಕವೇನ್ ತುಟಿಯಂಚಿನೊಳಗೆ ನಗುವೇ?

ಇಲ್ಲಿ ಕಾದಿರು,ಎಂದು ಬೇಯುವ ತುಟಿಯೊ
ಸಲ್ಲಿಸಿತೆ ಸವಿಯ ? ಅಲ್ಲ ಮಸಾಲೆ ಮದ್ದು !
ಎಲ್ಲಿಯಾದರೂ ಬಿದ್ದು ಹೋದೀತೆಂಬ ನಗು
ಸುಳ್ಳಲ್ಲ, ಏಳಲಾಗದೆ ನನ್ನ ಗೆಲುವ ಸೋಗು!

Wednesday, March 14, 2012

ಕೊಳಲನೂದು ಮಾಧವಾ ರಾಧೆ ಬರುವಳು


ಕೊಳಲನೂದು ಮಾಧವಾ 
ರಾಧೆ ಬರುವಳು !
ನಿಲಲಾರಳು ದನಿಯ ಕೇಳಿ
ಬಂದೆ ಬರುವಳು !


ನೊಂದಿಹಳೆ ರಾಧೆ ಹೇಳು
ಮುನಿದು ಹೋದಳೇ
ಚಂದದಿಂದುಲಿವ ನುಡಿಗೆ
ಮರಳಿ ಬಾರಳೇ ?


ಪ್ರೇಮದುಸಿರ ಹರಿಸಿ ನೀನು
ನುಡಿಸೆ ಮುರಳಿಯಾ
ಸಾಮದೊಳು ಕರೆವುದದು
ನಿನ್ನ ರಾಧೆಯಾ


ಆ ನೆರಳೊಳು ನೋಡು ರಾಧೆ
ಮರಳಿ ನಿಂದಳೇ ?
ಜೇನು ದನಿಯ ಮುರಳಿ ಕರೆಗೆ
ಸಿರಿಯು ಬಾರಳೇ ?


೧೩-೦೩-೨೦೧೨

Tuesday, February 28, 2012

ಒಂದು ಬಾರಿ ನಗುತ ಬಾರೆ !


ಒಂದು ಬಾರಿ ನಗುತ ಬಾರೆ ತೋಳ ತೆಕ್ಕೆಗೆ
ಮಂದ ಗಾಳಿ ನೀಡುತಿಹುದು ಸರಸಕೊಪ್ಪಿಗೆ

ಕರಗಿ ಹೋದ ಚಂದ್ರ ಕೂಡ ನಿನ್ನ ಲಜ್ಜೆಗೆ
ಸುರರು ನಾಚಿ ಕರುಬುತಿಹರು ನಿನ್ನ ಮುದ್ದಿಗೆ

ನಿನ್ನ ಮುತ್ತನೆತ್ತರಿಸೆ ಅವು ತಾರೆಯಾಯಿತೇ?
ನಿನ್ನ ದನಿಯ ಕೇಳೆ ಧರೆಯು ಮೂಕವಾಯಿತೇ?

ಮೇರೆ ಮೀರದೆಂದೂ ನನ್ನ ಸ್ವಾರ್ಥದಾ ಬಲ
ನೀರೆ ನಿನ್ನ ಸೇರೆ ಬಾಳೋ ಒಂದೇ ಹಂಬಲ

ಚೆಲುವು ಅಂದರೇನು ಅರಿಯೆ ಒಲವೆ ಚೆಲುವೆನೆ
ಗೆಲುವು ಸೋಲು ಪ್ರೀತಿಗಿಹುದೆ ಸೋತೆ ಸುಮ್ಮನೆ

Tuesday, February 7, 2012

ನನ್ನ ನಿಲುವು.


ಕೆಲವೊಮ್ಮೆ ಹಾಗೆಯೇ
ಚಡ್ಡಿಯೊಳಗೆ ನಾನೇ ಸಿಲುಕಿದಂತೆ !
ಬೇರೆಯವರು ಕಾಣದಂತೆ
ಸ್ವಲ್ಪವೇ ತೋರುವಂತೆ
ಕುತೂಹಲ ಕಣ್ಣಲ್ಲೇ ಇರುವಂತೆ
ಕಾಯ್ದುಕೊಂಡಿದ್ದೇನೆ !

ಆಗಾಗ ಗೋಡೆ ಹಾರುವಾಗ
ಜಾತ್ರೆಬೀದಿಗಳಲ್ಲಿ ತಿರುಗುವಾಗ
ಆಕಸ್ಮಿಕವಾಗಿ ಚಡ್ಡಿಯ
ಬಿಗುವು ಸಡಿಲಿದಂತೆ !
ಆದರೂ , ಬೀಳದಂತೆ
..ನೋಡಿಕೊಂಡಿದ್ದೇನೆ !

ಸಿಟ್ಟು ಬರುವುದು ನೀವೆಳೆಯುವಾಗ ಸ್ವಾಮಿ !
ಕಾಣದ ಕೈಯ್ಯೇನಲ್ಲ ನಿಮ್ಮದ್ದು !
ಗೊತ್ತು, ನಿಮಗಾಗುವುದಿಲ್ಲವಿದು
ಆದರೂ ಎಳೆಯುತ್ತೀರಿ !
ನಾನೂ ಹಾಗೆಯೇ,

ಯಾಕೆಂದರೆ
ಹಿಡಿದುಕೊಳ್ಳುವುದರಿಂದ
ಎಳೆಯುವುದು ಸುಲಭ !!

Saturday, January 28, 2012

ಏನೆಂದು ಹೇಳಲಿ ಗೆಳೆಯಾ, ಅವಳ ಒಲವನು ?


ಏನೆಂದು ಹೇಳಲಿ ಗೆಳೆಯಾ, ಅವಳ ಒಲವನು ?
ಮಾಗಿಯಲ್ಲು ಬೆವರುತಲಿರುವೆ ನೆನೆದು ಅವಳನು!

ಏಕಾಂತ ಸೊರಗಿದೆ ಗೆಳೆಯಾ, ಅವಳು ಇರುವೆಡೆ
ಬಾನಿನಿಂದ ಚಂದ್ರನಿಳಿದಾ ಸಿರಿಯ ಮೊಗದೆಡೆ

ಮುತ್ತಿಡುವಾಗೊಮ್ಮೆ ಅವಳ ತುಂಟ ಕಂಗಳು
ಮತ್ತೇನನೋ ಬಯಸುತಿರುವ ಗೀಚು ಕೈಗಳು

ಸೊಬಗಿನಲೆ ಚಿಮ್ಮಿಸುವ ಈ ಪ್ರೇಮ ನಂಬುಗೆ
ಅವಳೆ ಈಗ ನಾನಾಗಿಹೆನು  ನನ್ನ ಹೆಮ್ಮೆಗೆ !

ಕಾರಿರುಳಲೆ ಮೀರಿ ಬರುವ ಅವಳ ನೆನಪನು
ಹೇಗೆ ನಿನಗೆ ಹೇಳುವೆನೋ ನಾನು ಅರಿಯೆನು

Monday, January 23, 2012

ಹೆಣ್ಣು-ಮಣ್ಣು


ದಿಕ್ಕು ತಪ್ಪಿಸುವ
...ಕಡೆಗೊಮ್ಮೆ ಗಮನ ಸುಳಿವ ಹೆಣ್ಣು.
ತಪ್ಪಿದ್ದೇ ಗುರಿ, ಎಚ್ಚರದ ಚಲನೆಯ ಕಣ್ಣು.

ಮುಗಿಬಿತ್ತು ದೃಷ್ಟಿ, ಅನಾಮತ್ತಾಗಿ
ತೊಡೆಯ ಮೇಲಿರಿಸಿಕೊಂಡಳು,
ಇನ್ನೂ ಹೀರಬಹುದೇ ?
ಮಧುವಿನಮಲು ಹೆಚ್ಚಾಗಿ
ಅವಳನ್ನು ಮುದುಕಿ ಎಂದೆನೇ?

ಅದೆಂತದೋ ಸುಳ್ಳು ಸಂಸಾರ !
ತುಟಿಗೆ ತುಟಿಯಂತೆ ,ಹೆಗಲಿಗೆ ಹೆಗಲಂತೆ
ನೆತ್ತರ ಹೀರುವ ಅವಕಾಶ ಕೊಡಲಿಲ್ಲವದು
....ಕಕ್ಕುವುದನ್ನೂ.

ಬಾಳೆಯ ವ್ಯವಹಾರ ಸ್ವಾಮಿ!
ಸತ್ತು ಹುಟ್ತುವುದು ನನ್ನ ಪರಿ,
ಎಲ್ಲ ಹುಟ್ಟಿದ ಹಿಳ್ಳೆಗಳನ್ನು ಅವಳು ಪೊರೆಯುತ್ತಾಳೆ
ಆಳಕ್ಕೆ ಬೇರೂಡದೆಯೆ,
ಮತ್ತೆ ಕಾಡುತ್ತಾಳೆ ಗಮನ

ವಿರಾಮದ ಕಾಲಕ್ಕೊಮ್ಮೆ
ಹೆರಳು, ಇಷ್ಟಗಲ ಬಿಂದಿ, ಮೂಗಿನ ನತ್ತು
ನೆನಪಾಗುವುದುಂಟು,
ಕೂಡೆ ಕನಿಕರಿಸಿದ ಕಣ್ಣುಗಳನ್ನೂ!
ಚಿತ್ತಕ್ಕೆ ನಿಲುಕದ ಅವಳ
ಪದ್ಮಪತ್ರದ ಭಂಗಿ,
ಅಲ್ಲೆಲ್ಲೋ ನನ್ನದೇ ಹೊಳೆವ ಬೆವರು !

೨೪-೦೧-೨೦೧೨

Tuesday, January 17, 2012

ಕೊಳಲು-ಗೋಕುಲದ ಬಿಳಲು


ಎತ್ತ ಪೋದನೋ ಮಾಧವ
ಎತ್ತ ಪೋದನೋ
ಮತ್ತ ರಾಧೆ ಕಾಯುತಿಹಳು
ಚಿತ್ತದಲ್ಲಿ ಅವನ ನೆನೆದು..

ಮಾಧವನ ಕೈಯ್ಯ ಬೆರಳು
ಮೋದದಿಂದ ನುಡಿಸಿ ಬರುವ
ನಾದವನ್ನು ಕೇಳದೆಯೇ
ರಾಧೆ ಎತ್ತ ಪೋದಳು ?
೨.
ಗೆಜ್ಜೆ ಪಾದ ಘಲ್ಲೆನು,ಮೆಲು
ಹೆಜ್ಜೆಗಳನು ಇಡುತ ಬಂದ
ಮಜ್ಜಿಗೆಯಾ ಬೆಣ್ಣೆ ಮುಖದಿ
ಲಜ್ಜೆ ಏಕಿದೆ..ರಾಧೆ ಲಜ್ಜೆ ಏಕಿದೆ ?

ಚಂದಿರನ ನೋಡೆ ರಾಧೆ
ಮಂದ ಹರಿವ ಯಮುನೆ ನೋಡೆ
ಇಂದು ಎಂತ ಮಾಧುರ್ಯವೊ
ಒಂದು ತಿಳಿಯೆ ನಾನು !

ತಡೆ ರಾಧೆ ಕೇಳುತಿಹುದೆ?
ಬಿಡದೆ ಮಥುರೆ ಕರೆಯುತಿಹುದ
ಬೆಡಗಿನೊಲವೆ ನಿನ್ನ ತೊರೆದು
ಅಡಗಬೇಕು ನಾಳೆ ನಾನು

ನಾನು ನೀಲ ನೀನು ಲೀನ
ನ್ಯೂನವಿರದ ಪ್ರೇಮಗಾನ
ಬಾನ ತುಂಬ ನಗುವ ತಾರೆ
ಪಾನವಾಯ್ತು ಭುವಿಯ ಜೇನು
ಗಾನವಾಯ್ತು ಮೌನ ಸೊಲ್ಲು
ದೀನ ಬಿಂಬ ತೊರೆಯೆ ನೀರೆ,,

೩.
ಕೊಳಲ ಬಿಟ್ಟೆ ಯಮುನೆಯಲ್ಲೆ
ಅಳಲದಿರುವ ಭರವಸೆಯಲಿ
ಬಲರಾಮನ ಜೊತೆಗೆ ನಾನು
ಗೆಲಲು ಪೋಪೆನು , ಮಥುರೆಗೆ !
ಸುಳಿಯಾದಳೆ ಯಮುನೆ ?

೧೭-೦೧-೨೦೧೨

ಹಿನ್ನಲೆ :-

ಉದ್ದೇಶವಿಲ್ಲದ ಸಾಹಿತ್ಯ ಇಲ್ಲ. ಪುತಿನ ಅವರ ಗೋಕುಲ ನಿರ್ಗಮನ ನಾಟಕದಿಂದ ತುಂಬಾ ಪ್ರಭಾವಿತ ನಾನು. ಮಥುರೆಗೆ ತೆರಳಿದ ಕೃಷ್ಣ ಮತ್ತೆ ಬರಲಿಲ್ಲ ಗೋಕುಲಕ್ಕೆ, ರಾಧೆಯನ್ನವ ನೋಡಲಿಲ್ಲ. ಅದಕ್ಕೆ ಯಮುನೆಯಲ್ಲಿ ಬಿಟ್ಟ ಕೊಳಲನ್ನು ಸುಳಿಯು ಮಾಯಮಾಡಿತೇನೋ ?
ಗೆಲಲು ಪೋದ ಕೃಷ್ಣ ಮರಳಿ ಬರಲಿಲ್ಲ...

ಮತ್ತೆ ಈ ರಚನೆಗೆ ಪೂರಕವಾದದ್ದು ನನ್ನ ತಂಗಿ ಪೂಜಳ ಫೋಟೋ ಮತ್ತೆ ಸುನಿತಕ್ಕ. ಅವರಿಗೆ ಧನ್ಯ.

Monday, January 16, 2012

ಕೌರವನ ಸ್ವಗತ !

ಅಲ್ಲಿ ತೊಡೆಮುರಿದು ಬಿದ್ದ ಮೇಲೆ,
ಅಜ್ಜಾ ಭೀಷ್ಮ , ಜಲಸ್ಥಂಬನ ವಿದ್ಯೆ ಬೇಡವಿತ್ತು
ಮರಗಟ್ಟುವ ವಿದ್ಯೆ ಇರಲಿಲ್ಲವೇ ನಿನ್ನ ಬಳಿ ?

ಎಲ್ಲಿದೆ ಈಗ ಕಾಲನ ಕನ್ನಡಿ ?
ನೋಡಬೇಕಿತ್ತೊಮ್ಮೆ ಅದನು,
ಪ್ರಾಯಶ್ಚಿತ್ತದ ಗೆರೆಯಿದೆಯೆ ಹಣೆಯಲ್ಲಿ?
ತೊಡೆಯೇರು ಎಂದಿದ್ದೆ ದ್ರುಪದೆಗೆ
ಕುಸಿದಿತ್ತೆ ಧಾತು ?

ಭೀಮನ ಗದೆ ದೊಡ್ಡದೇನೂ ಅಲ್ಲ,
ಒಮ್ಮೆಗೇ ಗದೆಗೆ ಗದೆ ಸೇರಿ
ಠಣ್ ಎಂದಾಗಲೇ ಅರಿವಾಗಿತ್ತು ನನಗೆ,
ಪರಾಕ್ರಮದ ನನ್ನ ಕೈ ಜಡ್ಡುಗಟ್ಟಿ
ನೀರಿನ ಕ್ರಿಮಿಗಳ ನೆನೆಯುತ್ತಿತ್ತು !

ಇಲ್ಲ, ಸಾಯುವುದಿಲ್ಲ
ಇನ್ನೊಮ್ಮೆ ಸೂರ್ಯನ ಮುಖ ನೋಡಬೇಕು,
ಮೇಲೆ ಕ್ಯಾಕರಿಸಿ ಉಗಿದ ಎಂಜಲು
ಮೇಲಿಂದ ಸೀರ್ಪನಿದಾಗ
ಕಾಮನಬಿಲ್ಲನ್ನೊಮ್ಮೆ ಕಾಣಬೇಕು.

೧೬-೦೧-೨೦೧೨

ಕೌರವ - ಯಕ್ಷಗಾನ ಪಾತ್ರಧಾರಿ , ಕೆ ಗೋವಿಂದ ಭಟ್
ಫೋಟೊ - ದಿಗ್ವಾಸ್ ಹೆಗಡೆ

Sunday, January 8, 2012

ಹೀಗೊಂದು ಸ್ವಗತ :-


೧. 
ಅಪ್ಪ ನೆಟ್ಟಾಲದ ಮರವ ಹುಡುಕುತ್ತಿದ್ದೆ
ಕೊನೆಗೆ ಟ್ರಂಕಿನ ಮೂಲೆಯಲ್ಲಿದ್ದ 
ಹತ್ತುಪೈಸೆಯ ನಾಣ್ಯ ಸಿಕ್ಕಿತು.


೨.
ಅಮ್ಮನ ಮಡಿಲಮೇಲೊರಗುವುದು ಖುಷಿ,
ಹರಳೆಣ್ಣೆ ನೀಗುವುದೇ ಕಾಲ ನೋವ ?


೩.
ಮಳೆಹನಿ ಸೋಕದೆ ಬಿತ್ತಕ್ಕೆ ಹುಟ್ಟಿಲ್ಲವೇ ?
ಇದೆ,
ಅವಳ ಕಣ್ಣೀರು ಬಿದ್ದಾಗ ಹೀಗೊಂದು ಹುಟ್ಟು !