Sunday, February 8, 2015

ಒಂದು ಪ್ರೇಮ ಕತೆ

ಅಂಗಡಿಯ ಮಾಲಿಕನು ದೊಡ್ಡ ಮೂಗಿನ ಸಿಡುಕ
ಕೋಪಬಂದರೆ ಅವನು ಸಿಂಗಳೀಕ;
ಅವನ ಜೊತೆಗಿರುವವನು ಹದಿನೆಂಟು ಹರೆಯದವ
ಮೀಸೆ ಬೆಳೆಯುವ ಹುಡುಗ, ಅಂಜುಬುರುಕ.

ಮಾಲಿಕನ ಮಗಳವಳು ಶಾಲೆ ಮೆಟ್ಟಿಲು ತಪ್ಪಿ
ಮನೆಯ ಒಳಗೇ ಟೀವಿ ನೋಡುವವಳು
ಅಂಗಡಿಯ ಕೀಲಿಕೈ ಕೊಡುವ ದಿನಚರಿಯಲ್ಲಿ
ಮೀಸೆಯೊಳಗಿನ ನಗುವ ಕಾಣುವವಳು

ಒಮ್ಮೊಮ್ಮೆ ಅಂಗಡಿಯ ದಿನಸಿ ರಾಶಿಯ ನಡುವೆ
ಅವಳ ನೆನೆಯುತ ಹುಡುಗ ಕುಳಿತಿರುವನು
ಮೆಣಸು ಕೇಳಿದ ಜನಕೆ ಸಕ್ಕರೆಯ ಕಟ್ಟುವನು
ಮಾಲಿಕನ ಬೈಗುಳಕೆ ಸೋಲುವವನು.

ಯಾವುದೋ ಕಾಲದಲಿ ಮಾಲಿಕನ ತೋಟದಲಿ
ಹೊಸತು ಮಲ್ಲಿಗೆ ಬಳ್ಳಿ ಹೂ ಬಿಟ್ಟಿತು
ಅದನು ನೋಡುತ ನಿಂತ ಹುಡುಗನಾ ಮನದಲ್ಲಿ
ಮಲ್ಲಿಗೆಯ ಗಂಧವೂ ಒಲಿದು ಬಂತು.

ಎಲ್ಲ ಕತೆಗಳ ಹಾಗೆ ಕಲಹವಾಯಿತು ಎನುವ
ನಿಮ್ಮ ತೀರ್ಮಾನಗಳ ಪಕ್ಕಕಿಡಿರಿ
ಮಾಲಿಕನ ಮಗಳನ್ನು ಮದುವೆಯಾದನು ಹುಡುಗ
ಹೊಸ ವಧೂವರರನ್ನು ಹರಸಿಬಿಡಿರಿ.

2 comments:

Badarinath Palavalli said...

ಮುಂದೆ ಇಬ್ಬರೂ ಸೇರಿ ಹುರಿಗಡ್ಲೇ ಸಕ್ಕರೆ ಪೊಟ್ಟಣ ಕಟ್ಟಿದರು ಎಂಬುವಲ್ಲಿಗೆ ಪ್ರೇಮ ಪುರಾಣವಿಲ್ಲಿ ಸುಖಾಂತ್ಯ ಕಂಡಿತು.

sunaath said...

ತುಂಬಾ ಖುಶಿ ಕೊಡುವ ಕವನ, ಖುಶಿ ಕೊಡುವ ಕಥೆ.
ಪ್ರೇಮಕ್ಕೆ ಜಯವಾಗಲಿ!