Saturday, February 7, 2015

ಹೂವು-ಹುಡುಗಿ

ಮೇಲು ಮಹಡಿಯವರೆಗೆ ಹಬ್ಬಿ ನಿಂತಿದೆ ಜಾಜಿ
ಹೂವ ನೋಡುವುದೇನು, ಎಂಥ ಸೊಗಸು
ಕೆಳಗೆಳೆದು ಬಳ್ಳಿಯನು ಹೂವ ಬಿಡಿಸುವ ಅವಳು
ಜಾಜಿಮಲ್ಲಿಗೆಗಿಂತ ಸೂಜಿ ಬಿರುಸು.

ನೆರೆಮನೆಯ ಕಣ್ಣುಗಳ ಜೊತೆಗೆ ಸೇರವು ಕಣ್ಣು
ಹಾದಿಯಲಿ ನಾ ಬರಲು ಒಂದು ನೋಟ;
ಅಮ್ಮನೆಲ್ಲಿಹಳೆಂದು ಖಾತ್ರಿಪಡಿಸುವ ಕೂಗು
ಹೂವುಗಳು ಮಿತಿಯೆನುವ ಮೋಸದಾಟ

ಗುನುಗುವಳು, ಒಂದೆರಡು ಸಾಲಿನಲಿ ನಿಲಿಸುವಳು
ಹೊಸತೊಂದು ಹಾಡನ್ನು ಹೊಸೆಯುವವಳು
ಯಾರಾದರೂ ಅವಳ ಕರೆಯೆ ಬೇಸರಪಟ್ಟು
ಮುನಿಸಿನಲಿ ಬಂದವರ ಬಯ್ಯುವವಳು

ಮೊನ್ನೆ ಹೀಗೆಯೆ ಸಂಜೆ ಅವಳ ಮನೆ ಬಾಗಿಲಿಗೆ
ಯಾವುದೋ ಧ್ಯಾನದಲಿ ಹೋದೆ ನಾನು;
ಅವಳು ಸೀರೆಯನುಟ್ಟು ತಂದು ಕೊಟ್ಟಳು ಕಾಫಿ
ಯಾರಿಗೋ ತಂದಿಟ್ಟ ಸಿಹಿಗಳನ್ನು

ಜಾಜಿಹೂವಿದೆ ಇಂದು ಕೊಯ್ಯುವರು ಇಲ್ಲಿಲ್ಲ
ದಾರಿಯೂ ಎಂದಿನದೆ, ಕಲ್ಲು ಮುಳ್ಳು
ನೆರೆಮನೆಯ ಜನಕೆಲ್ಲ ಮದುವೆಯಾಗಿದೆಯೇನೊ
ಬೇಸರದಿ ಬಾಗುತಿದೆ ಜಾಜಿಗೆಲ್ಲು.

2 comments:

Badarinath Palavalli said...

ನೆರೆ ಮನೆಯವರಿಗೆಲ್ಲ ಮದುವೆ, ಅವರೆಡೆಗೆ ಖುಷಿ ಇದ್ದರೂ, ವ್ಯಥೆ ಇತ್ತ ಕಡೆ ನೂರು.... :-(

sunaath said...

ಪರರ (ವಿಶೇಷತಃ ಹುಡುಗಿಯರ) ಮನಸ್ಸನ್ನು ಅರ್ಥ ಮಾಡಿಕೊಳ್ಳಬಲ್ಲವನೇ ಕವಿ!