ಮರೆಯದಿರು ಓ ದುಂಬಿ ಈ ಜೇನು ಹೂವು
ತೊರೆಯದಿರು ಎಂದಿಗೂ ಕೊಡದೆ ಇರು ನೋವು !
ಆ ಬೆಳಗು ಮೊಗ್ಗರಳಿ ನಾ ವಿಶ್ವ ನೋದಿರಲು
ನಿನ್ನ ಕಣ್ಣಿನ ನೋಟ ನನ್ನ ಸೆಳೆಯಿತು
ನಿನಗಾಗಿಯೇ ನಾನು ಎಂದೆನ್ನ ಮನದ ದನಿ
ಪ್ರೇಮ ಭಾವದಿ ನಕ್ಕು ನಿನ್ನ ಕರೆಯಿತು
ಒಮ್ಮೆ ಹೀರಿದ ಜೇನು ಆಯಿತೇ ಕಹಿ ಒಳಗೆ ?
ಮರೆತೆಯಾ ಈ ಹೂವ ಪ್ರೀತಿ ?
ನಿನಗೋ ಹಲಬಗೆ ಹೂವು ನನಗೊಬ್ಬನೇ ದುಂಬಿ
ಏನಿದರ ಇಬ್ಬಗೆಯ ನೀತಿ ?
ಇಂದರಳಿ ನಾಳೆಯೊಳು ಸೊರಗಿ ಹೋಗುವೆ ನಾನು
ಆ ತನಕ ನಿನ್ನ ಪ್ರೀತಿ ಬೇಕು
ನಿನ್ನ ಪ್ರೇಮದ ಹೊರತು ಬೇರೇನೂ ನಾನೊಲ್ಲೆ
ಅಷ್ಟೆ ದಿನ ಬದುಕಿರಲು ಸಾಕು
ಮುಗಿದೇ ಹೋಯಿತು ಬದುಕು ಈ ದಿನದ ಸಂಜೆಯಲಿ
ನಿನ್ನ ಕನಸಿಗೆ ಇಲ್ಲಿ ಕಂಪಾಯಿತು
ನಿನ್ನೊಲವ ದಾರಿಯಲಿ ಸಾವು ನೋಡಲಿ ಜೀವ
ಒಟ್ಟಿನಲಿ ಈ ಬಂಧ ಇಂಪಾಯಿತು
೧೨/೦೧/೨೦೦೫
No comments:
Post a Comment