ನಿನ್ನ ನಗುವಿನ ಹಿಂದೆ ನೋವುಗಳ ಸರಮಾಲೆ
ಇದ್ದೀತು ಬೇಸರವು ನಲಿವು ನುಂಗಿ!
ಬೇಸಿಗೆಯು ಉರಿಸೀತು; ಮಳೆಯೋ ಕೊಳೆಸೀತು
ಕಾಯದಿರು ನೋಯದಿರು ನನ್ನ ತಂಗಿ.
ಪುಣ್ಯಪುರುಷರು ಇಲ್ಲ ಪಾಪಿಗಳೂ ಇಲ್ಲಿಲ್ಲ
ಸಿದ್ಧ ಔಷಧಿಯಿಲ್ಲ ನೋವುಜ್ವರಕೆ
ಗಟ್ಟಿಯಾಗಲೆ ಬೇಕು ಬಿಸಿಲಿಗೂ ಮಳೆಗಳಿಗೂ
ಬದುಕು ಹಸನಾಗುವುದು ತನ್ನತನಕೆ!
ಇಂಥ ಬರಗಾಲದಲು ತನ್ನೊಡಲ ಚಿಗಿಯುತಿಹ
ಮರದ ಬಳಿ ತೋರಿಕೊಳು ನಿನ್ನ ಗೋಳು!
ಬರಿಯ ಜೀವರು ನಾವು, ನಮಗೆ ಸ್ವಾರ್ಥವೆ ಮುಖ್ಯ
ಮಳೆಗಾಲಕ್ಕೊಂದೆ ಬೆಳೆ ಹೆಸರು ಕಾಳು.
ಎಂದೊ ಉರಿಸಿದ ಬೆಂಕಿ ಆರದೆಯೆ ಇಹುದೇಕೆ
ನಾಳೆ ಹೊಳೆಯುವ ತಾರೆಗೇಕೆ ಒಲವು?
ಇಂದಿನಲಿ ನನಗಿಷ್ಟು ನಿನಗಿಷ್ಟು ರಸನಿಮಿಷ
ಇದುವೆ ನಮ್ಮಯ ದಾರಿ; ಬಾಳ ಹರಿವು.
2 comments:
ಇದೇ ಬದುಕನ್ನು ಸಹನೀಯ ಮಾಡಬಹುದಾದ ದಾರಿ.
ತಂಗಿಯ ಬಾಳು ಹಸನಾದೀತು ಅಣ್ಣನ ಅಕ್ಕರೆಯ ನುಡಿಗಳಿಂದ...
ರಕ್ಷಾ ಬಂಧನದ ಶುಭಾಶಯಗಳು ಕಿಟ್ಟಣ್ಣ....
Post a Comment