Tuesday, April 9, 2013

ಹಾದಿಹೋಕನ ಹಾಡು


ಹಾದಿಹೋಕನ ಹಾಡು ಏನನೋ ಕೊಟ್ಟೀತು
ನಾನು ಹಾಡುವ ಹಾಡು ನಿನ್ನದಲ್ಲ
ನಿನ್ನ ಹಾಡನು ಕೇಳಿ ಸ್ಪೂರ್ತಿಗೊಂಡವ ನಾನು
ಹಾಡದಿದ್ದರು ಬರೆವೆ ಕತೆಯನಲ್ಲ.

ಊರೂರು ತಿರುಗುವಾ ಅಲೆಮಾರಿ, ತಿರುಗಾಡಿ
ನಿನ್ನ ಹಾಡಲಿ ಹುಡುಕಲಾರೆ ತಪ್ಪು
ನಾನು ಬರೆವಂತಹದು ಬರಿಯ ಶಬ್ಧದ ಸಾಲು
ನಿನ್ನ ಹೂವಿನ ತನಕೆ ನನ್ನ ಸೊಪ್ಪು.

ಅನುಭವದ ಪಾಕದಲಿ ನೀನಂತೂ ನಳರಾಜ
ನಾನಿನ್ನೂ ತರಕಾರಿ ಹೆಚ್ಚುತಿಹೆನು
ಮೃಷ್ಟಾನ್ನವೈ ನಿನ್ನ ಕೈಯ್ಯಡುಗೆ ಓ ಸಖನೆ
ನಿನ್ನ ಪದಗಳಿಗೆಂದು ಶರಣ ನಾನು.

ಹರಸಿಬಿಡು ಕರುಣೆಯಲಿ ಸಾಮೀಪ್ಯ ಬರುವವೊಲು
ನಿನ್ನ ಪ್ರೀತಿಯೆ ನನ್ನ ಪೊರೆಯುತಿರಲಿ
ನಿನ್ನಂತೆ ನಾನಾಗಿ ಹಾಡುವೆನು ಎಂದಲ್ಲ
ನನ್ನ ಹಾಡುಗಳಲ್ಲೂ ತ್ರಾಣ ಬರಲಿ.

1 comment:

sunaath said...

ವಿದ್ಯೆಗೆ ವಿನಯವೇ ಭೂಷಣ ಎನ್ನುವುದೇನೋ ಸರಿಯೇ. ಆದರೆ ಮಲ್ಲಿಗೆಯ ಹೂವಿಗೆ ತನ್ನ ಪರಿಮಳವೇ ತಿಳಿಯದು ಎನ್ನುವಂತೆ, ನಿಮಗೆ ನಿಮ್ಮ ಕಾವ್ಯದ ಸುಗಂಧ ತಿಳಿಯದು ಎನ್ನಬಹುದೆ?