Tuesday, April 9, 2013

ನೀವು ಕುರಿಯನ್ನು ನೋಡಿದ್ದೀರಾ


ನೀವು ಕುರಿಯನ್ನು ನೋಡಿದ್ದೀರಾ?
ನೋಡಿದ್ದೇವೆನ್ನುವುದು ಸಿದ್ಧ ಉತ್ತರ!
ಸೊಂಪಾಗಿ ಉಣ್ಣೆಸೋಪಾನದಲಿ ಬೆಳೆದ ಕುರಿಯಲ್ಲ;
ಗೋಣಿನ ಮೇಲೆ ಇಷ್ಟುದ್ದ ಹಗ್ಗ ಕಟ್ಟಿ
ನಡೆದರಲ್ಲ; ಓಡದಿರೆ ತಟ್ಟಿ
ಬೆದರದೇ ಮುನ್ನುಗ್ಗುವ ಕುರಿಯನ್ನು ನೋಡಿದ್ದೀರಾ?

ಏನು? ಕನ್ನಡಿ ನೋಡಿ ಬರುತ್ತೀರಾ?
ಷರಟನ್ನು ಸ್ವಲ್ಪ ಮೇಲೆಳೆದು;
ಮೈಯ್ಯ ನೂಲಳೆದು ನೋಡಿ
ಅದರೊಳಗೆ ಬೊಮ್ಮನೋ ಅವನಪ್ಪನೋ ಇದ್ದಾನೆಂದು
ಇಷ್ಟರವರೆಗೆ ನಂಬಿದಂತಃಕರಣವೂ ಬಂಜೆ;
ಸೊನ್ನೆ ಸುತ್ತಿದವರೇ ಎಂಟು ಹೆತ್ತಿದ್ದಾರೆ ಸ್ವಾಮಿ.

ಒಲ್ಲೆ! ಕುರಿಯೆಂಬುದನ್ನು ವಿರೋಧಿಸುತ್ತೇನೆ
ಎಂದವರ ಹೆಡೆಮುರಿಕಟ್ಟಿ ಮಟನ್ನು ತಿನ್ನಿಸಿ;
ಸಾಧ್ಯವಾದರೆ ಇರಲಿ ಜೊತೆಗಿಷ್ಟು ಮದ್ಯ,
ಪನ್ನೀರು ಕೋಸಂಬರಿಗಳು ಹರಿತವಾಗಿಲ್ಲವೆಂದು
ಬೆಳಗ್ಗೆ ಇಷ್ಟುದ್ದ ಕೊಚ್ಚಿದವರಿಗೂ ತಂಪಾಗಲಿ;
ಅಪೌರಷ ವಿದ್ಯೆಗೆಲ್ಲಾ ಡಿಜಿಟಲ್ ಯುಗದ ಪ್ರೇಯರ್ ಹಚ್ಚಿ
ಬೆಳಗಿಸಿ ಬಿಡಿ ನಿತ್ಯನೂತನ ವಿದ್ಯುದ್ದೀಪ; ಆರದಂತೆ.

ಮುಂದೆ; ಗುರ್ರ್ ಎನ್ನುವ ನಾಯಿಗಳನ್ನು ಬಿಡಿ
ಹಿಂದಿನಿಂದಲ್ಲೂ ಕೋಲಿರಲಿ;
ಕೆಲವು ವೀರ ಕುರಿಗಳು ತಾನು ಸಿಂಹನೆಂದೇ ಬ್ಯಾ ಬ್ಯಾ
ಎಂದರೆ ಅವನ್ನು ಮೊದಲು ಮುಗಿಸಿಬಿಡಿ.
ನಿಟ್ಟುಸಿರು ಬೇಡ, ನಮ್ಮ ಪ್ರತಿಭಟನೆಯಾಗುವುದು
ನೆತ್ತರ ಕ್ರಾಂತಿಯಲ್ಲಿ; ಶಾಕಾಹಾರಿಗಳಿಗೇನು ಕೆಲಸ?
ನೀವು ಕುರಿಯನ್ನು ನೋಡಿದ್ದೀರಾ?
ನೋಡಿಲ್ಲ; ನಾನು ಎಂಬಷ್ಟೇ ಸ್ಪಷ್ಟ ಉತ್ತರ.

1 comment:

sunaath said...

ನಿಮ್ಮ ಮಾತನ್ನು ಒಪ್ಪಲೇ ಬೇಕು!