ನನಗೆ ನೋವಿನ ಎಳೆಯು ಮಂಜಾಗಿ ಕಾಣುವುದು
ನಲಿವೇನೋ ಹೊಮ್ಮುವುದು ಬೆಳಕಿನಂತೆ
ನಾನು ಬರೆಯುವ ಹಾಡಿಗಿನ್ನೆಷ್ಟು ತುಂಬುವುದು?
ಬದುಕು ನೋವ್ ನಲಿವುಗಳ ದೊಡ್ಡ ಸಂತೆ
ಕವನ ಜನಿಸುವ ಸಮಯ ನಿಶ್ವಿಂತನಾಗುವೆನು
ಕವನ ಕೇಳುವ ನೆಪದಿ ಮಾತು ಮರೆವೆ
ಕಚ್ಚುವುದು ಬೆಚ್ಚುವುದು ನುಡಿಯ ಆವೇಶಕ್ಕೆ
ಕವಿಗೇನ್ ಮಣಿಯುವುದು; ನುಡಿಗೆ ಮಣಿವೆ
ಪೂರ್ವಸೂರಿಗಳೆಲ್ಲ ರಮ್ಯದಲಿ ನವ್ಯದಲಿ
ಹೇಳಿದ್ದು ಬಹಳಷ್ಟು ಗಳಿಕೆ ಶೂನ್ಯ!
ನೋಟುಗಳ ಕಟ್ಟಿನಲಿ ಮನುಜ ನಿದ್ರಿಪನೇನು
ಮರಣದಲಿ ಸಾಕೇನು ಕೀರ್ತಿ ಮಾನ್ಯ.
ಉದ್ಧರಿಸುವಾಸೆ ಕವನಕ್ಕೊ ಕವಿಗಳಿಗೊ
ಇರುವುದೇ? ಹಸಿ ಸುಳ್ಳು ಎಂಬೆ ನಾನು
ಕವಿಯು ಬರೆಯುವ ಹಾಡು ಕನ್ನಡಿಯ ಗಂಟಹುದು
ತೋರಬಹುದಷ್ಟೆ;ಪಡೆಯಲಾರೆ ನೀನು.
ಬಡತನಕೆ ಮರುಗಿದರು ಕ್ರೌರ್ಯಕ್ಕೆ ಉಗುಳಿದರು
ಅಕ್ಷರಕೆ ಉತ್ತರವ ಕೊಡುವನಾರು?
ಇಂತ ಕಾವ್ಯವನೋದಿ ಮೇಜು ಕುಟ್ಟಿದ ಸದ್ದು
ಬರೆದವಗೆ ಸದ್ಗತಿಯು;ಗಾಜು ಚೂರು
ಅನುಭವದ ಮಾತುಗಳ ಬರೆದು ಸೃಷ್ಟಿಸಿದಾತ
ನೆರೆಮನೆಯ ಜನಕೆಲ್ಲ ಕಟ್ಟುಕತೆಯು;
ತನ್ನ ವಿಷಯದ ಹೆಮ್ಮೆ; ನುಡಿಗಟ್ಟಿಗಿಹ ಬಲ್ಮೆ
ಓದುಗನ ತೋಟದಲಿ ಬೆಳೆದ ಕಳೆಯು.
ಕಾವ್ಯ ಜೀವನಪ್ರೀತಿ; ನನ್ನ ನೋಟದ ಕಾಣ್ಕೆ
ನಿಮಗೂ ಪ್ರೀತಿಯೆ ಗುರುತು ಬದುಕಿನಲ್ಲಿ
ನೋವ ಹಂಚುವುದೇನು ಖಾರ ತೆಗಳುವುದೇನು
ಹಾಯಾದ ಸೊಗದುಸಿರು ಕಾವ್ಯದಲ್ಲಿ.
ರಮ್ಯವೂ ಸುಂದರವೂ ಮನಸಹಜದಾಪೇಕ್ಷೆ
ಹಕ್ಕಿನೋಟವು ಇರಲಿ ನನ್ನ ಕಾವ್ಯ
ಸಹಜತೆಯ ಒಪ್ಪುವುದು; ಪ್ರೀತಿಯನು ಹೊದ್ದುವುದು
ಹಿತಕೆ ನಿಜಮಾನಸಕೆ ಇಳಿಯೆ ಧನ್ಯ.
1 comment:
ಈಶ್ವರ ಭಟ್ಟರೆ,
ಮೂರು ತಿಂಗಳುಗಳ ಕಾಲ ಸುಷುಪ್ತಿಯಲ್ಲಿ ಇದ್ದಿರೇನೋ ಎಂದುಕೊಳ್ಳುತ್ತಿದ್ದೆ. ಈಗ ನೋಡಿದರೆ, ನಿಮ್ಮ ಅಂಗಳದ ತುಂಬೆಲ್ಲ ಮಲ್ಲಿಗೆ ಹೂಗಳು ಬಿರಿದಿವೆ.
ಸೊಗಸಾದ ಕವನ.
Post a Comment