Tuesday, March 29, 2011

ರಾಧಾ ಕೃಷ್ಣಾ .......

 
ಕೊಳಲೂದಿ ಸಖಿಯರನು ಕರೆದನಾ ಗೊಲ್ಲ
ರಾಧೇ ನಿನ್ನನು ಉಳಿದು ಬಂದಿರುವರೆಲ್ಲ !

ಯಮುನಾ ನದೀ ತೀರದಲಿ ಓಡಿ ಕರೆದ
ಹುಡುಕಾಡಿ ಬಸವಳಿದನು ವಿರಹದಿಂದ
ರಾಧೇ ಎನುವ ಕೂಗು ನೀ ಕೇಳಲಿಲ್ಲ
ಕೇಳಿದೆಯೋ, ಮರೆತಿಹೆಯೋ ನೀ ಬಾರಲಿಲ್ಲ !!
----
ಕೃಷ್ಣಾ ನೀ ಕರೆದಾಗ ನಾ ಬಾರದಿಹೆನೆ ?
ನೀ ಸಿಗದೇ ಆರುವುದೇ ವಿರಹದಾ ಬೇನೆ ?
ಹೂವನ್ನೇ ತುಂಬಿರುವ ಪ್ರೇಮದುದ್ಯಾನ ನೀನು
ಅಲ್ಲೆಲ್ಲೋ ಸೆರೆಸಿಕ್ಕ ಬಿಡಿಹೂವು ನಾನು

ಕೊನೆಯೆ೦ತೊ ಅರಿಯದಿಹ ಈ ಪ್ರೇಮ ಕತೆಗೆ
ನೋವ ಬೆನ್ನುಡಿ ಇಹುದೆ ಪ್ರೀತಿ ಉನ್ನತಿಗೆ ?

ಈಶ್ವರ ಕಿರಣ ಭಟ್
ಆಗಸ್ಟ್ ೨೦೧೦

Sunday, March 27, 2011

ಕುಟುಕುವ ಚುಟುಕ ...

ನನ್ನ ಕೇಳಿದನೊಬ್ಬ ಏನು ಪ್ರಾಸ, ಛಂದಸ್ಸು
ಇದರಿಂದ ಸಾದ್ಯವೇ ಜಾಸ್ತಿ ಆಯುಸ್ಸು
ನಾನೆಂದೆ , ಇದು ಮುಖ್ಯ ಗಳಿಸಲಿಕೆ ಭೇಷು !
ಇಲ್ಲವಾದರೆ ಗಳಿಸಬಹುದಲ್ಲ ಕಾಸು ?!

ರಕ್ತಕ್ಕು ಸ್ವಾರ್ಥಕ್ಕೂ ಎಲ್ಲಿಹುದು ನಂಟು ?
ಸ್ವಾರ್ಥವಿರುವುದು ಇದ್ದಲ್ಲಿ ಗಂಟು
ಈಗಾಗುತಿಹುದಲ್ಲ , ಇಲ್ಲೆಲ್ಲಾ ಉಂಟು
ರಕ್ತದಾನವಿದಲ್ಲ , ಬರಿ ಆಕ್ಸಿಡೆಂಟು !!
 
ಕವಿರಾಯ ನೀ ಕೇಳು ನನ್ನ ಕೈಲಿದೆ ಗನ್ನು
ಇದಕಿಂತ ಹರಿತವೆ ನಿನ್ನ ಕೈಲಿಹ ಪೆನ್ನು ?
ಈ ಪ್ರಶ್ನೆಗುತ್ತರವ ಆಮೇಲೆ ಕೇಳು
ಮೊದಲಾಗಲಿ ಹಸಿದವಗೆ ಹಾಲು,ಬನ್ನು !!

ಮಗುವೆ ನೀ ಕೇಳು ಈ ಜಗದೊಳಿಟ್ಟಿಹರು ಎಲ್ಲಾ
ಸುಣ್ಣ ತಿನ್ನುವುದ್ಯಾಕೆ ಇಹುದಲ್ಲ ಬೆಲ್ಲ !
ನಿನ್ನ ನಗುವನೇ ನಂಬಿ ಕುಳಿತವರು ಇಹರು
ನೀನತ್ತೆ ಎಂದರೆ ಅವರ್ಯಾರು ನಗರು!!

ಈ ಕಷ್ಟ ಸುಖಗಳಿವು ತಿಳಿದಂತೆ ಜೇಪಿ !
ಟೀ ಕುಡಿದಾದ ಮೇಲ್ ನೆನೆದಂತೆ ಕಾಪಿ!!
ಸಿಗದ ವಸ್ತುಗಳಿಲ್ಲ ಈ ಜಗದಿ ಕೇಳು
ಇರುವಲ್ಲಿವರೆಗೆ ನೀ ನಗುನಗುತ ಬಾಳು ..






Tuesday, March 15, 2011

ನನ್ನ ಒಲವಿನ ಹುಡುಗಿ..

ನನ್ನ ಒಲವಿನ ಹುಡುಗಿ ಬೆಳ್ಳಕ್ಕಿ ನಗು ಚೆಲ್ಲಿ 
ಕಾದಿಹಳು ನನ್ನ ನಗೆ ನೋಡಲೆಂದು 
ಮಾತು ಕನಸುಗಳಲ್ಲಿ ಅವಳೆ ಹರಿದಾಡುವಳು 
ಮತ್ತೆ ಬರುವಳು, ಎಲ್ಲಿ? ಎಂದು ?

ಅವಳು ಮಾತಾಡಿದರೆ ನಾನು ಮಾತನೆ ಮರೆತು
ಮೀಯುವೇನು ಅವಳುಸಿರ ಹಾಡಿನಲ್ಲಿ 
ನಾನೊಮ್ಮೆ ಮುನಿದರೂ ಅವಳ ದನಿ ತಡೆಯುವುದು
ಮತ್ತೆ ಕರಗುವೆ ಒಲವ ಮಾತಿನಲ್ಲಿ

ಅವಳು ಮಾತಾಡದಿರೆ ನನ್ನ ದನಿ ಅಡಗುವುದು
ನೋಯುವುದು ನನ್ನ ಮನ ಅವಳ ಹುಡುಕಿ 
ಎಲ್ಲೋ ಕರೆದಂತೆ , ಕರೆದು ದನಿ ಕೊಟ್ಟಂತೆ 
ಕಾಯುವೆನು ಎಲ್ಲ ದಿನ ಅವಳಿಗಾಗಿ..


ಈಶ್ವರ ಕಿರಣ ಭಟ್
೧೦/೦೩/೨೦೧೧