Sunday, December 29, 2013

ನಾಯಿಯಿದೆ ಎಚ್ಚರಿಕೆ.

ನಮ್ಮೂರ ಓಣಿಯಲಿ ಇತ್ತು ದಾಂಡಿಗ ನಾಯಿ
ಪರವೂರ ಗಲಭೆಗೇ ಬೊಗಳುತಿತ್ತು;
ಸ್ವಂತ ಓಣಿಯ ಜಗಳ ಇದರ ಪರಿಧಿಯದಲ್ಲ
ಎಂದೆನುತ ಪರಜನರ ಮೂಸುತಿತ್ತು.

ದೂರದೂರಲಿ ಸತ್ತ ಕಾಗೆ ನರಿಗಳ ಹೆಣವ
ಅಗೆದಗೆದು ಊಳಿಡುತ ಸಾರುತಿತ್ತು
ಸ್ವಂತ ಓಣಿಯಲಿರುವ ಯಜಮಾನ ಸತ್ತರೂ
ಮೂಲೆಯೊಳು ಮುದುರಿ ತಾ ಮಲಗುತಿತ್ತು.

ಹಿಂದೊಮ್ಮೆ ಪರವೂರ ನಾಯಿಗಳ ಓಲೈಸಿ
ಓಣಿಯಲಿ ಕ್ರಾಂತಿಯೆನೆ ಬೊಗಳಿ ರಾಗ;
ತನ್ನ ಕಜ್ಜಿಯ ತುರಿಕೆ ಸಾರ್ವಜನಿಕರಿಗೆಂದು
ಕರೆಕರೆದು ತೋರುವುದು ತನ್ನ ರೋಗ.

ಇಂತ ನಾಯಿಯ ಚಿತ್ರ ಮಾಧ್ಯಮದ ತುಂಬೆಲ್ಲ
ಪರರ ಕಾಳಜಿ ಚಿಂತೆ ನಾಯಿಗೆಂದು
ಪ್ರತಿಯೊಂದು ಸನ್ಮಾನ ಪಾರಿತೋಷಕ ಕೊಟ್ಟು
ದೊಡ್ಡ ಪೀಠವ ಬಿಟ್ಟು ಕೊಟ್ಟರಿಂದು.

ಪರರನ್ನು ಹೊಗಳುವುದು ತಮ್ಮವರ ಬೊಗಳುವುದು
ಈ ನಾಯಿ ವ್ಯವಹಾರ ತಿಳಿಯಲಿಲ್ಲ;
ನಾಯಿ ಕಚ್ಚುವ ದಿನಕೆ ಆಸ್ಪತ್ರೆ ಹುಡುಕಿದರು
ರೋಗ ಮಾಡಿದ ಕೇಡು ಗ್ರಹಿಸಲಿಲ್ಲ.

Tuesday, December 24, 2013

ನಿನ್ನ ಸ್ನೇಹದ ಸವಿಯ ನಾನರಿವ ಮೊದಲಿಗೇ

ನಿನ್ನ ಸ್ನೇಹದ ಸವಿಯ ನಾನರಿವ ಮೊದಲಿಗೇ
ನೋವು ಬರಬೇಕಿತ್ತು ನಮ್ಮ ಜೊತೆಗೆ;
ಸುಖದ ಸಖ್ಯಕ್ಕಾಗಿ ನಲ್ಮೆ ಮರೆಯುವುದೇನೆ?
ತಪ್ಪೊಪ್ಪು ವ್ಯವಹಾರ ಪ್ರೀತಿಗಿಹುದೇ?

ನೀನಪ್ಪುವೆಡೆಯಲ್ಲಿ ಸುಖದ ಕ್ಷಣಗಳ ಹುಡುಕಿ
ಅನುದಿನವು ಬದುಕುವುದ ಕನಸು ಕಂಡೆ;
ಯಾವುದೋ ತೋಳರಸಿ ನೀನು ಸುಖದಲಿ ನಕ್ಕೆ
ನಾನಿಂತು ಬಾಳರಸಿ ನೋವನುಂಡೆ.

ಮಳೆಗೆ ಬೇರನು ಬಿಟ್ಟು ಮೇಲೇರಿದಾ ಲತೆಗೆ
ಬಿಸಿಲು ತಾಕಿದ ದಿನಕೆ ಬಂತು ಕೋಪ
ನೀನು ಸುಖದಲಿ ನಕ್ಕು, ನೋವಲ್ಲಿ ನೆನಪಿಸಿದೆ
ಸ್ವಚ್ಚಂದ ಬದುಕಿನಲಿ ಯಾರ ಶಾಪ?

ನಿನ್ನ ನಲಿವಿನ ಲೆಕ್ಕ ನಾನು ಕೇಳುವುದಿಲ್ಲ
ಹಂಚಿಕೊಳ್ಳಲೆ ನೋವು? ಬೇಡ ನನಗೆ
ನಿನಗೆ ನೀನೇ ಮದ್ದು ನನಗೆ ನಾನೇ ಮುದ್ದು
ಎಲ್ಲ ಮುಗಿಯಲಿ ನೆನಪು ಸಾವಿನೊಳಗೆ.

Friday, December 20, 2013

ನಾವಿಬ್ಬರೊಂದಾಗಿ ಸಾಗಿ ದೂರಕೆ ಬಂದು

ನಾವಿಬ್ಬರೊಂದಾಗಿ ಸಾಗಿ ದೂರಕೆ ಬಂದು
ಇಲ್ಲೆಲ್ಲೋ ಬಚ್ಚಿಟ್ಟ ಮಾತುಗಳನು
ಬೇರಾರೂ ಬಯಸದೆಯೆ ನಕ್ಕು ತಲೆದೂಗುವರು
ಓ ಕವಿಯೆ ಕೇಳುತಿಹೆ ಯಾಕೆ ನೀನು?

ಮೊದಲ ಮಾತುಗಳೆಲ್ಲ ಆ ಹೊಳೆಯ ಸ್ಪರ್ಧಿಗಳು
ತೆರೆಯ ಮೇಲಿನ ತಾನ ಅದರ ಬಿರುಸು
ಹಾಲ್ನೊರೆಗೆ ಎದೆಹಿಗ್ಗಿ ಏರಿ ಬರುತಲ್ಲಿತ್ತೋ
ಅದರಾಚೆಗೆ ಇನ್ನೂ ಏರು ಕನಸು

ಅಂದೊಂದು ದಿನ ಮೌನ ಬಿಸಿಲಗಾಲದ ನದಿಯು
ಕಾದ ಮರಳಿಗೆ ಬಿತ್ತು ಕಣ್ಣನೀರು
ಯಾವುದೋ ಹೂವಿಂದ ಬರುವ ಗಂಧದ ಗಾಳಿ
ಮತ್ತೆ ಬೆರೆಸುತ್ತಿತ್ತು ನಮ್ಮ ಉಸಿರು.

ನಿನ್ನೆ ಬಂದವಳಿನ್ನು ಬರದೆ ಹೋದಾಳೆಂದು
ಈ ಹೊಳೆಯ ಹರಿವಿಗೂ ಅರಿದಂತಿದೆ
ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ ದಂಡೆ
ನಲ್ಲ ನಲ್ಲೆಯ ಪ್ರೇಮ ಸುಳಿಯಲ್ಲಿದೆ.

ಬಚ್ಚಿಟ್ಟ ಮಾತುಗಳ ಹೂತುಬಿಡು ಓ ಕವಿಯೆ
ಇಂತ ಮಾತುಗಳನ್ನು ಹಾಡಬೇಡ
ಅವಳನ್ನು ತಲುಪಿದರೆ ಈ ನೋವು ಮೆರವಣಿಗೆ
ನನ್ನ ಸೇರುವಳವಳು ; ಕೊಲ್ಲಬೇಡ.

Thursday, December 19, 2013

ಮದುವೆಯಲ್ಲಿ ಸಿಕ್ಕಿದವಳಿಗೆ!

ಯಾರದೋ ಮದುವೆಯಲಿ ರಾಶಿಯಿದ್ದವು ಹೆಣ್ಣು
ಮೀಸಲಾಗಿದ್ದವಳು ಕಣ್ಣುಗಳಿಗೆ;
ಮಳೆಗೆದ್ದ ಲತೆಯಂತೆ ಬಳುಕಿಯಾಡುತಲಿರಲು
ಆಸೆಯಾದಳು ಮನಕೆ, ಒಂದೆ ಕ್ಷಣಕೆ.

ಮದುವೆಯಾಗುವ ಸಖಿಯ ಬಳಿಯಿದ್ದು ಮನಗೆದ್ದು
ಏನನೋ ಹೇಳುವೊಲು ಕಣ್ಣು ತಿರುಗಿ
ನನ್ನ ನೋಡುತ ಹೀಗೆ ಮಾತನಾಡುವೆಯಲ್ಲ
ಈ ಚಂದ ಮುಚ್ಚುಮರೆ ಏಕೆ ಹುಡುಗಿ?

ಮುತ್ತು ಪೋಣಿಸಿ ನಿಂತ ನಿನ್ನ ಹಲ್ಲಿನ ಸಾಲು
ನಕ್ಕಂತೆ ಕರೆದಂತೆ ಕಂಡೆಯೇನ?
ಮಾತುಗಳನಾಡಲು ಕಾತರದ ಜೊತೆ ಭಯಕೆ
ಬೆಳಕು ಬೀರುವ ಜ್ಯೋತಿ ಕೂಡ ಮೌನ.

ಮದುವೆ ಮುಗಿಯಿತು ಇಂದು, ನಾನು ಮರೆವೆನೆ ನಿನ್ನ
ಅಂತರಂಗದ ಭಾವ ದಾಟಿದವಳೆ!
ಇನ್ನೆಲ್ಲೋ ಜೊತೆಬಂದು, ಪ್ರಶ್ನೆಗುತ್ತರವಾಗಿ
ನೀನು ಬರೆಯಲೆ ಬೇಕು ಸೊಗಸಿನವಳೆ.

Monday, December 2, 2013

ಮಲ್ಲೆಯಿಲ್ಲದ ದಿನ!

ಅವಳ ಕಣ್ಣೀರನ್ನು ಕಾಣದವನೇನಲ್ಲ;
ಕಣ್ಣೀರಿಗೂ ಉಂಟು ಮಲ್ಲೆ ಮಾತು.
ಮಲ್ಲಿಗೆಯ ದಂಡೆಯಲಿ ಹೂ ವಿರಳವಾದಂತೆ
ಕೇಳ್ದರೆನ್ನಯ ದನಿಗೆ ಏನಾಯಿತು?

ಹೂದಂಡೆ ಕಟ್ಟುವುದು ಸುಲಭಸಾಧ್ಯವೆ ಹೇಳಿ
ಎಲ್ಲದಿಕ್ಕಿಗೆ ಹೂವು ಒಲಿಯಬೇಕು;
ಹೂವರಳದ ದಿನಗಳಲಿ ಒಡಕು ಸೊಪ್ಪುಗಳಲ್ಲಿ
ಮಾಲೆಯನು ಹಣೆಯುವುದು ಒಂದು ಸೊಕ್ಕು!

ಎಂಥ ಮಾಲೆಯೊ ನಲ್ಲ! ಎನ್ನುತಲಿ ಮುತ್ತಿಡುವ
ಆತ್ಮತೋಷವ ಮಾಲೆ ತೋರಬೇಕು.
ಇಲ್ಲವಾದರೆ ಹೀಗೆ ಮಲ್ಲಿಗೆಯು ಇಲ್ಲೆನುತ
ಅವಳ ಕಣ್ಣೀರನೇ ಸುಖಿಸಬೇಕು.