Tuesday, December 25, 2012

ಪ್ರೀತಿಯೆಂದರೆ,..


"ನನ್ನ ಒಲವಿನ ಮಾತು ಕೇಳಿ ನಸುನಕ್ಕಳು
ನಿನಗೂ ಪ್ರೀತಿಯೆ ಹುಡುಗ? ಎಂದಳವಳು!
ಏನೆಂದು ಉತ್ತರವ ಬಯಸಿದಳೋ ಅವಳು
ಪ್ರೀತಿಯೆಂದರೆ ಕನಸು ಎಂದೆ ನಾನು!

ಕನಸು ಎಂದರೆ ಸಾಕೆ, ಕನಸೊಳೇತಕೆ ಇರುವೆ
ಕನಸಲ್ಲಿ ಬರುವೆನೇ? ಕೇಳ್ದಳಾಕೆ!
ಕನಸಿನೊಳು ಕಂಡಿಲ್ಲ, ಕನಸೆಂದುಕೊಂಡಿಹೆನು
ಎನುವ ಉತ್ತರ ಕೊಟ್ಟೆ! ಮುನಿದಳಾಕೆ.

ಸುಮ್ಮನಿರು ಮೌನದಲಿ, ನಾನು ಮಾತಾಡೆನು
ಎನುವ ಬಿಂಕದಿ ಅವಳು ನೋಡಲೆನ್ನ.
ಕಣ್ಣುಗಳ ನೋಡುವುದು, ಸುಮ್ಮನೇ ಕೆಣಕುವುದು
ಮತ್ತೆ ಮಾತಿಗೆಳಸುವುದು; ಏನು ಚೆನ್ನ!

ನಾಳೆ ಬರುವೆನು ಎಂಬ ಮಾತಿನೊಳಗಡೆ ಬೇನೆ
ಬೇಡ ಹೋಗದಿರೆಂಬ ಭಾವ ಮನದಿ
ನಿನ್ನಲ್ಲೇ ಇರುವೆನು ಎಂದೆನುವ ಧನ್ಯತೆಯು
ಒಲವು ಹರಿಸುವ ಅವಳೆ ಜೀವದನದಿ."

Wednesday, December 19, 2012

ಸೀತೆಯ ಮಾತು.

ಜನಕನಾ ಮನೆಬಿಲ್ಲು ತುಕ್ಕು ಹಿಡಿಯಲಿ ಎಂದು
ಹರಸಿದ್ದ ಗಳಿಗೆಯನು ನೆನೆದುಕೊಂಡು
ಅದ್ವಿತೀಯನ ಹಿಂದೆ ಕಾಡು ಸೇರಿದ ಜೊತೆಗೆ
ಚಿನ್ನಬಣ್ಣ; ಸೆಳೆತದಲಿ ಕನಸನುಂಡು.

ಬೆಳಕಿದ್ದ ಕಡೆಗೆಲ್ಲ, ಮೋಸವಾಗದು ಎಂಬ
ತನ್ನಾತ್ಮವಿಶ್ವಾಸ ಸುಳ್ಳು ಎಂದು.
ಚಿನ್ನದಾ ಜಿಂಕೆಯನು ಕಾಣುತ್ತ ಮನಸೆಳೆದು
ಬಣ್ಣಗಾರಿಕೆ ಸಾಕು, ಸುಳಿಯೊಳಂದು.

ರಾವಣನ ನೋವಿಗೆ ನಾನೆಂತು ಔಷಧವು?
ಕಾಮುಕರಿಗೆ ಬೇಕೆ ಕಾಳುಮೆಣಸು?
ಜೀರ್ಣವಾದೀತು ಉರಿ; ರಾಮಬಾಣದ ಹೆಗಲು
ಬೆಂದಿದ್ದು ಅಪರಂಜಿ ರಾಮಕನಸು.

ವಸ್ತ್ರದಲಿ ಒಂದೆಳೆಯು ಹೊರಗೆ ಬಂದರೆ ಈಗ
ಎಳೆಯನ್ನು ಕತ್ತರಿಸಿ ಬಿಸುಡಬೇಕು,
ರಾಜಾರಾಮನು ತಾನು ವಸ್ತ್ರಸುಡುವವನಲ್ಲ!
ವಿಧಿವಿಲಾಸವಿದೆಂದು ಸಹಿಸಬೇಕು.
--
ಕೋದಂಡರಾಮನ ನೋಡಬಂದಳು ಸೀತೆ
ಅವನ ಕೈಯೊಳಗಿದ್ದ ದಂಡ ಕಂಡು ಮರುಗಿ;
ಇನ್ನು ಪ್ರೇಮದ ದಾನ ನಾನು ಕೇಳುವುದಿಲ್ಲ,
ಭೂಮಿ ಸೇರಿದಳವಳು; ಮಣ್ಣಿನಣುಗಿ!

೧೯-೧೨-೧೨

Tuesday, December 18, 2012

ಈ ಕೆರೆಯ ದಂಡೆಯಲಿ ಹೀಗೆ ಕುಳಿತಿರುವಾಗ


ಈ ಕೆರೆಯ ದಂಡೆಯಲಿ ಹೀಗೆ ಕುಳಿತಿರುವಾಗ
ಹಳೆಯ ದಿನಗಳ ನೆನಪು ಹೀಗೆ ಬಂದು,
ಏನೋ ಹೇಳಲು ನೀನು ಕಾತರಿಸಿ ಕರೆದಂತೆ
ಅಂದು ನೀ ಬಂದಿದ್ದೆ ಹೇಳಲೆಂದು.

ನಿನ್ನ ಹೆಜ್ಜೆಯಲೆಲ್ಲ ಇಣುಕುತಿದ್ದವು ಭಾರ
ಹೃದಯದೊಳಗಿನ ಭಾವ; ಮಾತು ಹುದುಗಿ!
ಮಾತಿನಲಿ ಹೇಳದೆಯೆ ಆಗ ಅಡಗಿದ ದನಿಯ
ಕಣ್ಣುಗಳು ಹೇಳಿತ್ತು! ಹೌದೆ ಹುಡುಗಿ?

ಒಲವ ಹೇಳದೆ ನೀನು ಹೀಗೆಲ್ಲ ಮರುಗಿದರೆ
ನನಗೇಕೋ ನೋವಿತ್ತು; ಹೇಳದಾದೆ!
ನೀನೆ ಹೇಳಿದ ಮೇಲೆ ಇನ್ನೇನು ಸಂಕೋಚ
ಕಾಯುವಿಕೆ, ಬೇಸರವ ಮರೆತುಹೋದೆ.

ಈಗ ಧನ್ಯತೆ ತುಂಬಿ ನಿನ್ನ ಸಾಮೀಪ್ಯದಲಿ
ಒಲವು ಆರದೆ ಇರಲಿ, ಬತ್ತದಿರಲಿ
ಎತ್ತರದ ಬದುಕಿಗೆ ನಿನ್ನ ಕಾಣ್ಕೆಯು ಜೊತೆಗೆ,
ನಿನ್ನ ಒಲವಿಗೆ ನನ್ನ ಬಾಳು ಇರಲಿ.

೧೭-೧೨-೧೨

Sunday, December 16, 2012

ಅವಳಿಗಾಗಿ.

ನಿನಗಾಗಿ ತಂದಂತ ಈ ಗುಲಾಬಿಯ ಹೂವ
ನೀನು ಹೆರಳೊಳಗಿಟ್ಟು ನಗಿಸಬೇಕು
ಯಾಕೆ ಮಲ್ಲಿಗೆ ತರದೆ, ಈ ಗುಲಾಬಿಯ ತಂದೆ?
ಎಂದೆನ್ನ ಕಾರಣವ ಕೇಳಬೇಕು.

ನೀ ಕೇಳದಿದ್ದರೂ ನಾನೆ ಹೇಳುವೆ ಗೆಳತಿ
ಮಲ್ಲಿಗೆಯ ತರದಿದ್ದ ಕಾರಣವನು
ಈ ಗುಲಾಬಿಯ ಕೆಂಪು ನಿನ್ನ ಕೆನ್ನೆಯ ಹೊಳಪು
ಬಿಳಿಯ ಮಲ್ಲಿಗೆಯಲ್ಲಿ ಕಂಡಿತೇನು?

ಮಲ್ಲಿಗೆಯ ಕೊಯ್ದು ನಾ ಮಾಲೆಯನು ಕಟ್ಟುತಲಿ
ನಿನಗಾಗಿ ಕೊಡಲೆಂದು ದೂರದಿಂದ
ಬಂದಾಗ ತಡವಾಗಿ; ನೀ ಹೀಗೆ ನುಡಿದಿದ್ದೆ
ಪ್ರಿಯೆಯ ಕಾಯಿಸುವುದೇನು ಚಂದ?

ಹೀಗೆಂದು ತಂದಿಹೆನು ಈ ಗುಲಾಬಿಯ ಚೆಲುವೆ
ನಾನಾಗೆ ತೊಡಿಸಲೇ ನಿನ್ನ ಮುಡಿಗೆ?
ಮಲ್ಲಿಗೆಯ ಮನಸವಳೆ, ಈ ಗುಲಾಬಿಯೆ ಚಂದ
ಯಾವ ಉಡುಗೊರೆ ಕೊಡುವೆ ನನ್ನ ನುಡಿಗೆ?


೧೬-೧೨-೨೦೧೨

ಚಿತ್ರಮಾಡಿಕೊಟ್ಟವರು: ವೆಂಕಟ್ ಕೋಟೂರು
.ಇನ್ನೊಂದು ಫೇಸ್ಬುಕ್ಕಿನ ಮಿತ್ರರಿಂದ.

Thursday, December 13, 2012

ಮಲ್ಲಿಗೆಯವಳು


ಮಲ್ಲಿಗೆಯ ತಂದವಳು, ಮಾತಿಂಗೆ ಸಿಕ್ಕವಳು
ಮರೆವ ನಟನವನಾಡಿ ಹೋದರೇನು?
ಹಿಂತಿರುಗಿ ನೋಡುತಲೆ ಕಿರುನಗೆಯ ಬೀರಿದಳು
ಕಣ್ಣುಗಳು ದೋಣಿಯಲಿ ಸಿಕ್ಕ ಮೀನು!

ನಡೆವ ದಾರಿಯ ಘಮಲು ಎಲ್ಲ ನಿಜ ನುಡಿದೀತು
ನೀ ಕೊಟ್ಟ, ನಾ ಪಡೆದ ಮಲ್ಲೆಗಳನು.
ತಲುಪಲಾರದೆ ಹೋದ ಸಂಭ್ರಮದ ಉತ್ತುಂಗ
ಕಟ್ಟಲಾರದೆ ಹೋದ ಮಾಲೆಗಳನು.

ಮಲ್ಲಿಗೆಯ ತಂದವಳು ಬಂದೆ ಬರುವಳು ನಾಳೆ
ಹೊಸಹೂವ ಮತ್ತೊಮ್ಮೆ ಬಿಡಿಸಬೇಕು
ನೀವಾದರೂ ಹೇಳಿ; ಮಲ್ಲೆ ಹೂವಿಲ್ಲದೆಯೆ
ಬಾಳುವುದು ಹೇಗೆಂದು ಕಲಿಸಬೇಕು.

೧೩-೧೨-೧೨
ಫೋಟೋ : ಗೂಗಲ್ ಮಹಾಶಯನದ್ದು.

Sunday, December 2, 2012

ಚಂದ್ರ-ಚಂದ್ರಿಕೆ


ಸಿಗ್ಗಿನಲಿ ಬಂದನದೋ ಚಂದ್ರ ಆಗಸದಲ್ಲಿ
ನಿನ್ನ ಮೊಗದಲಿ ಕೆಂಪು ಏರಿತೇನು?
ತಂಗದಿರ ಕಿರಣಗಳ ಕಂಪು ಮೈಮನವೇರೆ
ಸಿಂಗರದ ನತ್ತಾಗಿ ಹೊಳೆಯಿತೇನು?

ಆ ತಾರೆ ಅರಿಷಿಣದ ಲೇಪನವ ಮಾಡಿದಳೆ?
ಚಂದ್ರ ತುಂಬಿದ ಬಣ್ಣದೋಕುಳಿಯಲಿ
ಪ್ರೀತಿ ಹೆಚ್ಚಾದಂತೆ ಚಂದ್ರನೋ ಬಹುಬಿರುಸು!
ಹಿಗ್ಗಿ ನಡೆಯುವ ಮುಗಿಲ ಸಾಲುಗಳಲಿ

ಕಣ್ಣಂಚು ಜಿನುಗಿತೆ, ಕಾಣಿಸದು ಕತ್ತಲೆಗೆ
ಇನ್ನೆಂದು ಬಹನವನು? ಕೇಳು ನೀನು.
ಇಷ್ಟೊಂದು ಬೇಯುವೆಯೆ ಎನ್ನುತಲಿ ಕನಿಕರದಿ
ಇದ್ದು ಹೋದಾನವನು ಸಂಜೆಗೂನು!

ತೀರದದು ಆಸೆಗಳು, ಮಿತಿಮೀರಿ ಸಾಗುವುದು
ಉಬ್ಬರವು ಸಾಗರದಿ ಚಂದ್ರ ಬರಲು!
ನಿಶೆಯು ಕಳೆದಂತೆಲ್ಲಾ, ನಿದ್ದೆಗಣ್ಣಲಿ ಉರಿಯೆ
ಶಾಂತಾವಾದೀತು ಇದು ಮೊರೆವ ಕಡಲು.

೨-೧೨-೧೨

ತೀರ್ಥಹಳ್ಳಿಯ ಸಿಗರೇಟು


ಮಣಿಪಾಲದಿಂದ ಶಿವಮೊಗ್ಗೆಗೆ
ಬರುವಾಗೊಮ್ಮೆ ಬ್ರೇಕು
ತೀರ್ಥಹಳ್ಳಿಯಲಿ.
ಆಗುಂಬೆಯ ಮುಕ್ಕಾಲು ನೋವಿಗೆ
ಬಸ್ಸಿನ ಕಾಲುನೋವು ಸೇರಿ
ಪರಿಪೂರ್ಣ ಒಂದು.

ಸಿಗರೇಟು ಖಂಡಿತ ಬೇಡವಿತ್ತು
ಎನ್ನುತ್ತಾ ಖರೀದಿಸುವಾಗ
ಬಸ್ಸು ಹೊರಟಿದ್ದು ಸರಿ, ನನಗಲ್ಲ, ಡೈವರನಿಗೆ.
ಬೆಂಕಿ ಹತ್ತಿಸಲಾರದೆ
ಜೇಬಿಗೆ ತುರುಕಿ ಬಸ್ಸಲ್ಲೆ ಕುಳಿತೆ.

ಸಿಗರೇಟು ಒಳ್ಳೆಯದಲ್ಲ ಎಂಬುದು ಅವಳ ವಾದ.
ಬೆಂಕಿ ಒಳ್ಳೆಯದಲ್ಲ ಎನ್ನುವುದು ನನ್ನ ವಾದ.
ಕೊನೆಗೂ ತೀರ್ಥಹಳ್ಳಿಯ ಸಿಗರೇಟು
ಇನ್ನೂ ಹಸಿಯಾಗಿಯೇ ಇದ್ದು
ಹಾನಿಕಾರಕವಲ್ಲ! ನಿರ್ವಿವಾದ.

೨-೧೨-೧೨