Tuesday, December 27, 2011

ಚಂದ್ರ ಶಿಕಾರಿ .



ನಾನು ಚಂದಿರ ಮತ್ತೆ ಅವಳು
ಅವಳೆಂದರೆ ನನ್ನದೇ ನೆರಳು !!

ನಾನು ಕಿರಣಗಳನ್ನ ತಡೆಯುತ್ತೇನೆ
ಚೆಂದುಟಿ ಒಣಗದಂತೆ
ಅವಳು ಕಿರಣಗಳನ್ನ ಸೆಳೆಯುತ್ತಾಳೆ
ಚಂದಿರನೂ ಕರಗುವಂತೆ

ಇಂದಾದರೂ ಪೂರ್ಣ ಚಂದಿರನ
ಕಾಣಬೇಕೆಂಬ ಬಯಕೆ!
ಅವಳ ಮುಂಗುರುಳಿನಲ್ಲೇ ಸಿಲುಕಿ
ಚಂದಿರ ಒದ್ದಾಡುವನೇನೋ ?
೪.
ಎಲ್ಲರೂ ಅಂದರು ಚಂದಿರ
ಇದ್ದಾಗ ರಾತ್ರಿ ತಂಪೆಂದು.
ಹೆಮ್ಮೆ ನನ್ನಲ್ಲಿ ! ನನಗೆ
ಚಂದಿರ ಬೆಚ್ಚನೆಯ ಆಶ್ವಾಸ !

೨೭-೧೨-೨೦೧೧

Monday, December 26, 2011

ಬಿದಿರು


ಅಪ್ಪನೋಡಿದ ಆಕಾಶಕ್ಕೆ ಬಿಳೆದ ಬಿದಿರಿನ ಮಹಲು
ಕುಡುಗೋಲನ್ನಿಕ್ಕಿ ಒಂದೊಂದೇ ಎಳೆದ
ಅವಧಿ ಮೀರಿದ ದುಡಿತ, 
ಕೊನೆಗಾಯ್ತು ಬುಟ್ಟಿ ಮತ್ತೆ ನಿಚ್ಚಣಿಕೆ !
ಹೊಟ್ಟೆಗೆ ಹಿಟ್ಟಿನ ಪೂರಯಿಕೆ !


ಅಮ್ಮ ಅದೇ ಬಿದಿರ ಕೊಳವೆಯಿಂದ 
ಊದಿದಳು ಒಲೆಯ, ಬೆಂಕಿ ಬಿದಿರ ಪುಳ್ಳೆಗೆ!
ಏನೋ ಬೇಯುವುದು 
ಏನೋ ಸುಡುವುದು 
ಅಮ್ಮಂದಿರಿಂದ ಸಾಧ್ಯವೆಂದೇ , 
ಅಲ್ಲ. ಬಿದಿರ ಬಳಕೆ.


ಮಗ ಇನ್ನೊಂದು ಭಾವುಕ ಜೀವಿ
ತನ್ನಂತೆಯೇ ಉಸಿರಾಡುವ ಮರದ ಬುಡ ಕಡಿಯಲಾರ !
ಕೈ ಕಾಲು ಕತ್ತರಿಸಿದ,
ಮೋಹನ ಮುರಳಿಯ ವಯಸು ನೆನಪಿಸಿ
ತೂತು ಕೊರೆದ , ಕೊಳಲಂತೆ ಅದು !
ಮಂದಾನಿಲದ ನಡುವೆ ಬಿದಿರ ಶಬ್ದ ಈಗ.


ಮೊಮ್ಮಗನೂ ಅದೇ ಹಾದಿ, 
ಉಳಿದ ಬಿದಿರಿನ ಮೆಳೆಗೆ ಕಟ್ಟೆ ಕಟ್ಟಬೇಕಂತೆ!
ಪುಟ್ಟನಾಗಿರುವಷ್ಟು ಬಿದಿರು ಬೆಳೆದೀತು !

(ಪ್ರೇರಣೆ, ಹೃದಯ ಶಿವರವರು ಬಿದಿರು ಎಂದು ಒಂದು ಸಣ್ಣ ಕವನ ಬರೆದಿದ್ದರು .)