Friday, April 26, 2013

ಮಲ್ಲಿಗೆಯ ಸ್ವಗತ!


ಗೋಣಿಚೀಲದ ಒಳಗೆ ತುಂಬಿ ತುರುಕಿದರೆನ್ನ
ಬಸ್ಸುಗಳ ಮೇಲುಗಡೆ ಪೇರಿಸಿದರು;
ಬಂತು ಬೆಂಗಳೂರೆಂದು ಎತ್ತಿ ರಸ್ತೆಗೆ ಹಾಕಿ
ಮಲ್ಲಿಗೆಗೆ ರೇಟೆಸ್ಟು ಎನ್ನುತಿಹರು

ನೂರು ಗೋಣಿಗೆ ಕೊಡು; ಇಪ್ಪತ್ತು ನಿನಗೆ
ಎಂದೊಂದು ವ್ಯವಹಾರ ಕುದುರಿಸಿದರು
ದರದರನೆ ಎಳದೆನ್ನ ಸಂತೆಪೇಟೆಗೆ ತಂದು
ಕೇಜಿಗಿನ್ನೂರೆಂದು ಕೂಗುತಿಹರು.

ಸಣ್ಣ ಹುಡುಗಿಯು ತನ್ನ ಮೃದುವಾದ ಕೈಯ್ಯಲ್ಲಿ
ಎತ್ತಿ ನನ್ನನು ಚುಚ್ಚಿ ಬಂಧಿಸಿದರು
ಮೊಳಕೆ ಮೂವತ್ತಂದು ಹದಿನಾರು ಕಂಠದಲಿ
ಕೂಗಿ ನನ್ನನು ಮಾರಿ ಖುಷಿಪಟ್ಟರು.

ನನ್ನ ಸಂಬಂಧಿಕರು ದೇವರಿಗೆ ಮುಡಿಪಂತೆ
ನಾನಿರುವೆ ಮಂಚದಲಿ ಸುಖಿಪರಾರು?
ಇನ್ನೆಷ್ಟು ಗಳಿಗೆಯೋ ನನ್ನ ಜೀವನಯಾತ್ರೆ
ನನ್ನ ಕನಸನು ಅರಿತ ಜೀವನಾರು?

Tuesday, April 9, 2013

ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿ


ಬೆಟ್ಟ ಕಣಿವೆಯ ನಡುವೆ ಪುಟ್ಟ ದಿಬ್ಬದ ಬಳಿಯೆ
ಚಿಕ್ಕ ಕಲ್ಲಿನ ರಾಶಿ ಏಕೆ ಗೊತ್ತೇ?
ಅವಳ ನಾ ಕಾದಿರುವ ಗುರುತನ್ನೇ ಇಟ್ಟಿರುವೆ
ಕಲ್ಲು ಹೆಚ್ಚಾದಂತೆ ಹೆಚ್ಚು ಮುತ್ತೆ!

ನಾ ದಿನವು ವೇಗದಲಿ ಬೆಟ್ಟ ದಿಬ್ಬದಿ ಕುಳಿತು
ಕಾಯುವುದು ಅವಳಿಗೆ ತಿಳಿದಂತಿದೆ
ಮುತ್ತ ಹೆಕ್ಕುವ ನೆಪದಿ ತಡವಾಗಿಯೇ ಬಂದು
ಕಲ್ಲುಗಳ ಎಣಿಸುವಳು ಮುತ್ತನಿಕ್ಕಿ!

ಒಂದೊಮ್ಮೆ ಬಾರದಿರೆ ಮೊದಲ ಹನಿ ಬಿದ್ದಂತೆ
ದಿಬ್ಬ ಮಣ್ಣಿನ ಮೇಲೆ ನೋಡಿ ಗುರುತು
ಮಾರನೆಯ ದಿನದಲ್ಲಿ ಅಳುವ ಮುಖಮಾಡುವಳು
ಮತ್ತೆ ಕರಗುವೆ ನಾನು; ಲೆಕ್ಕ ಮುತ್ತು!

ಈ ಬೆಟ್ಟ ಈ ದಿಬ್ಬ ಈ ಎರಡು ಮನಸುಗಳ
ಮುತ್ತನ್ನೆ ತುಂಬಿರುವ ಈ ಕಲ್ಗಳು
ನಾಳೆಯಾ ಬಣ್ಣಗಳ ಆಸೆಗಳ ಹೊತ್ತಿರುವ
ಗುಟ್ಟು ಹೇಳದೆ ಉಳಿವ ಆ ಕಂಗಳು!

ಪ್ರಕೃತಿಗೂ ಪುರುಷನಿಗು ಈ ನೆಪಗಳು
ಅವಳು ನಾನೇ ಆಗಿ ನಾನು ಅವಳು!

ಪುಟ್ಟನ ಹಾಡು


ಬಾನಲಿ ಏರುತ ಮೋಡದಿ ಅಡುಗುತ
ಆಡುವ ಚಂದಿರ ನನಗಿಷ್ಟ
ಏತಕೆ ಸುಮ್ಮನೆ ಮಂಜಿಗೆ ತಿರುಗುವೆ
ಎಂದೆನೆ ಹೇಳಿದ ನಂ ಪುಟ್ಟ!

ಪುಟ್ಟನಿಗೇಕೋ ಚಂದಿರ ಕಾಣದೆ
ಹೋದರೆ ರಾತ್ರಿಗೆ ಹಸಿವಿಲ್ಲ
ಬೆಳಗಿನ ಜಾವದಿ ಬೇಗನೆ ಏಳುವ
ಸೂರ್ಯನ ಪ್ರೀತಿ ಸಾಲಲ್ಲ

ದಿನ ದಿನ ಹಿಗ್ಗುವ ಚಂದಿರ ಬೇಕು
ಕುಗ್ಗುವ ಚಂದಿರ ಬೇಡದವ!
ಸಿಟ್ಟದು ಬರುವುದು ಮೂಗಿನ ಮೇಲೆ
ತಿಂದರೆ ಚಂದ್ರನ ಮೋಡದವ.

ಪುಟ್ಟನ ಸುತ್ತಲೂ ಚಂದ್ರನು ಸುತ್ತುವ
ಪುಟ್ಟನ ಕಣ್ಣಲೆ ನಕ್ಷತ್ರ!
ಪುಟ್ಟನೆ ಭೂಮಿಯು ಆ ಚಂದಿರನಿಗೆ
ಪುಟ್ಟನು ಚಂದಿರನಾ ಮಿತ್ರ.

ಮನೆಗೆ ಮಲ್ಲಿಗೆ ಬಂತು


ಅಂಗಳದ ತುಂಬಾ ನಗುತಿದ್ದ ನಕ್ಷತ್ರ
ಬೆವರಿ ಬಿದ್ದಂತಿತ್ತು ಬೆಳಗಿನಲ್ಲೆ
ಈ ಕಾಡು ಮಲ್ಲಿಗೆಯ ಹೂವುಗಳು ಇಲ್ಲೇಕೆ
ಬಂತೆಂದು ಕೇಳಿದಳು ನನ್ನ ಮಲ್ಲೆ

ಕಾಲುದಾರಿಯ ಹಿಡಿದು ಮನೆಯಿಂದ ಹೊರಟರೆ
ಮೈಲುಗಳ ನಡೆಯಲಿದೆ ಕಾಡಿನಲ್ಲಿ
ಬೆಟ್ಟಗುಡ್ಡವ ಇಳಿದು ಸುತ್ತುತ್ತ ಹೋದರೆ
ಏನು ಸಿಕ್ಕಿತು ಹೇಳು ನಡಿಗೆಯಲ್ಲಿ?

ಕಾಡಿನಾ ಹಾದಿಗಳ ಈ ಮಲ್ಲೆ ಮರೆಸೀತು
ಯಾರಿಡದ ಗೊಬ್ಬರಕೆ ಮುಷ್ಟಿ ಹೂವು
ನಡೆಯುವುದ ಕಲಿಸೀತು; ಕಾಡನ್ನೆ ಉಳಿಸೀತು
ಮರೆಯಬಹುದೇ ಹೀಗೆ ಕಾಲುನೋವು!

ಹೀಗೆ ನಡೆಯುತ ಬರಲು; ತಂದೆ ನಾ ಈ ಲತೆಯ
ಕಾಡಿಂದ ಮನೆವರೆಗೆ ಬಂದಳವಳು
ನಾಡಿನಲು ಸೊಕ್ಕಿದಳು; ಸೊಕ್ಕಿ ಸಿಂಗರದಿಂದ
ಬೆಳಗು ಹೂವರಳಿಸಿ ನಕ್ಕಳವಳು!

ನಾಡು ಕಾಡೇನಿಲ್ಲ ಹೂಗಳಿಗೆ; ಪರಿಮಳಕೆ
ಬೇಲಿ ಕಟ್ಟುವುದೇಕೆ ಈ ಪ್ರೇಮಕೆ?
ನಿನ್ನ ಹಾಗೆಯೆ ನಗುವ ಈ ಪುಟ್ಟ ಮಲ್ಲೆ ಹೂ
ನಗುತಲಿರುವಳು ಹೀಗೆ; ನುಡಿ ಕೋರಿಕೆ.

ಶಿವರಾತ್ರಿಯ ಹಾಡು.


ನಿಲುವನೋ ಮನದೊಳಗೆ ಹರ-ತಾ
ಗೆಲುವನೋ ಜಗದೊಲವನು
ಚೆಲುವೆ ಗಿರಿಜೆಯ ಮನವ ಕದ್ದವ
ಬಿಲ್ವಕೇ ನಮಗೊಲಿವನು!

ನಂದಿವಾಹನನೀತನನು ಆ-
ನಂದದಿಂದಲಿ ಭಜಿಸಲು
ಬಂದು ಕಳೆಯುವ ಮನದ ಕ್ಷೇಷವ
ಇಂದಿನಾ ದಿನ ಹಾಡಲು

ನಾದದುಂದುಭಿ ಮೊಳಗುವೆಡೆಯಲಿ
ಮೋದದಿಂದಲಿ ಕುಣಿವನು
ಕಾಯ್ದು ಕರುಣದಿ ಪೊರೆವನೈ-ಕ
ಲ್ಲಾದ ರೂಪದಿ ತೋರ್ಪನು.

ಶಿವನು ಚರ್ಮಾಂಬರನು ಸಕಲರ
ಭವದ ಬಂಧನ ಕಳೆಯುಲಿ
ಶಿವನ ನುತಿಸುತ ದಿನವ ಕಳೆಯಲು
ಭುವನ ಅನುದಿನ ಬೆಳಗಲಿ.

ತಂಗಿಗೆ ಹಾಡು


ನಿನ್ನ ನಗುವಿನ ಹಿಂದೆ ನೋವುಗಳ ಸರಮಾಲೆ
ಇದ್ದೀತು ಬೇಸರವು ನಲಿವು ನುಂಗಿ!
ಬೇಸಿಗೆಯು ಉರಿಸೀತು; ಮಳೆಯೋ ಕೊಳೆಸೀತು
ಕಾಯದಿರು ನೋಯದಿರು ನನ್ನ ತಂಗಿ.

ಪುಣ್ಯಪುರುಷರು ಇಲ್ಲ ಪಾಪಿಗಳೂ ಇಲ್ಲಿಲ್ಲ
ಸಿದ್ಧ ಔಷಧಿಯಿಲ್ಲ ನೋವುಜ್ವರಕೆ
ಗಟ್ಟಿಯಾಗಲೆ ಬೇಕು ಬಿಸಿಲಿಗೂ ಮಳೆಗಳಿಗೂ
ಬದುಕು ಹಸನಾಗುವುದು ತನ್ನತನಕೆ!

ಇಂಥ ಬರಗಾಲದಲು ತನ್ನೊಡಲ ಚಿಗಿಯುತಿಹ
ಮರದ ಬಳಿ ತೋರಿಕೊಳು ನಿನ್ನ ಗೋಳು!
ಬರಿಯ ಜೀವರು ನಾವು, ನಮಗೆ ಸ್ವಾರ್ಥವೆ ಮುಖ್ಯ
ಮಳೆಗಾಲಕ್ಕೊಂದೆ ಬೆಳೆ ಹೆಸರು ಕಾಳು.

ಎಂದೊ ಉರಿಸಿದ ಬೆಂಕಿ ಆರದೆಯೆ ಇಹುದೇಕೆ
ನಾಳೆ ಹೊಳೆಯುವ ತಾರೆಗೇಕೆ ಒಲವು?
ಇಂದಿನಲಿ ನನಗಿಷ್ಟು ನಿನಗಿಷ್ಟು ರಸನಿಮಿಷ
ಇದುವೆ ನಮ್ಮಯ ದಾರಿ; ಬಾಳ ಹರಿವು.

ಹಾದಿಹೋಕನ ಹಾಡು


ಹಾದಿಹೋಕನ ಹಾಡು ಏನನೋ ಕೊಟ್ಟೀತು
ನಾನು ಹಾಡುವ ಹಾಡು ನಿನ್ನದಲ್ಲ
ನಿನ್ನ ಹಾಡನು ಕೇಳಿ ಸ್ಪೂರ್ತಿಗೊಂಡವ ನಾನು
ಹಾಡದಿದ್ದರು ಬರೆವೆ ಕತೆಯನಲ್ಲ.

ಊರೂರು ತಿರುಗುವಾ ಅಲೆಮಾರಿ, ತಿರುಗಾಡಿ
ನಿನ್ನ ಹಾಡಲಿ ಹುಡುಕಲಾರೆ ತಪ್ಪು
ನಾನು ಬರೆವಂತಹದು ಬರಿಯ ಶಬ್ಧದ ಸಾಲು
ನಿನ್ನ ಹೂವಿನ ತನಕೆ ನನ್ನ ಸೊಪ್ಪು.

ಅನುಭವದ ಪಾಕದಲಿ ನೀನಂತೂ ನಳರಾಜ
ನಾನಿನ್ನೂ ತರಕಾರಿ ಹೆಚ್ಚುತಿಹೆನು
ಮೃಷ್ಟಾನ್ನವೈ ನಿನ್ನ ಕೈಯ್ಯಡುಗೆ ಓ ಸಖನೆ
ನಿನ್ನ ಪದಗಳಿಗೆಂದು ಶರಣ ನಾನು.

ಹರಸಿಬಿಡು ಕರುಣೆಯಲಿ ಸಾಮೀಪ್ಯ ಬರುವವೊಲು
ನಿನ್ನ ಪ್ರೀತಿಯೆ ನನ್ನ ಪೊರೆಯುತಿರಲಿ
ನಿನ್ನಂತೆ ನಾನಾಗಿ ಹಾಡುವೆನು ಎಂದಲ್ಲ
ನನ್ನ ಹಾಡುಗಳಲ್ಲೂ ತ್ರಾಣ ಬರಲಿ.

ಮಲ್ಲಿಗೆ ಹೇಳಿದ್ದು.


ಇಷ್ಟು ಹೂಗಳ ನಡುವೆ ನನ್ನನೇ ಆಯುವೆಯೆ
ಕೆಂಪು ಗುಲಾಬಿಯು ನಿನ್ನ ಕರೆದಳಲ್ಲ!
ನೀಳ ಜಡೆಯವಳ ಮುಂಗುರುಳು ಕಡೆವವಳ
ಕೇದಿಗೆಯ ಹೂವೂ ಹೊರಳಿತಲ್ಲ

ಮೂಗನ್ನೇ ನಾಚಿಸುವ ಸಂಪಿಗೆಯ ಹೂವಿತ್ತು
ರೇಶಿಮೆಯ ನುಣುಪಿರುವ ಕಮಲವಿತ್ತು
ಮಾದಕತೆ ತುಂಬಿದ್ದ ಬಕುಲ ಮಾಲೆಗಳಲ್ಲಿ
ನಿನ್ನ ಕರೆದಂತೇನೋ ಭಾವವಿತ್ತು.

ನನಗೆ ಮಲ್ಲಿಗೆಯೆಂದೆ, ಬಳಿಗೆ ನನ್ನನೆ ಕರೆದೆ
ನನ್ನ ಜಾತಿಯಲೆಷ್ಟು ಮಲ್ಲರಿಹರು!
ಅಷ್ಟೇಕೆ ಕಣ್ಣಿನಲಿ ಕಾಯುವರು ಓ ಗೆಳೆಯ
ಮಲ್ಲಿಗೆಯ ತೋಟಕ್ಕೆ ಬೇಲಿಯವರು.

ನಿನ್ನೊಂದಿಗಿಹೆನೆಂದು ಬಂದೆ ಬಳ್ಳಿಯ ತೊರೆದು
ಬೇರೆ ಹೂಗಳ ಕಡೆಗೆ ನೋಟಬೇಡ
ಅಕ್ಷಮ್ಯವಹುದು ನೀನೆಲ್ಲ ಕಡೆ ಹೊರಳಿದರೆ
ನಿನಗೆ ಮಲ್ಲಿಗೆಯೊಂದೆ; ಬಂಧ ಗಾಢ.

ಓಹೋ ನಿಮ್ಮನೆ ಹುಡುಗ!


ಓಹೋ ನಿಮ್ಮನೆ ಹುಡುಗ
ಎಷ್ಟೊದು ಬಿಳುಪು?
ಓದು ಹೀಗೆಯೆ ತಾನೆ?
ಎಂತಹಾ ಚುರುಕು!

ಪಟಪಟನೆ ಉದುರಿಸುವ
ಮಾತುಗಳ ಮುತ್ತು!
ಎಲ್ಲಿಂದ ಕಲಿತಿಹನೋ
ಹಲವಿಷಯ ಗೊತ್ತು!

ಕಾಲುಗಳು ಕೈಗಳೂ
ಎಷ್ಟೊಂದು ಚಂದ!
ಗಾಯಗಳು ಇಲ್ಲದೆಯೆ
ಬಾಲ್ಯದಾನಂದ?

ಓಹೊ ನಿಮ್ಮನೆ ಹುಡುಗ
ತುಂಬ ಡಿಫರೆಂಟು
ಸಣ್ಣ ವಯಸಿಗೇ ಅವಗೆ
ಇಂಗ್ಲೀಷು ಸೆಂಟು!

ಸ್ವಲ್ಪ ಬೊಜ್ಜಿದೆ ಬಿಡಿ
ಹಾಳು ಏನಲ್ಲ;
ಪರೀಕ್ಷೆಯಲಿ ನೂರು
ಆಟದಲಿ ಇಲ್ಲ.

ಓಹೋ ನಿಮ್ಮನೆ ಹುಡುಗ
ಇನ್ನೂನು ಸಣ್ಣ
ಬದುಕು ಕಲಿಸಿತೆ ಹೇಳಿ
ಬಗೆಬಗೆಯ ಬಣ್ಣ?

ಆವರ್ತಿತ.


ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು
ಕಿರಣಗಳು ಹೊಳಪಿಸಿದ ಬಣ್ಣಗಳನು
ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು?
ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.

ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ
ಮೂಡಿ ಕಾಮನಬಿಲ್ಲು ಹನಿಗಳೊಳಗೆ
ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ
ಮೀರಿ ಸಾಗುವ ಮನಕೆ ಎಷ್ಟು ಘಳಿಗೆ?

ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ?
ಆರಿಹೋಗುವುದೇನು ಖಚಿತ ಸಾವೆ?
ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು
ರಾತ್ರಿ ಬೆಳಗಿನ ವರೆಗೆ ಸುಖದ ನಾವೆ

ನಾಳೆ ನಾ ಕಾಯುವೆನು ಇನ್ನೊಂದು ಹನಿಗಾಗಿ
ಹನಿಗಳೊಳಗಿನ ಬಣ್ಣ ಕನಸಿಗಾಗಿ
ಸುಖದಮಲು ಕರಗೀತು, ಬಾಳು ನಿಜ ತೆರೆದೀತು
ಎದೆಯೊಳಗೆ ಉಳಿಯಲದು ಶಾಂತಿಯಾಗಿ.

ಧರ್ಮ!


ನೂರು ದಾರದ ಎಳೆಯ ಸೇರಿಸುತ ಬಂಧಿಸುತ
ಮಾಡುವೆವು ಧರಿಸುವಾ ವಸ್ತ್ರವೆಂದು
ಸಾರವಿಹ ನೂರಾರು ಅನುಭವದ ಮಾತುಗಳ
ರೂಢಿಯಲಿ ಕರೆದಿಹರು ಧರ್ಮವೆಂದು

ಬಿಳಿಯ ದಾರದ ನಡುವೆ ಕಪ್ಪು ಕೆಂಪಿನ ಬಣ್ಣ
ಧರಿಪ ವಸ್ತ್ರಗಳೆಲ್ಲ ಎಷ್ಟು ಭಿನ್ನ
ಸುಳ್ಳಿಹವು ಮುಳ್ಳಿಹವು ಫಲಬಿಡುವ ಮರದಲ್ಲಿ
ಆಯಬೇಕೋ ಗೆಳೆಯ ನಿಜದ ಹಣ್ಣ.

ಏನಾದರೇನ್ ಬಣ್ಣ ನಿಜದ ಬೆಂಕಿಯ ಬಿಸಿಗೆ
ಸುಟ್ಟು ಹೋಗದೆ ವಸ್ತ್ರ? ಬೂದಿ ಉಳಿಸಿ
ಧರ್ಮವೂ ಹೀಗಣ್ಣ ಮೇಲಿಲ್ಲ ಕೀಳಿಲ್ಲ
ನಾಳೆ ಏನಿಹುದಣ್ಣ? ಬಾಂಧವ್ಯ ಬೆಳೆಸಿ.

ನನ್ನ ಪಯಣ


ಹಾದಿಯಲಿ ನಡೆದದ್ದು ಬಹಳೆಂದುಕೊಂಡಿದ್ದೆ
ನನ್ನ ಚಪ್ಪಲಿ ಹಳತು; ಓಡಲಾರೆ
ವಿಶ್ವಾಸವೂ ಹಾಗೆ ಗುರಿತಲುಪುವಾ ವರೆಗೆ
ಹಿಂತಿರುಗಿ ನೋಡುವುದು ಮರೆಯಲಾರೆ

ಇರುವ ಗುರುತಿನ ಹೆಜ್ಜೆ ನನ್ನ ಪೂರ್ವಜರದ್ದು
ಎಂಬೆನುವ ಕಾರಣಕೆ ತೆಗಳಲಾರೆ
ಅವರ ನಡೆಗಳ ನಡುವೆ ನನದೊಂದು ಗುರುತೆಂದು
ಅವುಗಳನೆ ಮಹದೆಂದು ಹೊಗಳಲಾರೆ

ಹಿಂದೆ ಬರುವಂತವರ ಅಡ್ಡಗಟ್ಟಿಸಿ ಮತ್ತೆ
ದುರುಗುಟ್ಟುವಾಟಕ್ಕೆ ಇಳಿಯಲಾರೆ
ಮುಂದೆ ಹೋಗಲಿ; ಅವರ ಗುರಿಗಳನು ತಲುಪಲು
ನೆರವಾಗಲೇ? ಹಿಂದೆ ಸರಿಯಲಾರೆ.

ನಿನ್ನ ನೆನೆಯದೆ ಹೀಗೆ ಸುಮ್ಮನಿರುವುದು ಕಷ್ಟ..


ನಿನ್ನ ನೆನೆಯದೆ ಹೀಗೆ ಸುಮ್ಮನಿರುವುದು ಕಷ್ಟ
ಅದು ಹೇಗೆ ಇಣುಕುವೆಯೊ ಗೆರೆಗಳಲ್ಲಿ;
ನಾನೆಷ್ಟು ಬರೆದರೂ ಅದರ ಮುನ್ನುಡಿಯಂತೆ
ನೀನೆ ನಗುತಿಹೆ ಗೆಳತಿ ನಗೆಯಚೆಲ್ಲಿ!

ಪ್ರೇಮವಿಲ್ಲದೆ ನಾನು ಬರೆದೇನು ಗಳಿಸುವೆನೊ
ನೀನಿಲ್ಲದಾ ನಾನು ಅಂತೆ ಶೂನ್ಯ;
ಓರೆ ತಿದ್ದುವೆನೆಂದು ಜಗಕೆ ಕವಿ ಹೇಳುವುದೆ?
ಹುಬ್ಬು ತಿದ್ದಿದರಾಯ್ತು ನನ್ನ ಪುಣ್ಯ.

ಹೂಗಳಲಿ ಪ್ರಕೃತಿಯಲಿ ಸಂಜೆಯಲಿ ಹಣತೆಯಲಿ
ರಮ್ಯತೆಯ ಕಾಣುವುದು ಸಹಜವಂತೆ
ನಿನ್ನೊಲುಮೆಯಲಿ ನಾನು ಬರೆಯುವುದು ಕಳೆಯುವುದು
ನನಗಿಲ್ಲ ಜಗವ ಸರಿಮಾಡೊ ಚಿಂತೆ.

ಜಗವು ಬಳ್ಳಿಯ ಹಾಗೆ ಡೊಂಕುಗಳು ಕಂಡಾವು
ಲೋಪವಾದವೆ ಹೇಳು ಹೂವ ಗಂಧ?
ನನಗೆ ಪ್ರೀತಿಯು ಹಾಡು; ನನ್ನ ಭಾವವ ನೋಡು
ಜಗದ ಪ್ರೀತಿಯ ಜೊತೆ ನಿನ್ನಾತ್ಮಬಂಧ.

ನೀವು ಕುರಿಯನ್ನು ನೋಡಿದ್ದೀರಾ


ನೀವು ಕುರಿಯನ್ನು ನೋಡಿದ್ದೀರಾ?
ನೋಡಿದ್ದೇವೆನ್ನುವುದು ಸಿದ್ಧ ಉತ್ತರ!
ಸೊಂಪಾಗಿ ಉಣ್ಣೆಸೋಪಾನದಲಿ ಬೆಳೆದ ಕುರಿಯಲ್ಲ;
ಗೋಣಿನ ಮೇಲೆ ಇಷ್ಟುದ್ದ ಹಗ್ಗ ಕಟ್ಟಿ
ನಡೆದರಲ್ಲ; ಓಡದಿರೆ ತಟ್ಟಿ
ಬೆದರದೇ ಮುನ್ನುಗ್ಗುವ ಕುರಿಯನ್ನು ನೋಡಿದ್ದೀರಾ?

ಏನು? ಕನ್ನಡಿ ನೋಡಿ ಬರುತ್ತೀರಾ?
ಷರಟನ್ನು ಸ್ವಲ್ಪ ಮೇಲೆಳೆದು;
ಮೈಯ್ಯ ನೂಲಳೆದು ನೋಡಿ
ಅದರೊಳಗೆ ಬೊಮ್ಮನೋ ಅವನಪ್ಪನೋ ಇದ್ದಾನೆಂದು
ಇಷ್ಟರವರೆಗೆ ನಂಬಿದಂತಃಕರಣವೂ ಬಂಜೆ;
ಸೊನ್ನೆ ಸುತ್ತಿದವರೇ ಎಂಟು ಹೆತ್ತಿದ್ದಾರೆ ಸ್ವಾಮಿ.

ಒಲ್ಲೆ! ಕುರಿಯೆಂಬುದನ್ನು ವಿರೋಧಿಸುತ್ತೇನೆ
ಎಂದವರ ಹೆಡೆಮುರಿಕಟ್ಟಿ ಮಟನ್ನು ತಿನ್ನಿಸಿ;
ಸಾಧ್ಯವಾದರೆ ಇರಲಿ ಜೊತೆಗಿಷ್ಟು ಮದ್ಯ,
ಪನ್ನೀರು ಕೋಸಂಬರಿಗಳು ಹರಿತವಾಗಿಲ್ಲವೆಂದು
ಬೆಳಗ್ಗೆ ಇಷ್ಟುದ್ದ ಕೊಚ್ಚಿದವರಿಗೂ ತಂಪಾಗಲಿ;
ಅಪೌರಷ ವಿದ್ಯೆಗೆಲ್ಲಾ ಡಿಜಿಟಲ್ ಯುಗದ ಪ್ರೇಯರ್ ಹಚ್ಚಿ
ಬೆಳಗಿಸಿ ಬಿಡಿ ನಿತ್ಯನೂತನ ವಿದ್ಯುದ್ದೀಪ; ಆರದಂತೆ.

ಮುಂದೆ; ಗುರ್ರ್ ಎನ್ನುವ ನಾಯಿಗಳನ್ನು ಬಿಡಿ
ಹಿಂದಿನಿಂದಲ್ಲೂ ಕೋಲಿರಲಿ;
ಕೆಲವು ವೀರ ಕುರಿಗಳು ತಾನು ಸಿಂಹನೆಂದೇ ಬ್ಯಾ ಬ್ಯಾ
ಎಂದರೆ ಅವನ್ನು ಮೊದಲು ಮುಗಿಸಿಬಿಡಿ.
ನಿಟ್ಟುಸಿರು ಬೇಡ, ನಮ್ಮ ಪ್ರತಿಭಟನೆಯಾಗುವುದು
ನೆತ್ತರ ಕ್ರಾಂತಿಯಲ್ಲಿ; ಶಾಕಾಹಾರಿಗಳಿಗೇನು ಕೆಲಸ?
ನೀವು ಕುರಿಯನ್ನು ನೋಡಿದ್ದೀರಾ?
ನೋಡಿಲ್ಲ; ನಾನು ಎಂಬಷ್ಟೇ ಸ್ಪಷ್ಟ ಉತ್ತರ.

ಓ ಕವಿಯೆ ದಮ್ಮಯ್ಯಾ..


ನೆತ್ತರಿನ ಹಿಂಸೆಯನು; ಜಗ ಡೊಂಬರಾಟವನು
ಬರೆದ ಕವಿಗಳಿಗೆಲ್ಲ ಹೆಮ್ಮೆಯೇಕೆ?
ಅತ್ತವರ ಅಳಿಸುವ ತಪ್ಪೆಂದು ಬೈಯ್ಯುವ
ಕವಿಯ ಬರಹಕ್ಕೆಲ್ಲ ದೊಡ್ಡ ಟೀಕೆ.

ಯಾರು ಸತ್ತರು ಸರಿಯೆ ಕರುಣರಸ ಉಕ್ಕೀತು
ಹರಿದೀತು ಕವಿಯದನಿ ಸಾಲುಗಳಲಿ
ಸತ್ತವನ ಸಂಬಂಧಿ ಉಸಿರನಾಡುವುದೇಕೆ?
ಅವನ ಎಳೆದರು ಹಿಡಿ ಸಂತಾಪ ಚೆಲ್ಲಿ;

ಬಡತನದ ವರದಿಯನು ಸೊಗಸಾಗಿ ಪ್ರತಿಮೆಯಲಿ
ಹಿಡಿದಿಟ್ಟು ಗಳಿಸಿದನು ಸಭೆಯ ಸದ್ಧು
ಬಡವ ಬೇಡಲು ಬಂದ; ಕಣ್ಣೀರು ಗರೆದರೂ
ಕವಿ ತಾನು ತಿರುಗದವ, ಹೋದ ಎದ್ದು.

ಬೈಯ್ಯುವುದು ಬೇಯುವುದು ಕವಿಯ ಶಬ್ಧಗಳಲ್ಲಿ
ದೇಶದುದ್ದಾರಕ್ಕೆ ಕವಿಯೆ ದೇವ;
ಇವನ ಕಾಣ್ಕೆಯ ಕೊರತೆ ಇದ್ದಂದು ದೇಶದಲಿ
ಬುದ್ಧಿಯಾ ಶೂನ್ಯತೆ? ಹ್ಮ್ ಅಭಾವ.

ನಾಲ್ಕು ನಲ್ಮೆಯ ಮಾತು; ಜೊತೆಗೆ ಪ್ರೀತಿಯ ಮುತ್ತು
ಪಡೆವ ಬರೆಯುವ ಕವಿಗೆ ಜೀವ ಇತ್ತು!
ನಾನು ಟೀಕೆಯ ಬರೆವೆ ಆ ವಿಮರ್ಷೆಗೆ ದಣಿವೆ
ನನಗೆ ನವ್ಯದ ಕಾವ್ಯ ಸ್ವಾರ್ಥ ತುತ್ತು."

ಸಂಧ್ಯಾಸಮಯ


"ಸಂಜೆಯೇರುತ್ತಲೇ ನೆರಳು ಭೀಕರಗೊಂಡು
ನನ್ನ ನಾಳೆಯ ನನಗೆ ಹೇಳುತಿಹುದೇ?
ಸಾಮರ್ಥ್ಯಕ್ಕಿಂತಲೂ ತೋರುವುದು ಬೇರೊಂದು
ಸತ್ಯವನು ಹೇಳುವುದು ಸಂಧ್ಯೆ ತಾನೆ?

ಬೆನ್ನ ಹಿಂದಿನ ಸೂರ್ಯ ಬೆರಗು ಕಾಣುತ ಸುಳಿದು
ಭ್ರಮೆಯ ತಲೆಗೇರಿಸುತೆ ನಡೆದ; ಮುಗಿದ
ಇಳಿಯಿತದೋ ನಿಶೆಯಮಲು; ಮಂಕು ಕಮರಿತು ಧರೆಗೆ
ಕತ್ತಲೆಯಲಿ ಮಿನುಗುಹುಳು ಮಿಂಚುಕುಡಿದ.

ಇದು ಬೆಟ್ಟ ಇದು ಗುಡ್ಡ ಇದು ಮರದ ತಾಯ್ಬೇರು
ಇದು ಪರಮಪವಿತ್ರನದಿ ಎಂಬುದಿಲ್ಲ;
ಕಪ್ಪಡರಿ ಮೊರೆವಾಗ ಎಲ್ಲವೂ ಮಸಿಯಂತೆ
ಸತ್ಯ ಬತ್ತಲೆಯಂತೆ; ಕಾಣ್ಕೆಗಲ್ಲ.

ನಿಜದ ಸೂರ್ಯನು ನಾಳೆ ಹುಟ್ಟುವಾಶೆಯು ಸತ್ತು
ಕಪ್ಪು ಕತ್ತಲೆಯಲ್ಲಿ ಹುಡುಕುತಿಹೆನು;
ಸಂಜೆ ಭ್ರಾಂತಿಯ ಚಿತೆಗೆ ಇನ್ನಷ್ಟು ಸುಳ್ಳುಗಳ
ರಾತ್ರಿ ಚಂದಿರ ತಂದು ತುಂಬುತಿಹನು.

ಹಾಡು ಜೀವನ ಪ್ರೀತಿ.


ನನಗೆ ನೋವಿನ ಎಳೆಯು ಮಂಜಾಗಿ ಕಾಣುವುದು
ನಲಿವೇನೋ ಹೊಮ್ಮುವುದು ಬೆಳಕಿನಂತೆ
ನಾನು ಬರೆಯುವ ಹಾಡಿಗಿನ್ನೆಷ್ಟು ತುಂಬುವುದು?
ಬದುಕು ನೋವ್ ನಲಿವುಗಳ ದೊಡ್ಡ ಸಂತೆ

ಕವನ ಜನಿಸುವ ಸಮಯ ನಿಶ್ವಿಂತನಾಗುವೆನು
ಕವನ ಕೇಳುವ ನೆಪದಿ ಮಾತು ಮರೆವೆ
ಕಚ್ಚುವುದು ಬೆಚ್ಚುವುದು ನುಡಿಯ ಆವೇಶಕ್ಕೆ
ಕವಿಗೇನ್ ಮಣಿಯುವುದು; ನುಡಿಗೆ ಮಣಿವೆ

ಪೂರ್ವಸೂರಿಗಳೆಲ್ಲ ರಮ್ಯದಲಿ ನವ್ಯದಲಿ 
ಹೇಳಿದ್ದು ಬಹಳಷ್ಟು ಗಳಿಕೆ ಶೂನ್ಯ!
ನೋಟುಗಳ ಕಟ್ಟಿನಲಿ ಮನುಜ ನಿದ್ರಿಪನೇನು
ಮರಣದಲಿ ಸಾಕೇನು ಕೀರ್ತಿ ಮಾನ್ಯ.

ಉದ್ಧರಿಸುವಾಸೆ ಕವನಕ್ಕೊ ಕವಿಗಳಿಗೊ
ಇರುವುದೇ? ಹಸಿ ಸುಳ್ಳು ಎಂಬೆ ನಾನು
ಕವಿಯು ಬರೆಯುವ ಹಾಡು ಕನ್ನಡಿಯ ಗಂಟಹುದು
ತೋರಬಹುದಷ್ಟೆ;ಪಡೆಯಲಾರೆ ನೀನು.

ಬಡತನಕೆ ಮರುಗಿದರು ಕ್ರೌರ್ಯಕ್ಕೆ ಉಗುಳಿದರು
ಅಕ್ಷರಕೆ ಉತ್ತರವ ಕೊಡುವನಾರು?
ಇಂತ ಕಾವ್ಯವನೋದಿ ಮೇಜು ಕುಟ್ಟಿದ ಸದ್ದು
ಬರೆದವಗೆ ಸದ್ಗತಿಯು;ಗಾಜು ಚೂರು

ಅನುಭವದ ಮಾತುಗಳ ಬರೆದು ಸೃಷ್ಟಿಸಿದಾತ
ನೆರೆಮನೆಯ ಜನಕೆಲ್ಲ ಕಟ್ಟುಕತೆಯು;
ತನ್ನ ವಿಷಯದ ಹೆಮ್ಮೆ; ನುಡಿಗಟ್ಟಿಗಿಹ ಬಲ್ಮೆ
ಓದುಗನ ತೋಟದಲಿ ಬೆಳೆದ ಕಳೆಯು.

ಕಾವ್ಯ ಜೀವನಪ್ರೀತಿ; ನನ್ನ ನೋಟದ ಕಾಣ್ಕೆ
ನಿಮಗೂ ಪ್ರೀತಿಯೆ ಗುರುತು ಬದುಕಿನಲ್ಲಿ
ನೋವ ಹಂಚುವುದೇನು ಖಾರ ತೆಗಳುವುದೇನು
ಹಾಯಾದ ಸೊಗದುಸಿರು ಕಾವ್ಯದಲ್ಲಿ.

ರಮ್ಯವೂ ಸುಂದರವೂ ಮನಸಹಜದಾಪೇಕ್ಷೆ
ಹಕ್ಕಿನೋಟವು ಇರಲಿ ನನ್ನ ಕಾವ್ಯ
ಸಹಜತೆಯ ಒಪ್ಪುವುದು; ಪ್ರೀತಿಯನು ಹೊದ್ದುವುದು
ಹಿತಕೆ ನಿಜಮಾನಸಕೆ ಇಳಿಯೆ ಧನ್ಯ.