Saturday, June 6, 2015

ಬಲರಾಮ ತರುವ ಕೊಳಲು.

೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾಚೆ ಹೋಗಿ ತನ್ನಣ್ಣ ಬರುವ ಹಾದಿಯನು ಕಾದ ಕುಂತು! ೨ ನೇಗಿಲನು ಹೊತ್ತು ಬರುವಂತ ಅಣ್ಣ ತಂದಾನೆ ಬಣ್ಣ ಬಿದಿರ? ಸೋದರನಿಗೆಂದು ಗುದ್ದನ್ನು ಕೊಡುವ, ಮುದ್ದಿಪನೆ ಬಿಳಿಯ ಪೋರ? ಬಂಗಾರ ಬೇಡ ಮಾಣಿಕ್ಯಬೇಡ ಕೊಳಲೊಂದೆ ನನ್ನ ಒಡಲು ಕಾಲು ಹಿಡಿದು ನಾ ಪಡೆಯಬೇಕು ಇನ್ನೊಂದು ಬಿದಿರ ಕೊಳಲು ಅಣ್ಣಯ್ಯ ಕೇಳು ದಮ್ಮಯ್ಯ ಕೇಳು ಕೊಳಲೊಂದು ಒಡೆದು ಹೋಯ್ತು ತಮ್ಮಯ್ಯ ನಾನು ಬೇಡಿದರೆ ಹೀಗೆ ಮೊಗವೇಕೆ ಕೆಂಪಗಾಯ್ತು? ಮೇಲೆ ಕಾಡಿನಲಿ ಬಿದಿರ ಮೆಳೆಗಳಲಿ ಹೊಸತೊಂದು ಮೊಳೆಯದೇನು ನನಗಾಗಿ ಒಂದು ಕೊಳಲನ್ನು ತಾರೊ! ನಾ ತಮ್ಮನಲ್ಲವೇನು? ೩ ಎಲೆ ಕೃಷ್ಣ ಕೇಳು; ಬಲು ಜಾಣ ನೀನು ಇದು ನಿನ್ನ ಲೀಲೆ ತಾನೆ ಬಲರಾಮನಲ್ಲಿ ನೀ ಕೊಳಲು ಕೇಳುವುದು ಎಷ್ಟು ಸರಿಯೊ ಕಾಣೆ! ನಿಲಲಾರೆ ನೀನು ಒಂದೆಡೆಯ ಜಗದಿ ನೀನೆಲ್ಲ ಕಡೆಗು ನಲಿವೆ ಮತ್ತೊಮ್ಮೆ ಹೀಗೆ ನೀ ಮನುಜನಾತ್ಮದಲಿ ನಿನ್ನ ಕಡೆಗೆ ಕರೆವೆ. ಬಂಗಾರದಂತ ಹೊಳಪುಳ್ಳ ಬಿದಿರ ನಾ ಎಷ್ಟು ತರಲಿ ಇದಕೆ ಬಿಸಿಯಾರದಂಥ ಕಬ್ಬಿಣವ ಕಾಸಿ ಎಷ್ಟಿರಲಿ ಘಾಸಿ ಅದಕೆ? ತುಟಿಯು ನಿನದಿರಲಿ ಬೆರಳು ನಗುತಿರಲಿ ಮೊಗದಿ ಮಂದಹಾಸ ಜಗದ ನಾಟಕಕೆ ನೀನೆ ತಾನೆ ಹರಿ, ನಾನು ನಿನ್ನ ದಾಸ!

ಓ ಲಕ್ಷ್ಮಣಾ!

ಇಲ್ಲಿ ಬಳ್ಳಿಯ ತೂಗಿ; ವಲ್ಕಲವ ಹಾಸುವೆನು ಗಾಳಿ ಬೀಸದೆ ಇರಲಿ ಎಂದುಕೊಳುತ ಬಿರುಗಾಳಿ ಬಂದೆರಗಿ ನಾರುಮಡಿ ಬೀಳುತಲೆ ಜಾನಕಿಯು ಕೂಗಿದಳು- ಓ ಲಕ್ಷ್ಮಣಾ! ಚಿನ್ನಜಿಂಕೆಯ ವೇಷ ರಕ್ಕಸನು ಹೊರಬಂದು ತನ್ನಳಿಯ ಕೊಟ್ಟಿರುವ ಕೆಲಸವಾಗೆ, ಮುಂದುಗಾಣದೆ ಮೋಕ್ಷ ರಾಮಬಾಣಕೆ ಒರಗಿ ಮಾರೀಚ ಕೂಗಿದನು - ಓ ಲಕ್ಷ್ಮಣಾ! ಮಂಕುಕವಿದಿತು ಭೂಮಿ, ಮೃದುಲತಾಂಗಿಯು ಎಲ್ಲಿ? ಕಾವಲಿರು ನಿನಗೆಂದೆ, ಏಕೆ ಬಂದೆ? ಎಲ್ಲಿ ಹೋಗಿಹಳೆನ್ನ ಆತ್ಮದರಗಿಣಿ ಸೀತೆ? ಶ್ರೀರಾಮ ಮರುಗಿದನು - ಓ ಲಕ್ಷ್ಮಣಾ! ಇಂದ್ರಾರಿ ಬಂದನಿದೊ ಉರಿಸಿಡಿಲ ನೂರು ಶರ ಇವನ ಯಾಗಕೆ ಹತವು ನಮ್ಮ ಸೇನೆ. ಉಪವಾಸನಿರತನೀ ವರಯೋಗಿ ಸೋದರನೆ ರಾಮಕಾರ್ಯಕೆ ಸಲ್ಲು- ಓ ಲಕ್ಷ್ಮಣಾ! ಕಾಲಪುರುಷನು ಬಂದ; ಬಾಗಿಲನು ತೆರೆಯೆಂದ ಗುಟ್ಟು ಪೇಳಲು ಕಾಯ್ವ ಭಟನ ಕೇಳ್ದ. ಒಳಗೆ ಬರುವುದಕಿಲ್ಲ, ಮರಣದಂಡನೆ ಶಿಕ್ಷೆ ಎಚ್ಚರದಿ ಕಾಯೆನುತ - ಓ ಲಕ್ಷ್ಮಣಾ! ರಸಿಕರೇ ಜೊತೆಗಿರಲಿ ಮಿತ್ರನಂದದಿ ಬಂದೆ ರಾಮಜೀವನದಂತೆ ನಿನ್ನದೇನಾ! ರಾಮನವಮಿಯ ದಿನಕೆ ನಿನ್ನ ನೆನೆವುದು ಮನವು ನಿನ್ನ ಕಾಣ್ಕೆಯೆ ದಿಟವು- ಓ ಲಕ್ಷ್ಮಣಾ!

ಒಂದು ಸಂಜೆಗೆ ಹೀಗೆ..

ಒಂದು ಸಂಜೆಗೆ ಹೀಗೆ ದೂರದಾರಿಯ ನಡೆಗೆ ಅವಳ ಸಾಂಗತ್ಯವು ಇರದಾಯಿತು ಹಾದಿಯಲಿ ಸಿಗುತಿದ್ದ ಕಾಡಮಲ್ಲಿಗೆಯಿಲ್ಲ ಮನದ ಭಾವನೆಯೆಲ್ಲ ಬರಡಾಯಿತು. ಅವಳು ನನ್ನನು ಕರೆವ ಪಿಸುಮಾತಿನಂತೆಯೇ ಕಾಡಿನೊಳಗಿನ ಹಕ್ಕಿ ಕೊರಳುಲಿಯಿತು ಯಾವುದೋ ಭಾವವನು ಮನದಿ ಮೆಲ್ಲನೆ ಕಲಕಿ ಹಕ್ಕಿ ಹೆಜ್ಜೆಯ ಹುಡುಕುವಂತಾಯಿತು. ನೀರಿರದ ಕೊಳದಾಳದಿರುವ ಮಣ್ಣಿನ ಗರಿಯು ರೆಂಜೆಹೂ ನೆನಪಿಸುವ ಬಣ್ಣದೊಳಗೆ ಬಗೆಬಗೆಯ ಒಣಗಿರುವ ಹುಲ್ಲು ಸಿಂಹಾಸನಕೆ ಅವಳು ಇದ್ದಳು ನಗುತ ಅವನ ಜೊತೆಗೆ ಸಂಜೆಯಾಯಿತು ನಲ್ಲ; ಮಳೆಬರುವ ಮೊದಲೆಲ್ಲ ನಾವು ಸಾಗಲೆಬೇಕು ಗೂಡು ಬಿಟ್ಟು ಎನುವ ಮಾತುಗಳನ್ನು ನಾನು ಕೇಳುತ ನಿಂತೆ ನೆಲೆಯು ಯಾರಿಗೆ ಸ್ವಂತ? ಸಾವು? ಹುಟ್ಟು.

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು!

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು ನೂರು ಸಾವಿರ ಕಣ್ಣು ಕೋಟೆಯೊಳಗೆ ಮನಸಿನಾಸರೆಗಾಯ್ತು ಬಹುಮಾನ ನೋವಿನಲಿ ಕಣ್ಣು ಕಿತ್ತಿತು ನೋಟ, ನಿನ್ನ ನುಡಿಗೆ. ನೀ ನುಡಿವ ಮೊದಲೇನೆ ಮಾತನಾಡಿದೆ ನಾನು ಮಾತು ಮುಗಿಯುವುದೆಂಬ ಧ್ಯಾನದಲ್ಲಿ ನಿನ್ನ ಮಾತನು ಕೇಳ್ವ ಕಿವಿಗೆ ಕರಗಿದ ಸೀಸ ನೋವು ನಂಬದೆ ಬಂತು ಪ್ರೀತಿಯಲ್ಲಿ. ಸೋತು ಹುಟ್ಟುವ ಪ್ರೀತಿ ಗೆಲುವ ಕಾಣಲೆ ಇಲ್ಲ ಮುಂದೆ ಕಾಣದೆ ಇರಲಿ ಗೋರಿಯಲ್ಲಿ ದೂರಸಾಗುವ ಮೊದಲು ದಾರಿಯಲಿ ಇಣುಕುವೆನು ನಿನ್ನ ನೆನಪಿದೆ ಗೆಳತಿ, ಮಲ್ಲಿಗೆಯಲಿ

ರಾತ್ರಿ ಹೂ

ಅದೆಂತೊ ರಾತ್ರಿ ಹೂ ವಿರಮಿಸಿದೆ ನಗುತ ಬಳ್ಳಿ ಹೂಗಳ ಒದರಿ ಉದುರಿಸುತ್ತಾ! ಬಳೆಯ ಘಲ್ಲನೆ ಸರಕೆ ಸಂಭ್ರಮದ ಉತ್ತುಂಗ ಜೋಪಾನ ಎಂದವನ ನೇವರಿಸುತಾ ಒಡೆದ ಗಾಜಿನ ಚೂರು ಕೈಬೆರಳು ಹೊಕ್ಕಿತ್ತ ಬಳ್ಳಿಹೂಗಳ ಒದರಿ ಉದುರಿಸುತ್ತಾ! ಕೀಲುಗುದುರೆಗು ಜೀವ ಬಂದಂತೆ ಹಾರುತಿದೆ ದೂರಯಾನವು ಸುಳ್ಳು, ಹುಚ್ಚು ಕುಣಿತ ಅಪರಾತ್ರಿಯಲ್ಲಿಯೂ ಅರಶಿಣವ ಹಚ್ಚುತ್ತಾ ಬಳ್ಳಿಹೂಗಳ ಒದರಿ ಉದುರಿಸುತ್ತಾ! ಸಣ್ಣದುಣ್ಣನೆ ದನಿಗೆ ಬೆವರಿದಂತೆಯೆ ಕನಸು ಮತ್ತೇನನೋ ಬಯಸಿ ಸಾವರಿಸುತಾ ಎದೆಯು ಹಿಂದೋಡುತಿದೆ ಮನವಿದೋ ಕೆರಳುತ್ತ ಬಳ್ಳಿಹೂಗಳು ಬಸುರಿ; ಮೋಕ್ಷದತ್ತಾ!

ಅವಳು ಹಳ್ಳಿಯ ಹುಡುಗಿ

ಅವಳು ಹಳ್ಳಿಯ ಹುಡುಗಿ ನಗರ ಚೆಲುವನ ಕಂಡು ಮದುವೆಯಾಯಿತು ಮೊನ್ನೆ; ತಿಂಗಳಾಯ್ತು ಬಿದ್ದ ಅಕ್ಷತೆಕಾಳು ಹೆರಳ ಸಂಧಿಯ ತೊರೆದು ನಗರ ಜೀವನದೊಲುಮೆ ಜೊತೆಗೆ ಬಂತು. ಬಾಗಿಲನು ತೆರೆದಿರಿಸಿ ಕೂರದಿರು ಎಂದಿಹನು ಯಾವ ಕಳ್ಳರ ಭಯವೊ ತಿಳಿಯದಲ್ಲ! ಹೊಸಿಲು ದಾಟುವ ಮೊದಲು ಯೋಚನೆಯ ಸರಮಾಲೆ ಅವಳ ಕೇಳುವ ಕಿವಿಯು ಸಿಗುವುದಿಲ್ಲ ಸಂಜೆಯಾದರೆ ಅವಳು ನೆನೆಯುವಳು ಊರನ್ನು ತುಳಸಿ ಹೂವಿನ ಎದುರು ದೀಪವನ್ನು ಕರುವನಾಡಿಸುವಾಗ ಹಸು ತಿನ್ನಬಯಸುವುದು ಮುಡಿದು ಬಾಡಿದ ಹೆರಳ ಹೂಗಳನ್ನು. ದೂರದಲಿ ಸದ್ದಾಗಿ ವಾಸ್ತವಕೆ ಬರುವವಳು ಅವನ ದಾರಿಯ ಕಾಯ್ವ ಹೆಣ್ಣುಮಗಳು ಮನೆಯ ನೆನಪಲಿ ಮಿಡಿದ ಕಂಬನಿಯ ಒರೆಸುವಳು ಒಳಮನೆಯ ಕೋಣೆಯಲಿ ಹಣತೆಯಿರುಳು.

ಗೋಕುಲದ ಸಂಜೆ.

ಗೋಕುಲದ ಸಂಜೆಯಲಿ ದನದ ಕೊರಳಿನ ದನಿಯು ರಾಧೆ ಸಖಿಯಳ ಗೆಜ್ಜೆ ಬೆರೆತು ಕೇಳಿ; ನೀಲ ಶ್ಯಾಮನ ಮುರಳಿ ಜೊತೆ ಬೆರೆದು ಉಲಿಯುತಿದೆ ದಣಿವು ಸೂರ್ಯನಿಗಲ್ತೆ? ಸುಖದ ಹೋಳಿ ಗೋಪಿಕೆಯ ಪಾದಗಳು ಪುಡಿಯಾಯ್ತು ಕುಣಿದಾಡಿ ನರುಗೆಂಪು ಧೂಳಿನಲಿ ಬಾನು ತಲುಪಿ ಬೆಟ್ಟದೂರದ ಹಿಂದೆ ಕೆಂಪು ಕಪ್ಪೇರುತಿದೆ ಕಿವಿಯ ಓಲೆಯ ಸುತ್ತ ಹೆರಳು ಸಿಲುಕಿ ನಡೆ ಶ್ಯಾಮ ನುಡಿ ಶ್ಯಾಮ ಕುಣಿಯುತ್ತ ಓಲಾಡು ಬೆನ್ನುಗೀರುತ ಬಹಳು ರಾಧಾ ಸಖಿ! ಗೋವುಗಳ ದಾರಿಯಲಿ ಓಡುವುದು ಬಲುಕಷ್ಟ ನಿಂತುಬಿಟ್ಟರೆ ಶ್ಯಾಮ! ಅವಳೇ ಸುಖಿ ಕತ್ತಲೆನ್ನುವ ಮಾರ ತಬ್ಬಿಕೊಂಡನು ಇಳೆಯ ಕುಣಿತ ತಗ್ಗಿತು ಜಗದಿ; ಇರುಳಾಯಿತು ಮನೆಯ ಸೇರುವ ಸಮಯ, ದೀಪ ಬೆಳಗುತ್ತಲಿದೆ ಒಂದು ಸಂಜೆಯ ಕಾವ್ಯ ಕೊನೆಯಾಯಿತು.