Sunday, April 27, 2014

ಸೀತಾಲತೆಯ ಕತೆ!

ಹೀಗೊಂದು ಸಂಜೆಯಲಿ ನದಿಯ ತೀರದಳೊಂದು
ಜಲದಿ ತೇಲುವ ಬಳ್ಳಿ ಕಾಣುತಿರಲು;
ಯಾವ ಕತೆಗೋ ಏನೋ ಅದನೆ ನೋಡುತ ಕರಗಿ
ಮನೆಗೆ ಬಂದಿತು ಬಳ್ಳಿ ಪ್ರೇಮದವೊಲು!

ಕಾಡಿನೊಲುಮೆಯ ಜೊತೆಗೆ ಮಣ್ಣು ಮಮತೆಯ ಕರೆಗೆ
ಬಳ್ಳಿ ಚಿಗುರಿತ್ತೆಂದು ರಾಮನಲ್ಲಿ,
ಹೇಳುವುದೆ ಸಂಭ್ರಮವು, ಅಹಾ ಬಳ್ಳಿ ಚಿಗುರೊಲವು
ಮಣ್ಣಿನಣುಗಿಗೆ ಲತೆಗೆ ಬೇಧವೆಲ್ಲಿ?

ದೂರ ಚಾಚಿತು ಸೊಬಗು ಬಳುಕಿನಾಚೆಗೆ ಗೆಲ್ಲು
ತಬ್ಬಿ ಬೆಳೆಯಲು ಇರುವ ಕೋಲಾಸರೆ!
ಬಾಗಿಲಿನ ಬಳಿಯಲ್ಲಿ ಬೆಳಗು ನೋಡುವುದಲ್ಲ
ಬಳ್ಳಿ ಬಳುಕಿನ ನಡುವೆ ಸೀತಾ ಸೆರೆ!

ಹೂಬಿಡುವ ಕಾಲದಲಿ ಕಾನನದ ಮೂಲೆಯಲಿ
ಮಾರೀಚನೀಚತೆಯ ಜಿಂಕೆ ಬರಲು
ಮಲ್ಲಿಗೆಯ ಮರೆತವಳು ಹೊನ್ನಹರಿಣಕೆ ಮನವು!
ರಾಮಬಾಣದ ಕೊನೆಯು ಸೀತೆ ನಗಲು

ಸೆಳೆದು ಎಳೆಯುವ ನಡುವೆ ಬಳ್ಳಿ ಸೊರಗಿದರೇನು
ಸೀತೆ ಕೈಯ್ಯೊಳು ಮೊಗ್ಗು ಹರಿದು ಬಂತು!
ಹಿಂತಿರುಗಿ ರಘುರಾಮ ಬಂದು ಕಾಣುವುದೇನು
ಮಲ್ಲಿಗೆಯ ಬಳ್ಳಿಯಲಿ ಮೌನವಿತ್ತು!

Tuesday, April 15, 2014

ನನ್ನವಳು ನಕ್ಕಾಗ

ನನ್ನವಳು ನಕ್ಕಾಗ ಹಣತೆಗಳು ಬೆಳಗುವವು
ಯಾವುದನು ಹೋಲಿಸಲಿ? ಹುಡುಕಬೇಕು.
ಸಂಜೆಯೇರುತ ಕಪ್ಪು ಜಗವನ್ನೆ ಸುತ್ತಿರಲು
ತುಳಸಿ ಹೂವಿನ ಎದುರು ಕಂಡ ಬೆಳಕು;

ಎಣ್ಣೆ ಹೀರಿದ ಹಣತೆ, ಕರಿಯ ಬತ್ತಿಯನೆತ್ತಿ
ಹೀಗೊಮ್ಮೆ ಹಾಗೊಮ್ಮೆ ಹುಬ್ಬನೊರಸಿ;
ನನ್ನವಳು ಎದೆಗಾತು ಹಣತೆಯನು ಹಚ್ಚುವಳು
ನನ್ನ ಒಲವಿನ ಮಾತು ಹಿತದಿ ಬೆರೆಸಿ.

ಗಾಳಿಯಾಡುವ ದಿನಕೆ ಹಸ್ತದಲಿ ತಡೆಯುವಳು
ದೀಪವಾರದೆ ಇರಲಿ ಎಂಬ ಕನಸು;
ತುಳಸಿಬದಿಯಲಿ ನಿಂತು ದೇವರನು ಬೇಡುವಳು
ಅವಳ ಮೊಗದಲಿ ಕಾಂತಿ ಎಂತ ಸೊಗಸು!

ಯಾವ ಬಿಗುಮಾನವೂ ಸುಳಿಯಲಾರದು ಇಲ್ಲಿ
ನೋವಿರಲಿ ನಗೆಯಿರಲಿ ಹಣತೆಯಿರಲಿ;
ದಿನನಿತ್ಯ ಹರಸುವಾ ಒಲುಮೆಯಾಟದ ಬೆಳಕು
ಆರದೆಯೆ ಇರಲೆಂಬ ಪ್ರೀತಿಯಲ್ಲಿ!

Tuesday, April 1, 2014

ಅವಳ ಜೊತೆಗಿನ ಸಂಜೆ

ಈ ಸಂಜೆಯಾದಾಗ ಅವಳ ನೆನೆವೆನು ನಾನು
ಹಣೆಗಿಳಿವ ಹೆರಳನ್ನೆ ಸರಿಸಿ ಬರಲು;
ಆಗಸದಿ ಹೊಳೆಯುವಾ ಮುಳುಗು ಸೂರ್ಯನ ಹಾಗೆ
ಬಿಂದಿಯನು ಧರಿಸಿಹಳು ನಾನು ನಗಲು.

ದಡದಲ್ಲಿ ಮಿನುಗುತಿಹ ಮರಳುಕಣ ಕಣದೊಳಗೆ
ಅವಳ ನಗುವಿನ ರೀತಿ ಹೊಳೆವ ಮಿಂಚು;
ಚಿಪ್ಪುಗಳ ಸರಿಸುವುದು ತೆರೆಯ ನೆಪದಲಿ ಕಡಲು
ನನ್ನವಳ ಪಾದದಲಿ ಅಂತ ಹೊಳಪು.

ಅಬ್ಬರಿಸುತಿದ್ದವನು ಸಾಗರನು ಈ ದಿನದಿ
ಸುಮ್ಮನುಳಿದನು ಗೆಜ್ಜೆ ಸದ್ದು ಕೇಳಿ;
ನನ್ನವಳ ಜೊತೆ ನಾನು ನಡೆಯುತ್ತ ಬಂದಿರಲು
ನನ್ನ ಕೆಣಕುವನೇನು ನೀವೆ ಹೇಳಿ!

ಮುಳುಗುತಿದ್ದಾ ಸೂರ್ಯ ನನ್ನವಳ ಕಂಡೊಡನೆ
ಬಿಂದಿಯೂ ನಕ್ಕೀತು ಅವನ ಕಂಡು;
ಸೂರ್ಯ ಕೆಂಪೇರಿದನೆ ಈ ಹುಡುಗ ಯಾರೆಂದು?
ತಾನಾಗಬಯಸಿದನೆ ಮದುವೆ ಗಂಡು?

ನಡೆವೆ ನಾ ಕೈಹಿಡಿದು ಪಯಣ ಹೇಗೇ ಇರಲಿ
ಸಂಜೆಗಳು ಹೀಗೆಯೇ ನಗುತಲಿರಲಿ;
ನನ್ನವಳ ಜೊತೆಗಿಷ್ಟು ನಗುವನ್ನು ಹಂಚಲಿದೆ
ರಾತ್ರಿ ಕಳೆಯಲಿ, ಮರಳಿ ಸಂಜೆ ಬರಲಿ.