Saturday, June 6, 2015

ಬಲರಾಮ ತರುವ ಕೊಳಲು.

೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾಚೆ ಹೋಗಿ ತನ್ನಣ್ಣ ಬರುವ ಹಾದಿಯನು ಕಾದ ಕುಂತು! ೨ ನೇಗಿಲನು ಹೊತ್ತು ಬರುವಂತ ಅಣ್ಣ ತಂದಾನೆ ಬಣ್ಣ ಬಿದಿರ? ಸೋದರನಿಗೆಂದು ಗುದ್ದನ್ನು ಕೊಡುವ, ಮುದ್ದಿಪನೆ ಬಿಳಿಯ ಪೋರ? ಬಂಗಾರ ಬೇಡ ಮಾಣಿಕ್ಯಬೇಡ ಕೊಳಲೊಂದೆ ನನ್ನ ಒಡಲು ಕಾಲು ಹಿಡಿದು ನಾ ಪಡೆಯಬೇಕು ಇನ್ನೊಂದು ಬಿದಿರ ಕೊಳಲು ಅಣ್ಣಯ್ಯ ಕೇಳು ದಮ್ಮಯ್ಯ ಕೇಳು ಕೊಳಲೊಂದು ಒಡೆದು ಹೋಯ್ತು ತಮ್ಮಯ್ಯ ನಾನು ಬೇಡಿದರೆ ಹೀಗೆ ಮೊಗವೇಕೆ ಕೆಂಪಗಾಯ್ತು? ಮೇಲೆ ಕಾಡಿನಲಿ ಬಿದಿರ ಮೆಳೆಗಳಲಿ ಹೊಸತೊಂದು ಮೊಳೆಯದೇನು ನನಗಾಗಿ ಒಂದು ಕೊಳಲನ್ನು ತಾರೊ! ನಾ ತಮ್ಮನಲ್ಲವೇನು? ೩ ಎಲೆ ಕೃಷ್ಣ ಕೇಳು; ಬಲು ಜಾಣ ನೀನು ಇದು ನಿನ್ನ ಲೀಲೆ ತಾನೆ ಬಲರಾಮನಲ್ಲಿ ನೀ ಕೊಳಲು ಕೇಳುವುದು ಎಷ್ಟು ಸರಿಯೊ ಕಾಣೆ! ನಿಲಲಾರೆ ನೀನು ಒಂದೆಡೆಯ ಜಗದಿ ನೀನೆಲ್ಲ ಕಡೆಗು ನಲಿವೆ ಮತ್ತೊಮ್ಮೆ ಹೀಗೆ ನೀ ಮನುಜನಾತ್ಮದಲಿ ನಿನ್ನ ಕಡೆಗೆ ಕರೆವೆ. ಬಂಗಾರದಂತ ಹೊಳಪುಳ್ಳ ಬಿದಿರ ನಾ ಎಷ್ಟು ತರಲಿ ಇದಕೆ ಬಿಸಿಯಾರದಂಥ ಕಬ್ಬಿಣವ ಕಾಸಿ ಎಷ್ಟಿರಲಿ ಘಾಸಿ ಅದಕೆ? ತುಟಿಯು ನಿನದಿರಲಿ ಬೆರಳು ನಗುತಿರಲಿ ಮೊಗದಿ ಮಂದಹಾಸ ಜಗದ ನಾಟಕಕೆ ನೀನೆ ತಾನೆ ಹರಿ, ನಾನು ನಿನ್ನ ದಾಸ!

ಓ ಲಕ್ಷ್ಮಣಾ!

ಇಲ್ಲಿ ಬಳ್ಳಿಯ ತೂಗಿ; ವಲ್ಕಲವ ಹಾಸುವೆನು ಗಾಳಿ ಬೀಸದೆ ಇರಲಿ ಎಂದುಕೊಳುತ ಬಿರುಗಾಳಿ ಬಂದೆರಗಿ ನಾರುಮಡಿ ಬೀಳುತಲೆ ಜಾನಕಿಯು ಕೂಗಿದಳು- ಓ ಲಕ್ಷ್ಮಣಾ! ಚಿನ್ನಜಿಂಕೆಯ ವೇಷ ರಕ್ಕಸನು ಹೊರಬಂದು ತನ್ನಳಿಯ ಕೊಟ್ಟಿರುವ ಕೆಲಸವಾಗೆ, ಮುಂದುಗಾಣದೆ ಮೋಕ್ಷ ರಾಮಬಾಣಕೆ ಒರಗಿ ಮಾರೀಚ ಕೂಗಿದನು - ಓ ಲಕ್ಷ್ಮಣಾ! ಮಂಕುಕವಿದಿತು ಭೂಮಿ, ಮೃದುಲತಾಂಗಿಯು ಎಲ್ಲಿ? ಕಾವಲಿರು ನಿನಗೆಂದೆ, ಏಕೆ ಬಂದೆ? ಎಲ್ಲಿ ಹೋಗಿಹಳೆನ್ನ ಆತ್ಮದರಗಿಣಿ ಸೀತೆ? ಶ್ರೀರಾಮ ಮರುಗಿದನು - ಓ ಲಕ್ಷ್ಮಣಾ! ಇಂದ್ರಾರಿ ಬಂದನಿದೊ ಉರಿಸಿಡಿಲ ನೂರು ಶರ ಇವನ ಯಾಗಕೆ ಹತವು ನಮ್ಮ ಸೇನೆ. ಉಪವಾಸನಿರತನೀ ವರಯೋಗಿ ಸೋದರನೆ ರಾಮಕಾರ್ಯಕೆ ಸಲ್ಲು- ಓ ಲಕ್ಷ್ಮಣಾ! ಕಾಲಪುರುಷನು ಬಂದ; ಬಾಗಿಲನು ತೆರೆಯೆಂದ ಗುಟ್ಟು ಪೇಳಲು ಕಾಯ್ವ ಭಟನ ಕೇಳ್ದ. ಒಳಗೆ ಬರುವುದಕಿಲ್ಲ, ಮರಣದಂಡನೆ ಶಿಕ್ಷೆ ಎಚ್ಚರದಿ ಕಾಯೆನುತ - ಓ ಲಕ್ಷ್ಮಣಾ! ರಸಿಕರೇ ಜೊತೆಗಿರಲಿ ಮಿತ್ರನಂದದಿ ಬಂದೆ ರಾಮಜೀವನದಂತೆ ನಿನ್ನದೇನಾ! ರಾಮನವಮಿಯ ದಿನಕೆ ನಿನ್ನ ನೆನೆವುದು ಮನವು ನಿನ್ನ ಕಾಣ್ಕೆಯೆ ದಿಟವು- ಓ ಲಕ್ಷ್ಮಣಾ!

ಒಂದು ಸಂಜೆಗೆ ಹೀಗೆ..

ಒಂದು ಸಂಜೆಗೆ ಹೀಗೆ ದೂರದಾರಿಯ ನಡೆಗೆ ಅವಳ ಸಾಂಗತ್ಯವು ಇರದಾಯಿತು ಹಾದಿಯಲಿ ಸಿಗುತಿದ್ದ ಕಾಡಮಲ್ಲಿಗೆಯಿಲ್ಲ ಮನದ ಭಾವನೆಯೆಲ್ಲ ಬರಡಾಯಿತು. ಅವಳು ನನ್ನನು ಕರೆವ ಪಿಸುಮಾತಿನಂತೆಯೇ ಕಾಡಿನೊಳಗಿನ ಹಕ್ಕಿ ಕೊರಳುಲಿಯಿತು ಯಾವುದೋ ಭಾವವನು ಮನದಿ ಮೆಲ್ಲನೆ ಕಲಕಿ ಹಕ್ಕಿ ಹೆಜ್ಜೆಯ ಹುಡುಕುವಂತಾಯಿತು. ನೀರಿರದ ಕೊಳದಾಳದಿರುವ ಮಣ್ಣಿನ ಗರಿಯು ರೆಂಜೆಹೂ ನೆನಪಿಸುವ ಬಣ್ಣದೊಳಗೆ ಬಗೆಬಗೆಯ ಒಣಗಿರುವ ಹುಲ್ಲು ಸಿಂಹಾಸನಕೆ ಅವಳು ಇದ್ದಳು ನಗುತ ಅವನ ಜೊತೆಗೆ ಸಂಜೆಯಾಯಿತು ನಲ್ಲ; ಮಳೆಬರುವ ಮೊದಲೆಲ್ಲ ನಾವು ಸಾಗಲೆಬೇಕು ಗೂಡು ಬಿಟ್ಟು ಎನುವ ಮಾತುಗಳನ್ನು ನಾನು ಕೇಳುತ ನಿಂತೆ ನೆಲೆಯು ಯಾರಿಗೆ ಸ್ವಂತ? ಸಾವು? ಹುಟ್ಟು.

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು!

ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು ನೂರು ಸಾವಿರ ಕಣ್ಣು ಕೋಟೆಯೊಳಗೆ ಮನಸಿನಾಸರೆಗಾಯ್ತು ಬಹುಮಾನ ನೋವಿನಲಿ ಕಣ್ಣು ಕಿತ್ತಿತು ನೋಟ, ನಿನ್ನ ನುಡಿಗೆ. ನೀ ನುಡಿವ ಮೊದಲೇನೆ ಮಾತನಾಡಿದೆ ನಾನು ಮಾತು ಮುಗಿಯುವುದೆಂಬ ಧ್ಯಾನದಲ್ಲಿ ನಿನ್ನ ಮಾತನು ಕೇಳ್ವ ಕಿವಿಗೆ ಕರಗಿದ ಸೀಸ ನೋವು ನಂಬದೆ ಬಂತು ಪ್ರೀತಿಯಲ್ಲಿ. ಸೋತು ಹುಟ್ಟುವ ಪ್ರೀತಿ ಗೆಲುವ ಕಾಣಲೆ ಇಲ್ಲ ಮುಂದೆ ಕಾಣದೆ ಇರಲಿ ಗೋರಿಯಲ್ಲಿ ದೂರಸಾಗುವ ಮೊದಲು ದಾರಿಯಲಿ ಇಣುಕುವೆನು ನಿನ್ನ ನೆನಪಿದೆ ಗೆಳತಿ, ಮಲ್ಲಿಗೆಯಲಿ

ರಾತ್ರಿ ಹೂ

ಅದೆಂತೊ ರಾತ್ರಿ ಹೂ ವಿರಮಿಸಿದೆ ನಗುತ ಬಳ್ಳಿ ಹೂಗಳ ಒದರಿ ಉದುರಿಸುತ್ತಾ! ಬಳೆಯ ಘಲ್ಲನೆ ಸರಕೆ ಸಂಭ್ರಮದ ಉತ್ತುಂಗ ಜೋಪಾನ ಎಂದವನ ನೇವರಿಸುತಾ ಒಡೆದ ಗಾಜಿನ ಚೂರು ಕೈಬೆರಳು ಹೊಕ್ಕಿತ್ತ ಬಳ್ಳಿಹೂಗಳ ಒದರಿ ಉದುರಿಸುತ್ತಾ! ಕೀಲುಗುದುರೆಗು ಜೀವ ಬಂದಂತೆ ಹಾರುತಿದೆ ದೂರಯಾನವು ಸುಳ್ಳು, ಹುಚ್ಚು ಕುಣಿತ ಅಪರಾತ್ರಿಯಲ್ಲಿಯೂ ಅರಶಿಣವ ಹಚ್ಚುತ್ತಾ ಬಳ್ಳಿಹೂಗಳ ಒದರಿ ಉದುರಿಸುತ್ತಾ! ಸಣ್ಣದುಣ್ಣನೆ ದನಿಗೆ ಬೆವರಿದಂತೆಯೆ ಕನಸು ಮತ್ತೇನನೋ ಬಯಸಿ ಸಾವರಿಸುತಾ ಎದೆಯು ಹಿಂದೋಡುತಿದೆ ಮನವಿದೋ ಕೆರಳುತ್ತ ಬಳ್ಳಿಹೂಗಳು ಬಸುರಿ; ಮೋಕ್ಷದತ್ತಾ!

ಅವಳು ಹಳ್ಳಿಯ ಹುಡುಗಿ

ಅವಳು ಹಳ್ಳಿಯ ಹುಡುಗಿ ನಗರ ಚೆಲುವನ ಕಂಡು ಮದುವೆಯಾಯಿತು ಮೊನ್ನೆ; ತಿಂಗಳಾಯ್ತು ಬಿದ್ದ ಅಕ್ಷತೆಕಾಳು ಹೆರಳ ಸಂಧಿಯ ತೊರೆದು ನಗರ ಜೀವನದೊಲುಮೆ ಜೊತೆಗೆ ಬಂತು. ಬಾಗಿಲನು ತೆರೆದಿರಿಸಿ ಕೂರದಿರು ಎಂದಿಹನು ಯಾವ ಕಳ್ಳರ ಭಯವೊ ತಿಳಿಯದಲ್ಲ! ಹೊಸಿಲು ದಾಟುವ ಮೊದಲು ಯೋಚನೆಯ ಸರಮಾಲೆ ಅವಳ ಕೇಳುವ ಕಿವಿಯು ಸಿಗುವುದಿಲ್ಲ ಸಂಜೆಯಾದರೆ ಅವಳು ನೆನೆಯುವಳು ಊರನ್ನು ತುಳಸಿ ಹೂವಿನ ಎದುರು ದೀಪವನ್ನು ಕರುವನಾಡಿಸುವಾಗ ಹಸು ತಿನ್ನಬಯಸುವುದು ಮುಡಿದು ಬಾಡಿದ ಹೆರಳ ಹೂಗಳನ್ನು. ದೂರದಲಿ ಸದ್ದಾಗಿ ವಾಸ್ತವಕೆ ಬರುವವಳು ಅವನ ದಾರಿಯ ಕಾಯ್ವ ಹೆಣ್ಣುಮಗಳು ಮನೆಯ ನೆನಪಲಿ ಮಿಡಿದ ಕಂಬನಿಯ ಒರೆಸುವಳು ಒಳಮನೆಯ ಕೋಣೆಯಲಿ ಹಣತೆಯಿರುಳು.

ಗೋಕುಲದ ಸಂಜೆ.

ಗೋಕುಲದ ಸಂಜೆಯಲಿ ದನದ ಕೊರಳಿನ ದನಿಯು ರಾಧೆ ಸಖಿಯಳ ಗೆಜ್ಜೆ ಬೆರೆತು ಕೇಳಿ; ನೀಲ ಶ್ಯಾಮನ ಮುರಳಿ ಜೊತೆ ಬೆರೆದು ಉಲಿಯುತಿದೆ ದಣಿವು ಸೂರ್ಯನಿಗಲ್ತೆ? ಸುಖದ ಹೋಳಿ ಗೋಪಿಕೆಯ ಪಾದಗಳು ಪುಡಿಯಾಯ್ತು ಕುಣಿದಾಡಿ ನರುಗೆಂಪು ಧೂಳಿನಲಿ ಬಾನು ತಲುಪಿ ಬೆಟ್ಟದೂರದ ಹಿಂದೆ ಕೆಂಪು ಕಪ್ಪೇರುತಿದೆ ಕಿವಿಯ ಓಲೆಯ ಸುತ್ತ ಹೆರಳು ಸಿಲುಕಿ ನಡೆ ಶ್ಯಾಮ ನುಡಿ ಶ್ಯಾಮ ಕುಣಿಯುತ್ತ ಓಲಾಡು ಬೆನ್ನುಗೀರುತ ಬಹಳು ರಾಧಾ ಸಖಿ! ಗೋವುಗಳ ದಾರಿಯಲಿ ಓಡುವುದು ಬಲುಕಷ್ಟ ನಿಂತುಬಿಟ್ಟರೆ ಶ್ಯಾಮ! ಅವಳೇ ಸುಖಿ ಕತ್ತಲೆನ್ನುವ ಮಾರ ತಬ್ಬಿಕೊಂಡನು ಇಳೆಯ ಕುಣಿತ ತಗ್ಗಿತು ಜಗದಿ; ಇರುಳಾಯಿತು ಮನೆಯ ಸೇರುವ ಸಮಯ, ದೀಪ ಬೆಳಗುತ್ತಲಿದೆ ಒಂದು ಸಂಜೆಯ ಕಾವ್ಯ ಕೊನೆಯಾಯಿತು.Wednesday, February 11, 2015

ಇನ್ಯಾವಳೂ ಅವಳಲ್ಲ.

ಮೆಲ್ಲ ನಕ್ಕಳು ಸಂಜೆ; ಕಾಲ್ದಾರಿಯಂಚಿನಲಿ
ನೋಡಿದಳೆ? ಕೆಣಕಿದಳೆ? ನನ್ನ ಹೀಗೆ
ಯಾವುದೋ ಧ್ಯಾನದಲಿ ಕಣ್ಣುಗಳು ಜೊತೆ ಸೇರಿ
ಅವಳ ಹೆಜ್ಜೆಯ ಹಿಡಿದು ಬೆಸೆವ ಬೇಗೆ.

ಇದುವರೆಗೆ ನಿಶ್ಚಲವು ಕೆಂಪು ಹೂವಿನ ಮರವು
ಅವಳ ನಗು ಕಂಡೊಡನೆ ಹೂವು ಚೆಲ್ಲಿ;
ಗಂಟಲೊಣಗಿದ ಹಕ್ಕಿ ಸುಮ್ಮನುಳಿಯುವುದೇನು
ನನ್ನ ಭ್ರಮೆಯೊಂದಿಗೇ ಹಾಡಿತಲ್ಲಿ.

ಹೂವ ಮಾರುವ ಅಜ್ಜಿ ಯಾವುದೋ ನೆನಪಿನಲಿ
ಕೊಡುವ ಮಲ್ಲಿಗೆಗೇನು ಗಂಧವಿರದೆ?
ಅವಳ ನಗುವಿನ ಹಿಂದೆ ನಾನು ಇರದಿರೆ ಸೋಲೆ?
ಪ್ರೀತಿ ನಗುವಲಿ ಬದುಕಿ ಬಾಳದಿಹುದೆ?

ಬಾಗಿಲನು ಅರೆತೆರೆದು ಮುಡಿಯ ಬೈತಲೆ ತೆಗೆದು
ನನ್ನವಳು ನನಗಾಗಿ ಕಾಯುತಿಹಳು.
ಮಲ್ಲಿಗೆಯ ಜೊತೆಯಿರುವ ತುಳಸಿ ಹೂ ನಗುತಲಿದೆ
ಅವಳ ಕನಸಲಿ ಹೀಗೆ ಬೆಳಕಿನಿರುಳು.

Sunday, February 8, 2015

ಪ್ರೇಮಪತ್ರ ಸಿಕ್ಕು!

ಕಾಲುದಾರಿಯ ನಾನು ಮರೆತು ಹೋಗುವನಲ್ಲ
ದಾರಿಯುದ್ಧಕು ನೋಡಿ ನಡೆಯುವವನು
ನಿನ್ನೆ ನಡೆಯುತಲಿರಲು ದಾರಿಯಲಿ ಕಂಡೆನಾ
ಮುದುಡಿದ್ದ ಕಾಗದದಿ ಪ್ರೀತಿಯನ್ನು

ಒಲವು ತುಂಬಿದ ಶಾಯಿ ಕುಶಲವನು ಕೇಳಿತ್ತು
ಕಳಕಳಿಯ ಕಾಳಜಿಯ ಗೇಯವಿತ್ತು
ಅವನದೊ ಅವಳದೋ ಎನುವ ಮಾತುಗಳಿರದೆ
ಎರಡು ಎದೆಗಳ ಮಾತು ಕನಸುತಿತ್ತು

ಅವನು ಅವಳಿಗೆ ಕೊಟ್ಟ ಅವಳು ಅವನಿಗೆ ಕೊಟ್ಟ
ಮಾತುಗಳ ಮುತ್ತುಗಳ ವಿವರದೊಳಗೆ
ಸಂಜೆಯಾಗಲು ಬರುವೆ ರಾತ್ರಿ ಕನಸಲಿ ಕರೆವೆ
ಪ್ರೇಮಸೌಭಾಗ್ಯವದು ಕಹಿಯೆ ಕೊನೆಗೆ?

ಪ್ರೀತಿ ಮುದುಡಿತು ಎಂದು ನಿಟ್ಟುಸಿರು ಬಿಡಲಾಗಿ
ನನ್ನವಳು ಕಂಡಳದೊ ದೂರದಲ್ಲಿ
ಹೆಸರು ಹೇಳದ ಪತ್ರ ಒಲವಿಗಾಗಿಯೆ ಮುಡಿಪು
ಕೊಟ್ಟೆನವಳಿಗೆ ನನ್ನ ಪ್ರೀತಿಯಲ್ಲಿ.

ಕಾಣೆಯಾಗಿದೆ : ಬಾಲ್ಯದ ಚಿತ್ರ.

ನನ್ನ ಬಾಲ್ಯದ ಚಿತ್ರ ಕಾಣೆಯಾಗಿದೆ
ಹುಡುಕಿಕೊಟ್ಟವರಿಗುಂಟು
ಪೆಪ್ಪರಮೆಂಟು.

ಮೀಸೆಯಿಲ್ಲದ ಮುಖವು,
ಬಿಳಿಯಿರದ ತಲೆಕಸವು
ಮೇದು ಕಪ್ಪಾಗಿರುವ ಹಲ್ಲುಕುಳಿಯು
ಜೇಬು ಹರಿದಿಹ ಚಡ್ಡಿ
ಅದಲು ಬದಲಿನ ಗುಂಡಿ
ಕಡ್ಡಿಮೀರಿದ ಹೊದಿಕೆ ಇರುವ ಕೊಡೆಯು

ಕವಚ ಕಳೆದಿಹ ಬಾಲು
ಬುಡವು ಸವೆದಿಹ ಬ್ಯಾಟು
ಜಾರುವುದಕೇ ಇರುವ ಪಾದರಕ್ಷೆ
ಓದದಿದ್ದರು ಬರೆವ
ಬರೆಯದಿದ್ದರು ಬೆಳೆವ
ಆ ಕತೆಯ ಈ ಕತೆಯ ಪಾಠ ಶಿಕ್ಷೆ!

ಬೇಸಿಗೆಯ ಆಟದಲಿ
ಗೇರು,ಮಾವನ ಹೊಸಕಿ
ತೆಂಗು ಕಂಗಿನ ಮರಕೆ ಹತ್ತಿ ಹಾರಿ;
ಯಾವುದೋ ಕಾಲಕ್ಕೆ
ಮರೆತು ಇಟ್ಟಿಹೆನೆಲ್ಲೋ
ನನ್ನ ಬಾಲ್ಯದ ಚಿತ್ರ ಹುಡುಕಿ ಕೊಡಿರಿ.

ಹೇಳಲೇನೇ ಸಖಿಯೇ..

ಹೇಳಲೇನೇ ಸಖಿಯೇ ಒಲವನು
ಹೇಳಲೇನೇ ಸಖಿಯೇ,

ಏನು ಹೇಳುವೆನೆಂದು ಕಾತರಗೊಂಡಿಲ್ಲ
ಹೇಳು ಎನುತ ನನ್ನ ಕಾಡುವುದಿಲ್ಲ
ಆತುರದಿಂದಲಿ ಹೇಳುವಾಸೆಗೆ ಬಂದೆ
ಕೇಳುವ ಕಿವಿಗಳು ಹತ್ತಿರ ಬಂದಿಲ್ಲ.

ಕೇಳುವಾಸೆಗೆ ನೀನು ಕಿವಿಯ ಹತ್ತಿರ ತರಲು
ನಿನ್ನೆಯ ತೆರದಂತೆ ಕಚ್ಚುವುದಿಲ್ಲ;
ಯಾರದೋ ಕತೆಹೇಳಿ ಯಾವುದೋ ಗೋಳುಗಳ
ಮುನಿಸು ಮಾತುಗಳಿಂದ ಚುಚ್ಚುವುದಿಲ್ಲ

ಎಷ್ಟಾದರೂ ದೂರ ಇರಬಾರದು ನೀನು
ಪಿಸುಮಾತು ಬಲುದೂರ ತಲುಪುವುದೇ?
ಹೇಳಲೇನೇ ನಿನಗೆ ಎನುವ ಮಾತುಗಳಲ್ಲಿ
ನನ್ನ ಪ್ರೀತಿಯ ಮಾತು ಕಾಣಿಸದೇ?

ಕನಸಿನ ಲೋಕ.

ಸಂಜೆಯಲಿ ಕಂಡು ಮಾತಿಂಗೆ ಸಿಕ್ಕಿ ಒಲವಾಯ್ತು ಎಂದುಕೊಂಡೆ
ಮರುದಿನದ ಬೆಳಗು ಕಾದಿತ್ತು ಬಿಸಿಲು ಮುದುಡಿತ್ತು ಮಲ್ಲೆದಂಡೆ
ಕಣ್ಣೀರ ಹನಿಯು ಉದುರಿತ್ತು ಹೀಗೆ ಮಾಡಿತ್ತು ಕೊಳವನೊಂದು
ಆ ಕೊಳದ ತುಂಬ ಕರಿಬಿಳಿಯ ಹಂಸ; ನನಗದುವೆ ಆತ್ಮಬಂಧು.

ರಾತ್ರಿಯಲಿ ಹೀಗೆ ಹುಣ್ಣಿಮೆಯ ಕೂಡೆ ಹಂಸಗಳು ಮಾತನಾಡಿ
ನನ ಕಣ್ಣ ಎವೆಗಳನು ಮುಚ್ಚಲೆಳೆಸುವುದು ಹಗಲ ಚಿಂತೆದೂಡಿ
ಬಂದೀತು ಬರವು ಕಾದಿರಿಸು ನೀರ, ಎಂದಾವು ಕಿವಿಯ ಬಳಿಯು
ಆ ಅವಳ ನಲಿವು ನನ್ನೊಲವ ನೋವ ಗಾಯಕ್ಕೆ ಬಿದ್ದ ಬರೆಯು!

ಅಲೆಯಲ್ಲಿ ತೇಲಿ ಬರುವಂತ ಕಸವ ತುತ್ತೆನುವ ಆಸೆಯಲ್ಲಿ
ಕಚ್ಚಿದರೆ ಹೀಗೆ ಒಸಡುಗಳ ಬೇನೆ, ಊಟಕ್ಕೆ ದಾರಿಯೆಲ್ಲಿ?
ಬಾತುಗಳ ಮಾತು ಕಣ್ಣಾಚೆ ಬಂದು ನಗುವಾಯ್ತು ನನ್ನ ತುಟಿಗೆ
ಹಾಡಾಗಿ ಬಂತು ಕೊನೆ ಮುಗಿಯದಂತ ಜೇನಾಯ್ತು ಒಲವು ಹೀಗೆ

ಬೆಳಗಿನಲಿ ಎದ್ದು ನೋಡಿದರೆ ನಾನು ಕಣ್ಣಲ್ಲಿ ಕೊಳವು ಮಾಯ
ಸಾಲಾಗಿ ನಡೆವ ಹಂಸಗಳ ಕಂಡು ಮೂಡಿತ್ತು ಒಂದುಪಾಯ
ವಿರಹಿಗಳನು ಹೆರುವಂತ ಜಗಕೆ ಅವುಗಳನು ಕಳಿಸಬೇಕು
ಎದೆಯೊಳಗೆ ಉಳಿವ ನೆನಪನ್ನು ಮರೆಸಿ,ಹಂಸಗಳು ನಲಿಯಬೇಕು.

ಸಾವಿನ ದಿನ; ಆ ನಾಲ್ಕು ಜನ

ನಾಲ್ಕು ಜನರಿಗೆ ಹೀಗೆ ಕಾಯಿಲೆಯು ಬಂತು

ಮುಂದೆ ಇದ್ದವನೊಬ್ಬ ಹಳೆಪಾತ್ರೆ ವ್ಯಾಪಾರಿ
ನನ್ನ ಬಳಿಯಲ್ಲಿಷ್ಟು ಸಾಲಮಾಡಿ
ಕೊನೆಗೊಂದು ದಿನಬಂದು ನಷ್ಟವಾದುದ ಹೇಳಿ
ಜೊತೆಯಾದ ಬದುಕಲ್ಲಿ ಪುಷ್ಟವಾಗಿ

ಎಡಬದಿಯ ಸಣಕಲನು ನನ್ನ ಓರಗೆಯವನು
ಎದುರಬೆಂಚಿನ ಹುಡುಗ, ಒಳ್ಳೆಯವನು
ಸಣ್ಣಬೆನ್ನಿನ ಗೆಳೆಯ ಕಂಪೆನಿಗೆ ಬೆನ್ನೆಲುಬು
ಖಾರವಿಲ್ಲದ ಊಟ ಸವಿಯುವವನು

ಹಿಂದೆ ಬಂದವನೊಬ್ಬ ನನ್ನ ಆಸರೆಯಲ್ಲಿ
ನನಗಾಗಿ ನನ್ನಿಂದ ಬೆಳೆದ ಹುಡುಗ
ಯಾವುದೋ ಊರಿಂದ ಬಂದ ಒಳ್ಳೆಯ ಅಕ್ಕಿ
ನನ್ನ ಬಿಸಿನೀರಿನಲಿ ಬೆಂದ ಅನ್ನ.

ಅವನ ಜೊತೆ ನಡೆಯುವವ ನನ್ನ ಅಣಕಿಸುವಾತ
ಅವನ ತೊಗಲಿಗೆ ಸರಿಯೆ ನನ್ನ ಚರ್ಮ?
ನಾನಡೆವ ದಾರಿಯಲಿ ಬಹಳ ತಡವಾಗಿರುವ
ಅವನ ದಾರಿಯ ಕಾವುದೆಂತ ಖರ್ಮ

ಇಂತ ನಾಲ್ವರ ಜೊತೆಗೆ ನಾನು ಹೋಗುವ ಕನಸು
ಬಲುಸಮಯದಿಂದೀಚೆ ಎದೆಯೊಳಿತ್ತು
ನಾನು ಹೋಗುವ ದಾರಿ, ನಡೆಯುವರ ಕೈಕಾಲು
ನಾನಿರುವ ತನಕವೂ ಗಟ್ಟಿಯಿತ್ತು.

ನಾಲ್ಕು ಜನರಿಗೆ ಹೀಗೆ ಕಾಯಿಲೆಯು ಬಂತು
ನಾನು ಉಳಿದಿದ್ದೇನೆ ಹೀಗೆ ಸತ್ತು!

ಕನಸು.

ನಡೆವ ದಾರಿಯ ಬದಿಗೆ ಇರುವಂತ ಕೊನೆಯ ಮನೆ
ಕೊನೆಯೆಂದರೇನೆಂದು ಹೇಳಲಿಲ್ಲ
ಕೊನೆಯೆನುವ ಮಾತಿನಲಿ ಒಂದಷ್ಟು ಮರುಗಿದೆನು
ದಾರಿ ನಡೆಯುವುದೆಂತು ತಿಳಿಯಲಿಲ್ಲ.

ಇಲ್ಲೊಂದು ಹೊಸಹೂವು ಹುಟ್ಟಿಹುದು, ಕೊಯ್ಯಲೇ
ಘಮವಿಹುದೆ ಮೂಸಲೇ? ಬಿಟ್ಟು ಬಿಡಲೆ?
ನಿನ್ನೆ ಮೂಡಿದ ಬೀಜ ಇನ್ನೊಂದು ದಿನದಲ್ಲಿ
ಮೊಳಕೆಯೊಡೆಯುವುದೆಂದು ಹೆಮ್ಮೆ ಪಡಲೆ?

ದಾರಿಬದಿಯಲಿ ಹುಣಸೆ ಬೀಜ ಮರವಾಗಿಹುದು
ಮತ್ತೊಂದು ಕೊಂಬೆಯಲಿ ಬಂದಣಿಕೆಯು
ತೇಗಿ ತೇಲುವ ತೊಗಟೆ ನಾಳೆ ಮಣ್ಣಾಗುವುದು
ಎಂಬ ಕವಿಮಾತಿಗೆ ಪೊಳ್ಳುಕಿವಿಯು.

ಬಂತು ಸವಾರಿಯಿದು, ಯಾರ ಹರಕೆಗೆ ಬಲಿಯು
ಎಂದೆಲ್ಲ ದನಿಗಳದೊ ಕೇಳುತಿಹುದು
ಮನೆಗೆ ಹೋಗಲೆ ನಾನು? ಬಾಗಿಲನು ಬಡಿಯಲೇ
ಯಾರು ತೆಗೆಯುವರೆಂಬ ಶಂಕೆ ಇಹುದು

ಯಾರು ತೆಗೆದರೆ ಏನು ಕೊನೆಯ ಮನೆಯೇ ತಾನೆ?
ಕುಣಿವ ಹುಡುಗಿಯು ಇಹಳು ಎನುವ ಮನಸು
ನಡೆವ ದಾರಿಯ ಬದಿಗೆ ಇರುವಂತ ಕೊನೆಯ ಮನೆ
ಮುಂದೆ ಹುಟ್ಟುವ ಮನೆಯು; ಅಂತು ಕನಸು.

ಒಂದು ಪ್ರೇಮ ಕತೆ

ಅಂಗಡಿಯ ಮಾಲಿಕನು ದೊಡ್ಡ ಮೂಗಿನ ಸಿಡುಕ
ಕೋಪಬಂದರೆ ಅವನು ಸಿಂಗಳೀಕ;
ಅವನ ಜೊತೆಗಿರುವವನು ಹದಿನೆಂಟು ಹರೆಯದವ
ಮೀಸೆ ಬೆಳೆಯುವ ಹುಡುಗ, ಅಂಜುಬುರುಕ.

ಮಾಲಿಕನ ಮಗಳವಳು ಶಾಲೆ ಮೆಟ್ಟಿಲು ತಪ್ಪಿ
ಮನೆಯ ಒಳಗೇ ಟೀವಿ ನೋಡುವವಳು
ಅಂಗಡಿಯ ಕೀಲಿಕೈ ಕೊಡುವ ದಿನಚರಿಯಲ್ಲಿ
ಮೀಸೆಯೊಳಗಿನ ನಗುವ ಕಾಣುವವಳು

ಒಮ್ಮೊಮ್ಮೆ ಅಂಗಡಿಯ ದಿನಸಿ ರಾಶಿಯ ನಡುವೆ
ಅವಳ ನೆನೆಯುತ ಹುಡುಗ ಕುಳಿತಿರುವನು
ಮೆಣಸು ಕೇಳಿದ ಜನಕೆ ಸಕ್ಕರೆಯ ಕಟ್ಟುವನು
ಮಾಲಿಕನ ಬೈಗುಳಕೆ ಸೋಲುವವನು.

ಯಾವುದೋ ಕಾಲದಲಿ ಮಾಲಿಕನ ತೋಟದಲಿ
ಹೊಸತು ಮಲ್ಲಿಗೆ ಬಳ್ಳಿ ಹೂ ಬಿಟ್ಟಿತು
ಅದನು ನೋಡುತ ನಿಂತ ಹುಡುಗನಾ ಮನದಲ್ಲಿ
ಮಲ್ಲಿಗೆಯ ಗಂಧವೂ ಒಲಿದು ಬಂತು.

ಎಲ್ಲ ಕತೆಗಳ ಹಾಗೆ ಕಲಹವಾಯಿತು ಎನುವ
ನಿಮ್ಮ ತೀರ್ಮಾನಗಳ ಪಕ್ಕಕಿಡಿರಿ
ಮಾಲಿಕನ ಮಗಳನ್ನು ಮದುವೆಯಾದನು ಹುಡುಗ
ಹೊಸ ವಧೂವರರನ್ನು ಹರಸಿಬಿಡಿರಿ.

ಕಾವು!

ಒಂದೆರಡು ದಿನವಿದ್ದು ಹೋಗಬಾರದು ಏಕೆ
ಮೊನ್ನೆಯೋ ಮಳೆಗಾಲ;ಬಹಳ ನೀರು
ಬೆಂಬಿಡದೆ ಕಾಡುತಿದೆ ಇಂದು ವಿರಹದ ಬೇಗೆ
ನೀಡಬಾರದೆ ಚೂರು ಒಲವ ಹಸಿರು.

ಸುಳಿವುದದು ಬಿರುಗಾಳಿ ಮೈಗೆ ಕಿಚ್ಚನು ಹಚ್ಚಿ
ಬೆಂಕಿಯಾಡುವ ಮನವು ಹುಚ್ಚಾಗಿದೆ
ತೆಗಳುವುದು ಸರಿಯೇನು? ಈ ಬಿಸಿಯ ಗಾಳಿಯನು
ನಿನ್ನೊಲವ ಕಾಯುವುದು ಹೆಚ್ಚಾಗಿದೆ.

ಯಾವುದೋ ಧಾಟಿಯಲಿ ಯಾವುದೋ ರಾಗದಲಿ
ಹಾಡುವಾತನ ಕೊರಳು ದಣಿದುಹೋಗಿ
ನಿನ್ನ ಪ್ರೀತಿಯ ಸ್ವಲ್ಪ ಪಡೆದು ಬಾ ಎನುತಲಿದೆ
ಬರೆವ ಪದಗಳ ಸಾಲು ಮರವೆಯಾಗಿ

ನಾಳೆದಿನ ಮಧ್ಯಾಹ್ನ ಕೆಂಪುಹೂಗಳ ಬನದಿ
ನಿನ್ನ ಕರೆಯಲು ಬರುವೆ, ನೀನು ಬರುವೆ
ಎಂದೆನುವ ಮಾತಿನಲಿ ಇಷ್ಟು ದಿನ ಕಾದಿರುವೆ
ಇನ್ನೆರಡು ದಿನವೇನು? ಕಾಯುತಿರುವೆ.

Saturday, February 7, 2015

ಹೂವು-ಹುಡುಗಿ

ಮೇಲು ಮಹಡಿಯವರೆಗೆ ಹಬ್ಬಿ ನಿಂತಿದೆ ಜಾಜಿ
ಹೂವ ನೋಡುವುದೇನು, ಎಂಥ ಸೊಗಸು
ಕೆಳಗೆಳೆದು ಬಳ್ಳಿಯನು ಹೂವ ಬಿಡಿಸುವ ಅವಳು
ಜಾಜಿಮಲ್ಲಿಗೆಗಿಂತ ಸೂಜಿ ಬಿರುಸು.

ನೆರೆಮನೆಯ ಕಣ್ಣುಗಳ ಜೊತೆಗೆ ಸೇರವು ಕಣ್ಣು
ಹಾದಿಯಲಿ ನಾ ಬರಲು ಒಂದು ನೋಟ;
ಅಮ್ಮನೆಲ್ಲಿಹಳೆಂದು ಖಾತ್ರಿಪಡಿಸುವ ಕೂಗು
ಹೂವುಗಳು ಮಿತಿಯೆನುವ ಮೋಸದಾಟ

ಗುನುಗುವಳು, ಒಂದೆರಡು ಸಾಲಿನಲಿ ನಿಲಿಸುವಳು
ಹೊಸತೊಂದು ಹಾಡನ್ನು ಹೊಸೆಯುವವಳು
ಯಾರಾದರೂ ಅವಳ ಕರೆಯೆ ಬೇಸರಪಟ್ಟು
ಮುನಿಸಿನಲಿ ಬಂದವರ ಬಯ್ಯುವವಳು

ಮೊನ್ನೆ ಹೀಗೆಯೆ ಸಂಜೆ ಅವಳ ಮನೆ ಬಾಗಿಲಿಗೆ
ಯಾವುದೋ ಧ್ಯಾನದಲಿ ಹೋದೆ ನಾನು;
ಅವಳು ಸೀರೆಯನುಟ್ಟು ತಂದು ಕೊಟ್ಟಳು ಕಾಫಿ
ಯಾರಿಗೋ ತಂದಿಟ್ಟ ಸಿಹಿಗಳನ್ನು

ಜಾಜಿಹೂವಿದೆ ಇಂದು ಕೊಯ್ಯುವರು ಇಲ್ಲಿಲ್ಲ
ದಾರಿಯೂ ಎಂದಿನದೆ, ಕಲ್ಲು ಮುಳ್ಳು
ನೆರೆಮನೆಯ ಜನಕೆಲ್ಲ ಮದುವೆಯಾಗಿದೆಯೇನೊ
ಬೇಸರದಿ ಬಾಗುತಿದೆ ಜಾಜಿಗೆಲ್ಲು.

ಸಂಜೆಯ ಪ್ರೀತಿ.

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ
ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ.

ನಾಕ-ನರಕ

ಸ್ವರ್ಗಲೋಕದ ಸಂಜೆ ಕೈಯ್ಯಲ್ಲಿ ಮಧುಪಾತ್ರೆ
ನಾನೊಬ್ಬ ನರಕದವ, ದಣಿದು ಬಂದೆ.
ಹಾಡುತಿಹ ನಲಿಯುತಿಹ ಬೆಡಗ ಬೆಡಗಿಯರೊಡನೆ
ಒಂದು ಕ್ಷಣವಾದರೂ ಸುಖಿಸಲೆಂದೆ.

ನಡೆಯಬೇಕಿದೆ ಮುಂದೆ, ಅಲುಗಲಾರದು ಕಾಲು
ನನ್ನ ಹಿಡಿದಿಟ್ಟವರು ಯಾರು? ನೀನೇ?
ಕೈಯ್ಯ ಮಧುಪಾತ್ರೆಯೂ ತಲುಪಲಾರದು ಬಾಯ
ನನ್ನ ತುಟಿ ನನ್ನ ರುಚಿ ನನ್ನ ಬೇನೆ.

ಬಾಗಿಲನು ತೆರೆದರೂ ಮುಚ್ಚಿ ಮನಸಿನ ಕಿಟಕಿ
ತೊಲಗು ನೀನೆಂಬಂತೆ ನೋಡುವವರು!
ಸ್ವರ್ಗಲೋಕದ ಸಂಜೆ ಸ್ವರ್ಗಜನಕೇ ಇರಲಿ
ನರಕದವ ನಾನಂತು, ಕೆಡುವ ಜನರು.

ನಾಕದೇವರ ಮುಂದೆ ನರಕದಾಳಿಗೆ ಭ್ರಮೆಯು
ಚಾಚಬೇಕೋ ನಾಲ್ಗೆ, ಹಸಿದೊಡಲಿಗೆ
ಮುಷ್ಟಿಯನ್ನವನಿಕ್ಕಿ ಹೊಲಿದು ಬಿಡುವನು ಆಸೆ
ದೇವನೊಲುಮೆಯೆ ತಾನೆ ಕೊನೆಯು ನಮಗೆ