Tuesday, July 26, 2011

ಸನ್ಯಾಸಿ ಹರಿವೆ


ನಾನು ಚಿಕ್ಕವನಿದ್ದೆ
ಅಜ್ಜ ಹರಿವೆ ನೆಟ್ಟರು..
ನನಗಂತೂ ಹರಿವೆ ಇಷ್ಟ,
ಬೆಳೆಯುವುದನ್ನೆ ಕಾದೆ.

ಚಿಗುರೆಲೆ ಬಂತು,
ನೀರೆರೆದೆ, ಗೊಬ್ಬರದ ಮೇಲೆಯೇ
ಅಬ್ಬರದ ಬದುಕು
ಅಬ್ಬಾ ಬೆಳವಣಿಗೆ !

ಇನ್ನೂ ಆರೈಕೆ
ಕಳೆಗಳ ತೆಗೆದೆ
ಮತ್ತೆ ಹರಿವೆಯ ರುಚಿ ನೆನೆದು
ಮತ್ತೆ ನೀರೆರೆದೆ.

ಕಾದೆ, ಕೇಳಿದೆ
ಹರಿವೆ ಬೆಳೆದಂತೆ
ಯಾವತ್ತು ಹರಿವೆ ಅಡುಗೆ
ಕಾದಿತ್ತು ಬಾಯಿ ರುಚಿಗೆ !

ಅಜ್ಜ ಕೊಯ್ಯಲೆ ಇಲ್ಲ
ಮತ್ತೆ ಗದರಿದರೆನಗೆ
ಇದು ಸಾಂಬಾರಿಗೂ ಅಲ್ಲ, ಪಲ್ಯಕ್ಕೂ ಅಲ್ಲ
ಮುಂದಿನ ವರುಷದ ಬಿತ್ತನೆಗೆ ಮಗನೆ !

ಹರಿವೆ ಬೀಜ ತೆಗೆದಿಟ್ಟರು
ಅಜ್ಜ ರುಚಿ ನೋಡದೇ ಸತ್ತರು
ಸನ್ಯಾಸಿಯಂತೆ,
ಒಳ್ಳೆಯ ಬೀಜ , ಬಿತ್ತುವ ಹಾಗಿಲ್ಲ ಈಗ !

೨೬.೦೭.೨೦೧೧- ಮಂಗಳವಾರ

ನಿರೀಕ್ಷೆ ..


ನೀರಾಟಕಿಳಿದೆ ನಾ ನೀರೆಯರಾ ಸೊಬಗಿನ
ದಾರಿ ನೀ ತೋರಿದೆಯ ಮಾರ್ಮಲೆವ ಮಡುವಿನೊಳು
ಹೆಸರಾಟ ಬರಿ ಕೆಸರ ಪಾಚಿಗಟ್ಟಿದ ಬಣ್ಣ
ಉಸಿರ ಬದುಕಿಸೊ ಆಟ ಅವಳಿಗೋ ಅವನಿಗೋ
ಮಸಳುವುದು ಒಳಹೊರಗೆ ನಿತ್ಯ ನೂತನ ಎಂಬ ಹಳೆಯ ಸರಕು !

ಆ ನೀರು ನೀಲಿಯದಂತೆ, ಬಾನು ನೀಲಿಯದಂತೆ
ಅಣಕಿಸುವ ಕಣ್ಣಾಲಿ ! ಎಲ್ಲ ಕಪ್ಪಿನ ಮೇಲ್ಮೆ
ಒಳಗೆ ಎದೆ ಬೆಳ್ಳಿಯದು , ಕಟ್ಟು ಚಿನ್ನದ್ದಂತೆ
ತೊಳೆದು ಹೋಗುವುದಿಲ್ಲ, ತಳೆದರದು ಕರಗದು
ಸುಳಿವು ಮರಣದ ಕಪ್ಪು, ಜನನ ಬಿಳುಪೇ ?

೧೧.೦೭.೨೦೧೧



Saturday, July 9, 2011

ನೀರಾ(ರೆ)ಟ ..

ನಾನು ನೀರಿಗಿಳಿದರೆ ಸರಿಯಾಗಿ ಈಜಾಡಬೇಕು
ಪಿಚಕ್ಕನೆ ಚಿಮ್ಮುವ ಕೆಸರ ಹರಿಸುವ ನೀರಲ್ಲ
ಸೊಂಟದ ವರೆಗೆ ಬಂದು ಹಣಕಿಸುವ ನೀರೂ ಅಲ್ಲ
ನಾಭಿಯ ಮೇಲಿಂದ ಸುಳಿ ಹಾರುವ
ಅಂಗಾತ ಮಲಗಿ ನೀಲ ಬಾನು ತೆರೆವ
ತೆರದಲಿ, ಕಂಠದ ವರೆಗೂ ಇರಲಿ
ನಾನೂ ಈಜಬಲ್ಲೆ ಎನ್ನುವ ಅಭಿಮಾನ ಉಕ್ಕಿಸಿ
ಏನನ್ನೋ ದಕ್ಕಿಸುವ ನೀರು ಬೇಕು
ಮತ್ತೆ,
ನಾನೆ ನೀರನು ಎರೆದು ಆಟ ಆಡುವುದಲ್ಲ
ಆ ನೀರ ನೀರೆಯೊಳು ನಾ ಮುಳುಗಬೇಕು.

07.07.2011

Wednesday, July 6, 2011

ಹೀಗೆ ಇನ್ನೂ ಕೆಲವು ಲೈನ್ಸ್...


ಅಮ್ಮ ಜಾಸ್ತಿ ಇದ್ದ ಮಜ್ಜಿಗೆಯನ್ನು ಚೆಲ್ಲಿದರು
ಬೆಳಗ್ಗೆ ಕಾಣಲೆ ಇಲ್ಲ!
ರಾತ್ರಿ ಚಂದ್ರನ ಆಗಸದಲ್ಲಿ ನೋಡಿದಾಗ ಮಜ್ಜಿಗೆ ಹರಡಿದಂತೆ.

ಲತೆಯಂತೆ ಬಳುಕಿದಳು
ಮರವಾಗ ಬಯಸಿದಳು! ಯಾರವರು?
ಕೇಳ್ದಾಗ ಪೇಳಿದೆ, ಜಯಲಲಿತಾ!!

ರೇತಸ್ಸು ಪದದ ಅರ್ಥ ಕೇಳಿದ!
ಗೊತ್ತಿರಲಿಲ್ಲ ಅವಗೆ, ಅವನೀಗ ಅದೇ ಪದಾರ್ಥದಿಂದ
ಎಂಟು ಮಕ್ಕಳ ತಂದೆ !!

೨೮.೦೬.೨೦೧೧