Friday, October 28, 2011

ಸೌಗಂಧಿಕಾ ಪ್ರಸಂಗ .!


ಬಿರಿದ ಕಣ್ಣು ಸೆಳೆವ ಮೋಹದೂಟ!
ಬೆಚ್ಚಿಬಿದ್ದಳಾಕೆ ಭೀಮನ ನೋಟಕೆ
ಕದಿಯುವಾಸೆ ಅವನ ಸಂಗ
ಸೋತು ಗೆಲ್ಲಬಲ್ಲ ನಲ್ಲನವನು !

ಸೌಗಂಧಿಕಾ ! ಕಲ್ಪನೆಯೇ ? ಅಲ್ಲ
ಗಾಳಿಗೆಲ್ಲೋ ಹಾರಿ ಬಂದ ಹೂವು ಅದು
ಬಿಳಿ ಹಳದಿ ಗುಲಾಬಿ ಬಣ್ಣ
ಸೆಳೆದುದೇಕೆ ಕಣ್ಣ ಬಣ್ಣ ?

ನೋಡಿದೊಡನೆ ಸುಮದ ಚಂದ
ಒಡಲೊಳ್ ಹರಿದ ಪ್ರೇಮಗಂಧ
ಒಡನೆ ಬಳಿಗೆ ಬಂದ ಭೀಮ
ಸುಡುವ ಸತಿಯ ಬಯಕೆ ಏನು?

ಹೌದು ಭೀಮ ಹುಡುಕಿ ತಾ
ದುಶ್ಶಾಸನ ಹಿಡಿದೆಳೆದಿಹ
ಹೆರಳನೆಲ್ಲ ಮತ್ತೆ ಹೆಣೆದು
ಅಂಥ ಹೂವ ಮುಡಿಸಬೇಕು

ನಗುವ ಮಡದಿಗಿಂದು ಹೂವ
ಬಿಗಿದು ಅಪ್ಪಿ ಮುಡಿಸುವಾಸೆ ಅವಗೆ !
ಜಗದ ಚೆಲುವೆಯವಳು
ಮುಗುದ ಭೀಮ ಸೇನ ಇವನು !

ಗಂಧಮಾದನ ಪರ್ವತವೋ
ಸುಂದರಾಂಗಿಯರ ಕೊಳವೋ
ಬೆಂದು ಬೇಯುತಿದ್ದ ಭೀಮನೆದೆಗೆ
ಮುಂದೆ ಒಂದು ಸರೋವರ !

ದೂರದಿಂದ ಭೀಮ ಕಂಡ
ಮಾರ ಎಸೆದ ಹೂವ ಬಾಣ
ಕರುಬುತಿತ್ತು ಯಕ್ಷ ಬಳಗ
ಸಿರಿಯೇನ್ ದ್ರೌಪದಿಯದು ?

ತಲೆಯ ತುರುಬುಗಟ್ಟಿ ಹೂವ ಮುಡಿಸುವ
ಕಲೆಯ ಎಲ್ಲಿ ಕಲಿತ ಕಲಿಭೀಮ ?        
ಒಲ್ಲೆ ಎಂದಳೇನೆ ಅವಳು
ಸುಳ್ಳೆ ಮುನಿದಳು !

ಹೂವ ನೆಪದಿ ಭೀಮನ  ತೆಕ್ಕೆಯೊಳು ಬಂಧಿ
ನೋವಿತ್ತೆ ಮೊದಲು ! ಈಗಿಲ್ಲ ಮನದಿ !

೨೮-೧೦-೨೦೧೧

11 comments:

Badarinath Palavalli said...

ಭಟ್ಟರೇ ಹೂರಣಕ್ಕೆ ತಕ್ಕ ಸ್ವಲ್ಪ ಹಳೆಗನ್ನಡಕ್ಕೆ ಒಪ್ಪುವ ಶೈಲಿ.

ಭೀಮ ದ್ರೌಪದಿ ನಡುವೆ ಪ್ರಣಯೋತ್ಸವಕ್ಕೆ, ಸೌಗಂಧಿಕಾ ಪುಷ್ಪವು ಪರಿಕರವಾದದ್ದನ್ನ ಸರಸವಾಗಿ ಕಾವ್ಯವಾಗಿಸಿದ್ದಿರಿ.

ತುಂಬ ಇಷ್ಟವಾಯಿತು ಸರ್.

ಅನುರಾಧ. said...

ಸೌಗಧಿಕಾ ಪುಷ್ಪ ಚಂದ ಅಂತ ಗೊತ್ತಿತ್ತಾದರೂ ಇಸ್ಟು ಚಂದ ಅನಿಸಿದ್ದು ನಿನ್ನ ಕವಿತೆಯ ಅಂದ ನೋಡಿದ ಮೇಲೆ....ನಿನ್ನ ಕವಿತೆ ಅದಕ್ಕಿಂತಾ ಅಂದವಾಗಿ ಮೂಡಿಬೈಂದು....ಸರಸ ಸಲ್ಲಾಪಗಳನ್ನೂ ಮನೋಜ್ನವಾಗಿ ಬಿಂಬಿಸಿದ್ದೆ...

Dr.D.T.Krishna Murthy. said...

ಈಶ್ವರ್ ಭಟ್;ಚೆಂದದ ಕವನ.ಅಂದದ ಶೈಲಿ.ಕವನ ಇಷ್ಟವಾಯಿತು.

Prashanth P Khatavakar said...

ಸುಂದರ ಭಾವನೆ ಅಡಗಿದೆ.... ಹಳೆಗನ್ನಡಕ್ಕೆ ಹತ್ತಿರವಾಗುವ ಶೈಲಿ.... ಇದು ಅರ್ಥವಾಗಲು.... ಸ್ವಲ್ಪ ಕಷ್ಟ ಎನ್ನಿಸಿದರೂ.. ಎರಡು ಬಾರಿ ಓದಿದರೆ.. ರೋಮಾಂಚನ... ಮಧುರ ಭಾವನೆ... ಅತೀ ಸೊಗಸು ಕಾವ್ಯ ಕಥಾ ವರ್ಣನೆ.... :)

halemane said...

ಚೆನ್ನಾಗಿ ಬರೆಯುತ್ತೀರಿ. ಒಳ್ಳೇದಾಗಲಿ.

ಸಿಮೆಂಟು ಮರಳಿನ ಮಧ್ಯೆ said...

ಈಶ್ವರ್ ಜಿ...


VERY NICE !!

ಕವನದ ಹೊಸತನ ತುಂಬಾ ಇಷ್ಟವಾಯಿತು...

prabhamani nagaraja said...

ಸೌಗಂಧಿಕಾ ಪುಷ್ಪದ ಪ್ರಕರಣವನ್ನು ಚೆನ್ನಾಗಿ ಕವನಿಸಿದ್ದೀರಿ ಭಟ್ಟರೇ, ಅಭಿನ೦ದನೆಗಳು

ಗಿರೀಶ್.ಎಸ್ said...

ವಾಹ್ ವಾಹ್...ಭಟ್ಟರೇ ಸೂಪರ್...

ಮೌನರಾಗ... said...

ವಾವ್...ಕವನಿಸಿದ ಬಗೆ, ಬಳಸಿದ ಕತೆ ಸೂಪರ್..

Mohan V Kollegal said...

ಕಿರಣ್ ಸರ್... ನಾನು ಮೆಚ್ಚಿರುವ ಕವಿತೆಗೊಂಚಲಿಗೆ ಇದನ್ನೂ ಎಣೆದುಕೊಳ್ಳುತ್ತೇನೆ. ಸೌಗಂಧಿಕಾ ಪುಷ್ಪದ ಮೂಲಕ ಪ್ರಾರಂಭವಾಗುವ ಭೀಮ ದ್ರೌಪದಿ ಪ್ರೇಮ ಸಲ್ಲಾಪವನ್ನು ಪದಗಳ ಚೌಕಟ್ಟು ಮತ್ತು ಲಯದಲ್ಲಿ ಹಿಡಿದಿಟ್ಟಿರುವ ರೀತಿ ಬೆಳೆಯುವವರಿಗೊಂದು ಸ್ಪೂರ್ತಿ. ಹೆರಳನೆಲ್ಲ ಮತ್ತೆ ಹೆಣೆದು ಎಂದು ಹೇಳುವಾಗ ದುಶ್ಯಾಸನನ್ನು ನೆನಪಿಸಿದ ರೀತಿಯೂ ಇಷ್ಟವಾಯಿತು. ಕವಿತೆಯ ಭಾವಕ್ಕೆ ಚ್ಯುತಿ ಬರದಂತೆ ಮತ್ತೊಂದು ಭಾವವನ್ನು ಇಣುಕಿಸುವ ಕಲೆಯೂ ಸರಿ ಎಂದು ಭಾವಿಸುತ್ತೇನೆ. ವಂದನೆಗಳು.... .

ರವಿ ಮುರ್ನಾಡು said...

ಉಹೂಂ...! ಗಟ್ಟಿ ಕಲ್ಲೆಂದು ಕುಟ್ಟಿ ನೋಡಿದರೂ ಕಲ್ಲು ಅಂತ ಅನ್ನಿಸಲೇ ಇಲ್ಲ. ಅವಳು ಸುಳ್ಳೆ ಮುನಿದಳು. ಹಾಗೇ ಎತ್ತಿಟ್ಟ ಪ್ರೇಮ ಪಂಜರದಲ್ಲಿ ಅವಿತ ರಾಣಿ ಗಿಣಿ , ಭೀಮ ಗಾತ್ರದ ಕೈಗೆ ಹೂವಾಗಿದ್ದು ಸೋಜಿಗವೇ ಸರಿ.ಅಡ್ಡಾದಿಡ್ಡಿ ನಡೆಯುವ ದಾರಿ ಹೋಕ ಸರಿ ದಾರಿಗೆ ತಂದಂತಿದೆ ಈ ಕವಿತೆ. ಚೆನ್ನಾಗಿದೆ ಪ್ರೇಮ ಪ್ರಸಂಗದ ಸಂಗ ಬಯಸಿದ ಕವಿತೆ.