Saturday, October 27, 2012

ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ


ಅತ್ತಕಡೆಯಿಂದ ಬರುವಾಗ ಇನ್ನೊಮ್ಮೆ
ಇಣುಕಿ ನೋಡದೆ ಹೋಗಳೆನ್ನ ಚೆಲುವೆ
ಸುತ್ತಮುತ್ತಲು ಯಾರೂ ಇರದಂತ ವೇಳೆಯಲಿ
ಕೆಣಕು ಮಾತಲಿ ನನ್ನ ಕರೆಯದಿಹಳೆ?

ಬಾಗಿಲಿನ ಬಳಿಯಲ್ಲಿ ನಿಂದು ಬಳಿ ಕರೆದಂತೆ
ಬಳೆಯ ದನಿಯನು ಮಾಡಿ ಓಡುತಿಹಳೇ
ಅಲ್ಲೆಲ್ಲೋ ಕಾಣಿಸುತ, ಇನ್ನೆಲ್ಲೋ ಮಾಯದಲಿ
ಬಳಿಗೆ ಬಂದರೆ ಮೂಕ, ಮತ್ತೆ ಅವಳೇ!

ಹಬ್ಬದಲಿ ಜಾತ್ರೆಯಲಿ ಪೇಟೆಯಲಿ ಬೀದಿಯಲಿ
ಅವಳ ಹೆಜ್ಜೆಯ ಹುಡುಕಿ ನಡೆವೆ ಎಂದು
ಅವಳೋ ಬಲುಜಾಣೆ, ನನಗಿಂತ ಬಲುಚುರುಕು
ಗುರುತುಗಳನಿಟ್ಟಿಹಳು, ನಾ ಬರುವೆನೆಂದು!

6 comments:

sunaath said...

ಭಟ್ಟರೆ,
ನಿಮ್ಮ ಈ ಕವನವು ನಮ್ಮನ್ನು ರೋಮಾನ್ಸಿನ ಮಾಂತ್ರಿಕ ಲೋಕಕ್ಕೆ ಕರೆದೊಯ್ಯುತ್ತದೆ. ಧನ್ಯವಾದಗಳು!

Harisha - ಹರೀಶ said...

ಕಿರಣನ ಭಾವ ಗರಿಗೆದರಿ ಬಂದಾಂಗಿದ್ದು.. ಸೂಪರ್ :)

ಗಿರೀಶ್.ಎಸ್ said...

ಯಾರ್ರಿ ಅದು ನಿಮ್ಮನ್ನ ಕರೆಯುತ್ತಿರುವುದು... ಚೆನ್ನಾಗಿದೆ..

Swarna said...

ನಿಮ್ಮ ಕಣ್ಣಲ್ಲಿ ಅವಳ ಸೌಂದರ್ಯ ಲಹರಿ ಕಾಣದಿದ್ದರೆ ಹೇಗೆ ?
ಸ್ವರ್ಣಾ

ಕಾವ್ಯಾ ಕಾಶ್ಯಪ್ said...

ಅವಳ ಬಳೆಗಳ ನಾದಕ್ಕೆ ನೀ ಇಣುಕಿದಂತೆ .. ನಿನ್ನೊಲುಮೆಯ ಸಾಲುಗಳಿಗೆ ರೋಮಾಂಚಿತಳಾಗಿ ಅವಳು ಇಣುಕುತ್ತಾಳೆ ಬಿಡು..;) :)

prashasti said...

ಚೆಂದಿದ್ದೋ.. ನವ್ಯದಿಂದ ಮತ್ತೆ ಇದಕ್ಕಾ ? :ಫ್