Sunday, August 25, 2013

ನಲ್ಲೆ ನೀ ಹೋಗದಿರು ನನ್ನ ತೊರೆದು

ನಲ್ಲೆ ನೀ ಹೋಗದಿರು ನನ್ನ ತೊರೆದು;
ಹೊರಟುದೇತಕೆ ನೀನು ಹೀಗೆ ಮುಳಿದು!
ದಾರಿಯಲಿ ಬಿದ್ದಿರುವ ಮಲ್ಲೆಹೂವಿನ ರಾಶಿ
ಕಂಡಾದರೂ ಬಾರೆ, ನನ್ನ ನೆನೆದು.

ಹೂವಂತ ಸಖಿಯರು ಇದ್ದಾರು ನನಗೆಂದು
ನಿನ್ನ ಅಂಜಿಕೆಯೇನು? ಓ ಮಲ್ಲಿಗೆ
ಇದ್ದವರು ಹೂವಂತ ಮನಸಿನಾ ಗೆಳತಿಯರು
ನೀನು ಹೂವಿನ ರಾಣಿಯಂತೆ ನನಗೆ.

ಇಂತಹಾ ಮಾತುಗಳನಾಡುವುದು ಕೆಣಕಲು
ನಿನ್ನ ಹುಸಿಮುನಿಸಿಗೆ ನಾನು ನಗಲು;
ಈ ಹುಚ್ಚು ಪ್ರೀತಿಯನು ನೀನೂ ತಿಳಿದಿರುವೆ
ಆದರೂ ಇನ್ನೇಕೆ ಮುಳಿಸಿನೊಡಲು?

ಬಾರೆನ್ನ ಹೂವೊಲವೆ; ನನ್ನ ನಗೆ ಮಲ್ಲಿಗೆಯೆ
ನಿನ್ನ ದಾರಿಗೆ ನಾನು ಮಲ್ಲೆಯಂತೆ
ಎರಡು ಜೀವದ ಬದುಕು ಒಂದಾಗಿ ಸಾಗಲು
ಮನಬಿಚ್ಚಿ ನೀ ಬಾರೆ ತೊರೆದು ಚಿಂತೆ.

ಚಿತ್ರ :ಗೋವಿಂದ ಭಟ್ ಬಲ್ಲೆಮೂಲೆ

5 comments:

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಮುದ್ದಾಗಿದೆ ಪ್ರೀತಿಯ ಓಲೆ ... :)

Badarinath Palavalli said...

ಭಟ್ಟರೇ, ಪ್ರೇಮ ಕಾವ್ಯ ಮತ್ತು ಅದು ಮನಸ್ಸಿನಲ್ಲಿ ಮೀಟುವ ಹಳೆಯ ನೆನಪುಗಳು ಪುಳಕ ತರಿಸುತ್ತವೆ. ಇಂತಹ ಮಲ್ಲಿಗೆ ಕವಿತೆಗಳಿಗಾಗಿ ನಿಮಗೆ ನಾವು ಋಣಿ! 'ಮುಳಿದು' ಪದವನ್ನು ನೆನಪಿಸಿದ ನಿಮಗೆ ಶರಣು.

ಶ್ರೀ. ಗೋವಿಂದ ಭಟ್ ಬಲ್ಲೆಮೂಲೆಯವರ ಛಾಯಾ ಚಿತ್ರವೂ ಅಮೋಘವಾಗಿದೆ.

sunaath said...

ಮಲ್ಲಿಗೆಯ ಕಂಪನ್ನು ಸೂಸುವ ಕವನವಿದು. ನಲ್ಲೆಗೆ ತೊಡಿಸುವ ಕಾವ್ಯಮಾಲೆಯನ್ನು ರಚಿಸುತ್ತಿರುವಿರಿ!

ಕಾವ್ಯಾ ಕಾಶ್ಯಪ್ said...

ಇಂತಹಾ ಮಾತುಗಳನಾಡುವುದು ಕೆಣಕಲು
ನಿನ್ನ ಹುಸಿಮುನಿಸಿಗೆ ನಾನು ನಗಲು;

ee salugalu ishta aytu.... :)

Ashok.V.Shetty, Kodlady said...

ಚೆನ್ನಾಗಿದೆ ಸರ್ ... ಇದನ್ನು ಓದಿದ ಮೇಲೆ ಆಕೆ ಹೋಗೋ ಚಾನ್ಸ್ ಇಲ್ಲ ಬಿಡಿ ....