Tuesday, December 24, 2013

ನಿನ್ನ ಸ್ನೇಹದ ಸವಿಯ ನಾನರಿವ ಮೊದಲಿಗೇ

ನಿನ್ನ ಸ್ನೇಹದ ಸವಿಯ ನಾನರಿವ ಮೊದಲಿಗೇ
ನೋವು ಬರಬೇಕಿತ್ತು ನಮ್ಮ ಜೊತೆಗೆ;
ಸುಖದ ಸಖ್ಯಕ್ಕಾಗಿ ನಲ್ಮೆ ಮರೆಯುವುದೇನೆ?
ತಪ್ಪೊಪ್ಪು ವ್ಯವಹಾರ ಪ್ರೀತಿಗಿಹುದೇ?

ನೀನಪ್ಪುವೆಡೆಯಲ್ಲಿ ಸುಖದ ಕ್ಷಣಗಳ ಹುಡುಕಿ
ಅನುದಿನವು ಬದುಕುವುದ ಕನಸು ಕಂಡೆ;
ಯಾವುದೋ ತೋಳರಸಿ ನೀನು ಸುಖದಲಿ ನಕ್ಕೆ
ನಾನಿಂತು ಬಾಳರಸಿ ನೋವನುಂಡೆ.

ಮಳೆಗೆ ಬೇರನು ಬಿಟ್ಟು ಮೇಲೇರಿದಾ ಲತೆಗೆ
ಬಿಸಿಲು ತಾಕಿದ ದಿನಕೆ ಬಂತು ಕೋಪ
ನೀನು ಸುಖದಲಿ ನಕ್ಕು, ನೋವಲ್ಲಿ ನೆನಪಿಸಿದೆ
ಸ್ವಚ್ಚಂದ ಬದುಕಿನಲಿ ಯಾರ ಶಾಪ?

ನಿನ್ನ ನಲಿವಿನ ಲೆಕ್ಕ ನಾನು ಕೇಳುವುದಿಲ್ಲ
ಹಂಚಿಕೊಳ್ಳಲೆ ನೋವು? ಬೇಡ ನನಗೆ
ನಿನಗೆ ನೀನೇ ಮದ್ದು ನನಗೆ ನಾನೇ ಮುದ್ದು
ಎಲ್ಲ ಮುಗಿಯಲಿ ನೆನಪು ಸಾವಿನೊಳಗೆ.

6 comments:

Badarinath Palavalli said...

Ishwara Bhat K ಆವರ ಈ ಕವಿತೆ ನನಗೆ 'day's best'

ಮಳೆಗೆ ಬೇರನುlಟ್ಟು ಮೇಲೇರಿದಾ ಲತೆಗೆ
ಬಿಸಿಲು ತಾಕಿದ ದಿನಕೆ ಬಂತು ಕೋಪ
ನೀನು ಸುಖದಲಿ ನಕ್ಕು,
ನೋವಲ್ಲಿ ನೆನಪಿಸಿದೆ
ಸ್ವಚ್ಚಂದ ಬದುಕಿನಲಿ ಯಾರ ಶಾಪ?


ಒಮ್ಮೆ ಮನಸ ಹಿತ್ತಲಿನಲ್ಲಿ ಅಂದೆಂದೋ ಹೂತಿಟ್ಟ ನೆನಪುಗಳನ್ಬು ಉತ್ಖಲಿಸಿದ ನಿಮ್ಮ ಈ ಕವನ, ಮಾತಿಗೆ ನಿಲುಕದ ಕಲಾಕೃತಿ.

ಮನಸು said...

ಅದ್ಭುತ ಸಾಲುಗಳು..
ನಿನ್ನ ನಲಿವಿನ ಲೆಕ್ಕ ನಾನು ಕೇಳುವುದಿಲ್ಲ
ಹಂಚಿಕೊಳ್ಳಲೆ ನೋವು? ಬೇಡ ನನಗೆ
ನಿನಗೆ ನೀನೇ ಮದ್ದು ನನಗೆ ನಾನೇ ಮುದ್ದು
ಎಲ್ಲ ಮುಗಿಯಲಿ ನೆನಪು ಸಾವಿನೊಳಗೆ. - ನನಗೆ ಇಷ್ಟವಾದ ಸಾಲು.. ಇದು

sunaath said...

ಮೊದಲ ಮೂರು ನುಡಿಗಳಲ್ಲಿ ವಿಷಾದ ಭಾವ ಚಿತ್ರಿತವಾಗಿದ್ದರೆ, ಕೊನೆಯ ನುಡಿ punch ನುಡಿಯಾಗಿದೆ. ಕವನಸೌಧದ ಶಿಖರವೆಂದು ಇದನ್ನು ಕರೆಯಬಹುದು,

Unknown said...

ಉತ್ತಮ ಕವನ :)

ಸಂಧ್ಯಾ ನಾಯ್ಕ said...

ತುಂಬ ಚೆನ್ನಾಗಿದೆ

prashasti said...

ನಿನ್ನ ನಲಿವಿನ ಲೆಕ್ಕ ನಾನು ಕೇಳುವುದಿಲ್ಲ
ಹಂಚಿಕೊಳ್ಳಲೆ ನೋವು? ಬೇಡ ನನಗೆ
ನಿನಗೆ ನೀನೇ ಮದ್ದು ನನಗೆ ನಾನೇ ಮುದ್ದು
ಎಲ್ಲ ಮುಗಿಯಲಿ ನೆನಪು ಸಾವಿನೊಳಗೆ. >>
Oh super