Tuesday, April 15, 2014

ನನ್ನವಳು ನಕ್ಕಾಗ

ನನ್ನವಳು ನಕ್ಕಾಗ ಹಣತೆಗಳು ಬೆಳಗುವವು
ಯಾವುದನು ಹೋಲಿಸಲಿ? ಹುಡುಕಬೇಕು.
ಸಂಜೆಯೇರುತ ಕಪ್ಪು ಜಗವನ್ನೆ ಸುತ್ತಿರಲು
ತುಳಸಿ ಹೂವಿನ ಎದುರು ಕಂಡ ಬೆಳಕು;

ಎಣ್ಣೆ ಹೀರಿದ ಹಣತೆ, ಕರಿಯ ಬತ್ತಿಯನೆತ್ತಿ
ಹೀಗೊಮ್ಮೆ ಹಾಗೊಮ್ಮೆ ಹುಬ್ಬನೊರಸಿ;
ನನ್ನವಳು ಎದೆಗಾತು ಹಣತೆಯನು ಹಚ್ಚುವಳು
ನನ್ನ ಒಲವಿನ ಮಾತು ಹಿತದಿ ಬೆರೆಸಿ.

ಗಾಳಿಯಾಡುವ ದಿನಕೆ ಹಸ್ತದಲಿ ತಡೆಯುವಳು
ದೀಪವಾರದೆ ಇರಲಿ ಎಂಬ ಕನಸು;
ತುಳಸಿಬದಿಯಲಿ ನಿಂತು ದೇವರನು ಬೇಡುವಳು
ಅವಳ ಮೊಗದಲಿ ಕಾಂತಿ ಎಂತ ಸೊಗಸು!

ಯಾವ ಬಿಗುಮಾನವೂ ಸುಳಿಯಲಾರದು ಇಲ್ಲಿ
ನೋವಿರಲಿ ನಗೆಯಿರಲಿ ಹಣತೆಯಿರಲಿ;
ದಿನನಿತ್ಯ ಹರಸುವಾ ಒಲುಮೆಯಾಟದ ಬೆಳಕು
ಆರದೆಯೆ ಇರಲೆಂಬ ಪ್ರೀತಿಯಲ್ಲಿ!

3 comments:

sunaath said...

ಇನಿಯಳ ನಗುವಿನಲ್ಲಿ ಚೆಲುವನ್ನು ಕಾಣುವುದು ರಸಿಕ ಕವಿಗೆ ಮಾತ್ರ ಸಾಧ್ಯ!

Badarinath Palavalli said...

ಒಲುಮೆಯ ಹಣತೆ ಆರದಿರಲೆಂದು ನಮ್ಮದೂ ಬೇಡಿಕೆ ತುಳಸಿಯಲ್ಲಿ.

ಮಂಜಿನ ಹನಿ said...

ಚೆಂದದ ಕವನ ಕಿರಣಣ್ಣ. ನಿಮ್ಮ ಒಲವ ಹಣತೆಗೆ, ಇದೋ ನನ್ನ ನಲ್ಮೆಯ ಪ್ರಣತಿ :-)

- ಪ್ರಸಾದ್.ಡಿ.ವಿ.