Saturday, June 25, 2011

ಕೃಷ್ಣಾಯಣ



ನಿನ್ನೆ ನಾನು ಕಂಡೆ ಕನಸ
ಪಾತ್ರ ಅದಲು ಬದಲು
ರಾಮನಿಲ್ಲ ತ್ರೇತಾಯುಗದಿ
ಕೃಷ್ಣ ಜನುಮವಾಗಲು

ಅಂತು ಇಂತು ಕೃಷ್ಣ ಕೂಡ
ರಾಮನಂತೆ ಕಾಡಿಗೋದನು
ಕೊಂದನೆಲ್ಲ ರಕ್ಕಸರ
ಮುನಿಗಳನ್ನ ಕಾಯ್ದನು

ಕೃಷ್ಣನಾದರೇನು ಇಲ್ಲಿ ಕೂಡ
ರಾವಣೇಂದ್ರ ಬಂದನು
ಸೀತೆಯನ್ನು ಆಗಿನಂತೆ
ಈಗಲೂ ಕದ್ದೊಯ್ದನು

ಮುಂದುವರೆದ ಕೃಷ್ಣ ಕೂಡ
ವಾನರರ ಕೂಡಿಕೊಂಡ
ಕೃಷ್ಣನಿಗೆ ಸೀತೆ ತರುವ ಭಾಷೆ
ಕೊಟ್ಟ ವಾನರ ಮುಖಂಡ

ಹನುಮ ಹೊರಟ ಸೀತೆಯನ್ನು
ಹುಡುಕೊ ಹುರುಪಿನಿಂದ
ಕಂಡು ಕರೆದುಕೊಂಡು ಬಾರೊ
ಎನುವ ಮಾತು ಕೃಷ್ಣನಿಂದ

ಕಂಡ ಸೀತಾಮಾತೆಯನ್ನು ಹನುಮ
ಪೇಳ್ದ ಕೊಟ್ಟು ಉಂಗುರ
ಮಾತೆಯನ್ನು ಹೊತ್ತು ಹಾರಿ
ಬಂದ ಕೃಷ್ಣನ ಹತ್ತಿರ.

ಕದ್ದ ಲಂಕಾಧೀಶನೆದುರು
ಯುದ್ಧ ಮಾಡಲಿಲ್ಲ
ವರ್ಷ ಮುಗಿಸಿ ರಾಜ್ಯ ಸೇರಿ
ಸುಖದಿ ಇದ್ದರೆಲ್ಲ.

೧೮.೦೬.೨೦೧೧