Saturday, August 27, 2011

ಬೆಳಗು.


ಹಸಿಬಿಸಿಯಿರೆ ವಸುಮತಿಯಧರವ ಚುಂಬಿಸಿದನು ಭಾನು
ಹುಸಿಕೋಪದ ಬಿರುಮಾತುಗಳಿರೆ ಮರು ಹಾಡಿದನವನು
ಮುಸಿಮುಸಿಯೆನೆ ನಗುತಿರ್ದನು ಕಳೆದಾ ಚಂದಿರನು
ನಸುನಾಚಿಕೆಯಲಿ ಸುಖಸೌಖ್ಯದಿ ರಂಗೇರಿದೆ ಬಾನು.

ಕಂಬನಿಯನು ಛೇಡಿಸುತಿದೆ ಮೊಗದಾ ರವಿಯರಳು
ಬೆಂಬಲದಲಿ ನಿಂತಿಹುದದು ಮಲ್ಲಿಗೆ ಮೊಗ್ಗರಳು
ಹಿಂಬಾಲಿಸಿ ಭೂಮಿಯ, ಸವರಿ ಮತ್ತೆ ಹೆರಳು
ಬೆಂಬಿಡದಹ ಕಿರಣವದು ಸೂರ್ಯನ ಕೈ ಬೆರಳು

ಲೀಲೆಯಹುದೆ? ಇದು ಪ್ರೇಮವೆ? ಅಲ್ಲ ಬೆಳಗಿನಾಟವೋ
ಮೇಲೆ ಮುತ್ತು ರತ್ನವಿಟ್ಟು ಸೆಳೆವ ಪ್ರಕೃತಿ ಬೇಟವೊ
ಜಾಲದೊಳಗೆ ಬಂಧಿಸಿರುವ ಜಗದ ಸೊಬಗಿನೋಟವೊ
ಕಾಲದೊಳಗೆ ಹೊಂದುವಂತ ನಮಗೆ ನಿತ್ಯ ಪಾಠವೋ

೨೫.೦೮.೨೦೧೧

9 comments:

V.R.BHAT said...

ಆದಿ ಮತ್ತು ಅಂತ್ಯ ಪ್ರಾಸಗಳನ್ನು ಹೊಂದಿಸಲು ಉತ್ತಮ ಪ್ರಯತ್ನ ನಡೆಸಿದ್ದೀರಿ, ಕಾವ್ಯವನ್ನು ಗೇಯವಾಗಿಸುವ ಮೊದಲ ಪ್ರಯತ್ನ ಅದಾಗಿದೆ, ಇದರ ಜೊತೆಗೆ ಲಘು-ಗುರು ಮಾತ್ರೆಗಳನ್ನೂ ನೋಡಿಕೊಂಡು, ಸಂಧಿ-ಸಮಾಸಗಳನ್ನೂ ಬಲಕ್ಕಿಟ್ಟುಕೊಂಡು ಕಾವ್ಯದ ವಸ್ತುವನ್ನು ಮರೆಯದೇ ಬರೆಯುವುದು ಒಂದು ಸಾಧನೆ. ಕಾವ್ಯ ಜಲಧಾರೆಯಂತೇ ಬಸಬಸ ಎನ್ನುವ ಬದಲು ತೈಲಧಾರೆಯಂತೇ ನುಣುಪಾಗಿ ಹರಿದಾಗ ಗೇಯತೆಗೆ ಪಕ್ಕಾ ಆಗುತ್ತದೆ,ಬಹಳ ಜನರಿಗೆ ಇಷ್ಟವಾಗುತ್ತದೆ, ನಿಮಗೆ ಆ ಕಲೆ ಸಿದ್ಧಿಸಲಿ, ಶುಭಮಸ್ತು.

ಈಶ್ವರ said...

ತುಂಬಾ ಧನ್ಯವಾದಗಳು ನಿಮ್ಮ ಸಮಯಕ್ಕೆ. ತುಂಬಾ ಖುಷಿಯಾಯ್ತು :)

sunaath said...

ರಮ್ಯ ಕಲ್ಪನೆ ಹಾಗು ಸರಾಗ ಗೇಯತೆ ಇವು ಈ ಕವನದ ಉತ್ತಮ ಲಕ್ಷಣಗಳಾಗಿವೆ. ಕಾವ್ಯಕೌಶಲ್ಯ ನಿಮಗೆ ಸಿದ್ಧಿಸುವದರಲ್ಲಿ ಸಂದೇಹವಿಲ್ಲ.

ಈಶ್ವರ said...

ತುಂಬಾ ಧನ್ಯವಾದಗಳು ಸರ್. ನಿಮ್ಮ ಸಮಯಕ್ಕೆ ಆಭಾರಿ.

prabhamani nagaraja said...

ಪ್ರಾಸಭರಿತವಾದ ಸು೦ದರ ಕಲ್ಪನಾಪೂರ್ಣ ಕವನ. ಅಭಿನ೦ದನೆಗಳು.

ಈಶ್ವರ said...

ಧನ್ಯವಾದಗಳು ಪ್ರಭಾಮಣಿ ಮೇಡಂ.. ಖುಷಿಯಾಯ್ತು :)

ಶ್ರೀಪಾದು said...

ಆದಿಪ್ರಾಸದ ಕವನಗಳಲ್ಲಿ ತುಂಬಾ ಚಂದದ ಹಿಡಿತ ಇದ್ದು .ಚೇತೋಹಾರಿ ಕವನ

ಈಶ್ವರ said...

ಶ್ರೀಪಾದಣ್ಣಾ, ತುಂಬಾ ಧನ್ಯವಾದ ..

Subrahmanya said...

really nice, as in it is diffficult to maintain prasa in one end in your case you mainatin it at both ends, really great man :)