Tuesday, January 17, 2012

ಕೊಳಲು-ಗೋಕುಲದ ಬಿಳಲು


ಎತ್ತ ಪೋದನೋ ಮಾಧವ
ಎತ್ತ ಪೋದನೋ
ಮತ್ತ ರಾಧೆ ಕಾಯುತಿಹಳು
ಚಿತ್ತದಲ್ಲಿ ಅವನ ನೆನೆದು..

ಮಾಧವನ ಕೈಯ್ಯ ಬೆರಳು
ಮೋದದಿಂದ ನುಡಿಸಿ ಬರುವ
ನಾದವನ್ನು ಕೇಳದೆಯೇ
ರಾಧೆ ಎತ್ತ ಪೋದಳು ?
೨.
ಗೆಜ್ಜೆ ಪಾದ ಘಲ್ಲೆನು,ಮೆಲು
ಹೆಜ್ಜೆಗಳನು ಇಡುತ ಬಂದ
ಮಜ್ಜಿಗೆಯಾ ಬೆಣ್ಣೆ ಮುಖದಿ
ಲಜ್ಜೆ ಏಕಿದೆ..ರಾಧೆ ಲಜ್ಜೆ ಏಕಿದೆ ?

ಚಂದಿರನ ನೋಡೆ ರಾಧೆ
ಮಂದ ಹರಿವ ಯಮುನೆ ನೋಡೆ
ಇಂದು ಎಂತ ಮಾಧುರ್ಯವೊ
ಒಂದು ತಿಳಿಯೆ ನಾನು !

ತಡೆ ರಾಧೆ ಕೇಳುತಿಹುದೆ?
ಬಿಡದೆ ಮಥುರೆ ಕರೆಯುತಿಹುದ
ಬೆಡಗಿನೊಲವೆ ನಿನ್ನ ತೊರೆದು
ಅಡಗಬೇಕು ನಾಳೆ ನಾನು

ನಾನು ನೀಲ ನೀನು ಲೀನ
ನ್ಯೂನವಿರದ ಪ್ರೇಮಗಾನ
ಬಾನ ತುಂಬ ನಗುವ ತಾರೆ
ಪಾನವಾಯ್ತು ಭುವಿಯ ಜೇನು
ಗಾನವಾಯ್ತು ಮೌನ ಸೊಲ್ಲು
ದೀನ ಬಿಂಬ ತೊರೆಯೆ ನೀರೆ,,

೩.
ಕೊಳಲ ಬಿಟ್ಟೆ ಯಮುನೆಯಲ್ಲೆ
ಅಳಲದಿರುವ ಭರವಸೆಯಲಿ
ಬಲರಾಮನ ಜೊತೆಗೆ ನಾನು
ಗೆಲಲು ಪೋಪೆನು , ಮಥುರೆಗೆ !
ಸುಳಿಯಾದಳೆ ಯಮುನೆ ?

೧೭-೦೧-೨೦೧೨

ಹಿನ್ನಲೆ :-

ಉದ್ದೇಶವಿಲ್ಲದ ಸಾಹಿತ್ಯ ಇಲ್ಲ. ಪುತಿನ ಅವರ ಗೋಕುಲ ನಿರ್ಗಮನ ನಾಟಕದಿಂದ ತುಂಬಾ ಪ್ರಭಾವಿತ ನಾನು. ಮಥುರೆಗೆ ತೆರಳಿದ ಕೃಷ್ಣ ಮತ್ತೆ ಬರಲಿಲ್ಲ ಗೋಕುಲಕ್ಕೆ, ರಾಧೆಯನ್ನವ ನೋಡಲಿಲ್ಲ. ಅದಕ್ಕೆ ಯಮುನೆಯಲ್ಲಿ ಬಿಟ್ಟ ಕೊಳಲನ್ನು ಸುಳಿಯು ಮಾಯಮಾಡಿತೇನೋ ?
ಗೆಲಲು ಪೋದ ಕೃಷ್ಣ ಮರಳಿ ಬರಲಿಲ್ಲ...

ಮತ್ತೆ ಈ ರಚನೆಗೆ ಪೂರಕವಾದದ್ದು ನನ್ನ ತಂಗಿ ಪೂಜಳ ಫೋಟೋ ಮತ್ತೆ ಸುನಿತಕ್ಕ. ಅವರಿಗೆ ಧನ್ಯ.

10 comments:

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ತುಂಬಾ ಚೆನ್ನಾಗಿದೆ .. ಒಂದು ಸುಂದರ ಸನ್ನಿವೇಶ ನೋಡಿದದಂತೆ ಅನ್ನಿಸಿತು.. ಕೃಷ್ಣನ ಕಥೆ ಬಹಳ ಸೊಗಸಾಗಿದೆ.. :)

Nivedita Hegde said...

Chennagide..

ಮೌನರಾಗ said...

ಚೆನ್ನಾಗಿ ಮೂಡಿ ಬಂದಿದೆ ಕವಿತೆ....
ಪ್ರಾಸದ ಜೊತೆ ಭಾವಗಳ ಮಿಳಿತ ಇನ್ನೂ ಸೊಗಸಾಗಿದೆ...

Badarinath Palavalli said...

ಈಶ್ವರಣ್ಣ,

ನಿಮ್ಮ ಪ್ರತಿಭೆಯ ವೈಶಾಲ್ಯತೆ ಇದೀಗ ನಮಗೆ ಕಾಣುತ್ತಿದೆ.

ಪುತೀನ ಅವರಷ್ಟೇ ಸಶಕ್ತ ರಚನೆಯಿದು.

ಇದನ್ನು ನಾನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಬಹುದೇ?

(ನನ್ನ ಬ್ಲಾಗಿಗೂ ಬನ್ನಿ, ಕೆಲ ಹೊಸ ಕವನಗಳಿವೆ)

ಜಲನಯನ said...

ಈಶ್ವರ್ ಸರ್...ತುಂಬಾ ಚನ್ನಾಗಿದೆ ಕವನ..ಅದರಲ್ಲೂ
ನಾನು ನೀಲ ನೀನು ಲೀನ
ನ್ಯೂನವಿರದ ಪ್ರೇಮಗಾನ
ಬಾನ ತುಂಬ ನಗುವ ತಾರೆ
ಪಾನವಾಯ್ತು ಭುವಿಯ ಜೇನು
ಗಾನವಾಯ್ತು ಮೌನ ಸೊಲ್ಲು
ದೀನ ಬಿಂಬ ತೊರೆಯೆ ನೀರೆ,
ನೀಲ-ಲೀನ, ಪಾನ-ಗಾನ, ನ್ಯೂನ-ಬಾನ....ಈ ಪ್ರಯೋಗ..ಸೂಪರ್

ಅನುರಾಧ. said...

ಕಿರಣ, ಕವನ ಬರೆದ ರೀತಿ ನೈಜವಾಗಿ ಮೂಡಿಬಂದಿದೆ..ಸೊಗಸಾದ ಕವನ...

sunaath said...

Lilting lyric. ಬೃಂದಾವನದ ವಾತಾವರಣವನ್ನು ಮರುಸೃಷ್ಟಿಸಿದ್ದೀರಿ. ಗೇಯಗೀತೆ ತುಂಬ ಚೆನ್ನಾಗಿದೆ.

Swarna said...

ತುಂಬಾ ಚೆನ್ನಾಗಿದೆ.
ಸ್ವರ್ಣಾ

ಸೀತಾರಾಮ. ಕೆ. / SITARAM.K said...

ಬೃಂದಾವನದ ಗೀತೆ ಮಧುರವಾಗಿದೆ.

Lakshmi said...

ವಾವ್,,,,, ಸೂಪರ್