Sunday, December 16, 2012

ಅವಳಿಗಾಗಿ.

ನಿನಗಾಗಿ ತಂದಂತ ಈ ಗುಲಾಬಿಯ ಹೂವ
ನೀನು ಹೆರಳೊಳಗಿಟ್ಟು ನಗಿಸಬೇಕು
ಯಾಕೆ ಮಲ್ಲಿಗೆ ತರದೆ, ಈ ಗುಲಾಬಿಯ ತಂದೆ?
ಎಂದೆನ್ನ ಕಾರಣವ ಕೇಳಬೇಕು.

ನೀ ಕೇಳದಿದ್ದರೂ ನಾನೆ ಹೇಳುವೆ ಗೆಳತಿ
ಮಲ್ಲಿಗೆಯ ತರದಿದ್ದ ಕಾರಣವನು
ಈ ಗುಲಾಬಿಯ ಕೆಂಪು ನಿನ್ನ ಕೆನ್ನೆಯ ಹೊಳಪು
ಬಿಳಿಯ ಮಲ್ಲಿಗೆಯಲ್ಲಿ ಕಂಡಿತೇನು?

ಮಲ್ಲಿಗೆಯ ಕೊಯ್ದು ನಾ ಮಾಲೆಯನು ಕಟ್ಟುತಲಿ
ನಿನಗಾಗಿ ಕೊಡಲೆಂದು ದೂರದಿಂದ
ಬಂದಾಗ ತಡವಾಗಿ; ನೀ ಹೀಗೆ ನುಡಿದಿದ್ದೆ
ಪ್ರಿಯೆಯ ಕಾಯಿಸುವುದೇನು ಚಂದ?

ಹೀಗೆಂದು ತಂದಿಹೆನು ಈ ಗುಲಾಬಿಯ ಚೆಲುವೆ
ನಾನಾಗೆ ತೊಡಿಸಲೇ ನಿನ್ನ ಮುಡಿಗೆ?
ಮಲ್ಲಿಗೆಯ ಮನಸವಳೆ, ಈ ಗುಲಾಬಿಯೆ ಚಂದ
ಯಾವ ಉಡುಗೊರೆ ಕೊಡುವೆ ನನ್ನ ನುಡಿಗೆ?


೧೬-೧೨-೨೦೧೨

ಚಿತ್ರಮಾಡಿಕೊಟ್ಟವರು: ವೆಂಕಟ್ ಕೋಟೂರು
.ಇನ್ನೊಂದು ಫೇಸ್ಬುಕ್ಕಿನ ಮಿತ್ರರಿಂದ.

9 comments:

Srikanth Manjunath said...

ಮನಸೆಂಬ ಮಲ್ಲಿಗೆಯಿರಲು
ಮತ್ತೆ ಇನ್ನೊಂದೇಕೆ...
ಶತಕ ಸಂಭ್ರಮಕ್ಕೆ
ಗುಲಾಬಿ ಬೇಕೇ ಬೇಕು ಎಂದು ನಾನೆ ಬಂದೆ..
ಸುಂದರ ಕವಿತೆ ಈಶ್ವರ್
ಶತಕದ ಸಂಭ್ರಮದ ಸಂತಸದ ಕ್ಷಣಗಳಿಗೆ ಅಭಿನಂದನೆಗಳು

Sudarshan Hegde said...

Simply superb..

satya mitra said...

ಮಲ್ಲಿಗೆಯ ಮನಸಿನ, ಮಲ್ಲಿಗೆಯ ಘಮಲಲ್ಲಿ ಮಿಂದ ನಲ್ಲೆಯ ಕೆನ್ನೆಯ ಕೆಂಪೇರಿಸಲು ತಂದ ಕೆಂಗುಲಾಬಿ, ಕೆಂದಾವರೆಯ ಸರಿಸಿ, ಅರಸಿಯ ಮುಡಿಯೇರಿ ನಗುವ ಗುಲಾಬಿ ಗೆಲುವಿನ ಹಿಂದಿನ ಪ್ರಿಯಕರನ ಒಲವು ಚಲುವಾಗಿ ಅರಳಿದೆ ಅವಳಿಗಾಗಿ ಕಾವ್ಯ ಪ್ರತಿಮೆಯಲ್ಲಿ.

sunaath said...

ಕನಸ-ಕನ್ಯೆಗೆ ಮುಡಿಸುತಿಹಿರಿ, ಪ್ರಿಯ ಗೆಳೆಯ
ಕವನರೂಪದ ಮೊಲ್ಲೆಗಳನು ನೀವು.
ಮಲ್ಲಿಗೆಯ ಮಾಲೆಯೊ, ಚೆಂಗುಲಾಬಿಯ ಹೂವೊ
ಬೇಡವೆನ್ನಲು ಬಹುದೆ, ಒಲಿದ ಚೆಲುವೆ?

ಮೌನರಾಗ said...

ಅವಳ ಅಂದ ಚಂದದಂತೆ ನಿಮ್ಮ ಕವಿತೆಯೂ ಚಂದ..

Shruthi B S said...

ಕಿನ್ನಣ್ಣ ಕವನ ಚನ್ನಾಗಿ ಇದ್ದು.....:)

Swarna said...

ಪದ ಗುಚ್ಛವಿರೆ ಬೇರೆ ಗುಲಾಬಿ ಮಲ್ಲಿಗೆ ಏಕೆ ?
ಭಾವಕಿರಣವಿರೆ ನೇಸರನ ಹಂಗೇಕೆ ?
ಸುಂದರವಾಗಿದೆ

ಚಿನ್ಮಯ ಭಟ್ said...

ಅಬ್ಬಾ..ಮಲ್ಲಿಗೆಗೂ ಗುಲಾಬಿಗೂ ಅದೇನು ವ್ಯತ್ಯಾಸ...
ಸುಂದರವಾದ ನಿರೂಪಣೆ ಸಾರ್..
ಬರೆಯುತ್ತಿರಿ..
ಇಷ್ಟವಾಯ್ತು...

Badarinath Palavalli said...

ಗುಲಾಬಿ ಹಿಂದೆ ಇಷ್ಟೆಲ್ಲ ಒಲುಮೆ ಇದೆಯಾ ಭಟ್ರೇ. ಗುಲಾಬಿ ಬಣ್ಣಕ್ಕೂ ಆಕೆಯ ಕೆನ್ನೆ ಬಣ್ಣಕ್ಕೂ ಹೋಲಿಕೆ ಇದೆಯೇ, ಹಾಗಾದರೆ?
ಈಗಲೇ ಗುಲಾಬಿಯನ್ನು ತರಲು ಹೊರಟೆ!