Wednesday, December 19, 2012

ಸೀತೆಯ ಮಾತು.

ಜನಕನಾ ಮನೆಬಿಲ್ಲು ತುಕ್ಕು ಹಿಡಿಯಲಿ ಎಂದು
ಹರಸಿದ್ದ ಗಳಿಗೆಯನು ನೆನೆದುಕೊಂಡು
ಅದ್ವಿತೀಯನ ಹಿಂದೆ ಕಾಡು ಸೇರಿದ ಜೊತೆಗೆ
ಚಿನ್ನಬಣ್ಣ; ಸೆಳೆತದಲಿ ಕನಸನುಂಡು.

ಬೆಳಕಿದ್ದ ಕಡೆಗೆಲ್ಲ, ಮೋಸವಾಗದು ಎಂಬ
ತನ್ನಾತ್ಮವಿಶ್ವಾಸ ಸುಳ್ಳು ಎಂದು.
ಚಿನ್ನದಾ ಜಿಂಕೆಯನು ಕಾಣುತ್ತ ಮನಸೆಳೆದು
ಬಣ್ಣಗಾರಿಕೆ ಸಾಕು, ಸುಳಿಯೊಳಂದು.

ರಾವಣನ ನೋವಿಗೆ ನಾನೆಂತು ಔಷಧವು?
ಕಾಮುಕರಿಗೆ ಬೇಕೆ ಕಾಳುಮೆಣಸು?
ಜೀರ್ಣವಾದೀತು ಉರಿ; ರಾಮಬಾಣದ ಹೆಗಲು
ಬೆಂದಿದ್ದು ಅಪರಂಜಿ ರಾಮಕನಸು.

ವಸ್ತ್ರದಲಿ ಒಂದೆಳೆಯು ಹೊರಗೆ ಬಂದರೆ ಈಗ
ಎಳೆಯನ್ನು ಕತ್ತರಿಸಿ ಬಿಸುಡಬೇಕು,
ರಾಜಾರಾಮನು ತಾನು ವಸ್ತ್ರಸುಡುವವನಲ್ಲ!
ವಿಧಿವಿಲಾಸವಿದೆಂದು ಸಹಿಸಬೇಕು.
--
ಕೋದಂಡರಾಮನ ನೋಡಬಂದಳು ಸೀತೆ
ಅವನ ಕೈಯೊಳಗಿದ್ದ ದಂಡ ಕಂಡು ಮರುಗಿ;
ಇನ್ನು ಪ್ರೇಮದ ದಾನ ನಾನು ಕೇಳುವುದಿಲ್ಲ,
ಭೂಮಿ ಸೇರಿದಳವಳು; ಮಣ್ಣಿನಣುಗಿ!

೧೯-೧೨-೧೨

8 comments:

Apoorva Rao said...

superb... hats off to you :)

sunaath said...

ಸೀತೆಯ ಅಳಲಿನ ಯಥಾರ್ಥ ಕವನರೂಪ. Superb.

Swarna said...

ರಾಮ ವಸ್ತ್ರವನ್ನೇ ಸುಟ್ಟು ತನ್ನನ್ನೇ ಸುಟ್ಟುಕೊಂಡನೇ ?
ತುಂಬಾ ಚೆನ್ನಾಗಿದೆ

ಸಂಧ್ಯಾ ಶ್ರೀಧರ್ ಭಟ್ said...

Superb... seete sukhavundaddu kadimeye...

ಮೌನರಾಗ said...

ಮತ್ತೆ ಮತ್ತೆ ಓದಿಸುವ ಸುಂದರ ಕವಿತೆ...

Apoorva Udupi said...

haudu matte matte odisuva kavana

Badarinath Palavalli said...

ಸೀತಾ ಮಾತೆಯು ಇಲ್ಲಿ ಅತ್ಯುತ್ತಮ ದನಿಯಾಗಿದ್ದಾಳೆ.

Ashok.V.Shetty, Kodlady said...

ಈಶ್ವರ್ ಸರ್....
ಲಯಬದ್ಧ ವಾದ ಕವನ....ಸರಳ ಸುಂದರ ಸಾಲುಗಳ ಜೋಡಣೆ...ತುಂಬಾ ಇಷ್ಟ ಆಯಿತು ಸರ್.....ಅಭಿನಂದನೆಗಳು ಸುಂದರ ಸಾಲುಗಳನ್ನು ಉಣಬಡಿಸಿದ್ದಕ್ಕೆ ....


ನನ್ನ ಬ್ಲಾಗ್ ಗೆ ಭೇಟಿ ನೀಡಿ ಸುಂದರವಾಗಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು....ಈ ಬಂಧ ಹೀಗೆ ಮುಂದುವರಿಯಲಿ...