Wednesday, February 11, 2015

ಇನ್ಯಾವಳೂ ಅವಳಲ್ಲ.

ಮೆಲ್ಲ ನಕ್ಕಳು ಸಂಜೆ; ಕಾಲ್ದಾರಿಯಂಚಿನಲಿ
ನೋಡಿದಳೆ? ಕೆಣಕಿದಳೆ? ನನ್ನ ಹೀಗೆ
ಯಾವುದೋ ಧ್ಯಾನದಲಿ ಕಣ್ಣುಗಳು ಜೊತೆ ಸೇರಿ
ಅವಳ ಹೆಜ್ಜೆಯ ಹಿಡಿದು ಬೆಸೆವ ಬೇಗೆ.

ಇದುವರೆಗೆ ನಿಶ್ಚಲವು ಕೆಂಪು ಹೂವಿನ ಮರವು
ಅವಳ ನಗು ಕಂಡೊಡನೆ ಹೂವು ಚೆಲ್ಲಿ;
ಗಂಟಲೊಣಗಿದ ಹಕ್ಕಿ ಸುಮ್ಮನುಳಿಯುವುದೇನು
ನನ್ನ ಭ್ರಮೆಯೊಂದಿಗೇ ಹಾಡಿತಲ್ಲಿ.

ಹೂವ ಮಾರುವ ಅಜ್ಜಿ ಯಾವುದೋ ನೆನಪಿನಲಿ
ಕೊಡುವ ಮಲ್ಲಿಗೆಗೇನು ಗಂಧವಿರದೆ?
ಅವಳ ನಗುವಿನ ಹಿಂದೆ ನಾನು ಇರದಿರೆ ಸೋಲೆ?
ಪ್ರೀತಿ ನಗುವಲಿ ಬದುಕಿ ಬಾಳದಿಹುದೆ?

ಬಾಗಿಲನು ಅರೆತೆರೆದು ಮುಡಿಯ ಬೈತಲೆ ತೆಗೆದು
ನನ್ನವಳು ನನಗಾಗಿ ಕಾಯುತಿಹಳು.
ಮಲ್ಲಿಗೆಯ ಜೊತೆಯಿರುವ ತುಳಸಿ ಹೂ ನಗುತಲಿದೆ
ಅವಳ ಕನಸಲಿ ಹೀಗೆ ಬೆಳಕಿನಿರುಳು.

4 comments:

Sachin Bhat said...

irshad irshad....:)

Badarinath Palavalli said...

ಶೀರ್ಷಿಕೆಗೇ ಸಹಸ್ರಾಂಕಗಳು.
ಮಲ್ಲಿಗೆಯ ಮತ್ತು ಬಂದಂತಾಯಿತು.

sunaath said...

ಆಹಾ, ಮಲ್ಲಿಗೆಯ ಜೊತೆಗೆ ತುಳಸಿಯ ಸಹವಾಸ!

prashasti said...

ಹ್ವಾಯ್.. ಮಲ್ಲಿಗೆ ಎಲ್ಲಿಗೋದ್ಲು ಮಾರ್ರೆ.. ಮತ್ತೆ ಕರ್ಕಂಬನ್ನಿ ಬ್ಲಾಗ್ ಕಡೆಗೆ ಕಾಂಬ. :-)