೧
ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ
ಸಿರಿ ಕೃಷ್ಣ ಬಂದು ದೂರಿತ್ತ ತಾಯ್ಗೆ; ತಾಯಿ ಕೂಡ ಮರುಗಿ
ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು
ಮನೆಯಾಚೆ ಹೋಗಿ ತನ್ನಣ್ಣ ಬರುವ ಹಾದಿಯನು ಕಾದ ಕುಂತು!
೨
ನೇಗಿಲನು ಹೊತ್ತು ಬರುವಂತ ಅಣ್ಣ ತಂದಾನೆ ಬಣ್ಣ ಬಿದಿರ?
ಸೋದರನಿಗೆಂದು ಗುದ್ದನ್ನು ಕೊಡುವ, ಮುದ್ದಿಪನೆ ಬಿಳಿಯ ಪೋರ?
ಬಂಗಾರ ಬೇಡ ಮಾಣಿಕ್ಯಬೇಡ ಕೊಳಲೊಂದೆ ನನ್ನ ಒಡಲು
ಕಾಲು ಹಿಡಿದು ನಾ ಪಡೆಯಬೇಕು ಇನ್ನೊಂದು ಬಿದಿರ ಕೊಳಲು
ಅಣ್ಣಯ್ಯ ಕೇಳು ದಮ್ಮಯ್ಯ ಕೇಳು ಕೊಳಲೊಂದು ಒಡೆದು ಹೋಯ್ತು
ತಮ್ಮಯ್ಯ ನಾನು ಬೇಡಿದರೆ ಹೀಗೆ ಮೊಗವೇಕೆ ಕೆಂಪಗಾಯ್ತು?
ಮೇಲೆ ಕಾಡಿನಲಿ ಬಿದಿರ ಮೆಳೆಗಳಲಿ ಹೊಸತೊಂದು ಮೊಳೆಯದೇನು
ನನಗಾಗಿ ಒಂದು ಕೊಳಲನ್ನು ತಾರೊ! ನಾ ತಮ್ಮನಲ್ಲವೇನು?
೩
ಎಲೆ ಕೃಷ್ಣ ಕೇಳು; ಬಲು ಜಾಣ ನೀನು ಇದು ನಿನ್ನ ಲೀಲೆ ತಾನೆ
ಬಲರಾಮನಲ್ಲಿ ನೀ ಕೊಳಲು ಕೇಳುವುದು ಎಷ್ಟು ಸರಿಯೊ ಕಾಣೆ!
ನಿಲಲಾರೆ ನೀನು ಒಂದೆಡೆಯ ಜಗದಿ ನೀನೆಲ್ಲ ಕಡೆಗು ನಲಿವೆ
ಮತ್ತೊಮ್ಮೆ ಹೀಗೆ ನೀ ಮನುಜನಾತ್ಮದಲಿ ನಿನ್ನ ಕಡೆಗೆ ಕರೆವೆ.
ಬಂಗಾರದಂತ ಹೊಳಪುಳ್ಳ ಬಿದಿರ ನಾ ಎಷ್ಟು ತರಲಿ ಇದಕೆ
ಬಿಸಿಯಾರದಂಥ ಕಬ್ಬಿಣವ ಕಾಸಿ ಎಷ್ಟಿರಲಿ ಘಾಸಿ ಅದಕೆ?
ತುಟಿಯು ನಿನದಿರಲಿ ಬೆರಳು ನಗುತಿರಲಿ ಮೊಗದಿ ಮಂದಹಾಸ
ಜಗದ ನಾಟಕಕೆ ನೀನೆ ತಾನೆ ಹರಿ, ನಾನು ನಿನ್ನ ದಾಸ!
2 comments:
ಲಾಯ್ಕಿದ್ದು :-)
ಉತ್ತಮವಾಗಿದೆ..
Post a Comment