Sunday, February 8, 2015

ಒಂದು ಪ್ರೇಮ ಕತೆ

ಅಂಗಡಿಯ ಮಾಲಿಕನು ದೊಡ್ಡ ಮೂಗಿನ ಸಿಡುಕ
ಕೋಪಬಂದರೆ ಅವನು ಸಿಂಗಳೀಕ;
ಅವನ ಜೊತೆಗಿರುವವನು ಹದಿನೆಂಟು ಹರೆಯದವ
ಮೀಸೆ ಬೆಳೆಯುವ ಹುಡುಗ, ಅಂಜುಬುರುಕ.

ಮಾಲಿಕನ ಮಗಳವಳು ಶಾಲೆ ಮೆಟ್ಟಿಲು ತಪ್ಪಿ
ಮನೆಯ ಒಳಗೇ ಟೀವಿ ನೋಡುವವಳು
ಅಂಗಡಿಯ ಕೀಲಿಕೈ ಕೊಡುವ ದಿನಚರಿಯಲ್ಲಿ
ಮೀಸೆಯೊಳಗಿನ ನಗುವ ಕಾಣುವವಳು

ಒಮ್ಮೊಮ್ಮೆ ಅಂಗಡಿಯ ದಿನಸಿ ರಾಶಿಯ ನಡುವೆ
ಅವಳ ನೆನೆಯುತ ಹುಡುಗ ಕುಳಿತಿರುವನು
ಮೆಣಸು ಕೇಳಿದ ಜನಕೆ ಸಕ್ಕರೆಯ ಕಟ್ಟುವನು
ಮಾಲಿಕನ ಬೈಗುಳಕೆ ಸೋಲುವವನು.

ಯಾವುದೋ ಕಾಲದಲಿ ಮಾಲಿಕನ ತೋಟದಲಿ
ಹೊಸತು ಮಲ್ಲಿಗೆ ಬಳ್ಳಿ ಹೂ ಬಿಟ್ಟಿತು
ಅದನು ನೋಡುತ ನಿಂತ ಹುಡುಗನಾ ಮನದಲ್ಲಿ
ಮಲ್ಲಿಗೆಯ ಗಂಧವೂ ಒಲಿದು ಬಂತು.

ಎಲ್ಲ ಕತೆಗಳ ಹಾಗೆ ಕಲಹವಾಯಿತು ಎನುವ
ನಿಮ್ಮ ತೀರ್ಮಾನಗಳ ಪಕ್ಕಕಿಡಿರಿ
ಮಾಲಿಕನ ಮಗಳನ್ನು ಮದುವೆಯಾದನು ಹುಡುಗ
ಹೊಸ ವಧೂವರರನ್ನು ಹರಸಿಬಿಡಿರಿ.

ಕಾವು!

ಒಂದೆರಡು ದಿನವಿದ್ದು ಹೋಗಬಾರದು ಏಕೆ
ಮೊನ್ನೆಯೋ ಮಳೆಗಾಲ;ಬಹಳ ನೀರು
ಬೆಂಬಿಡದೆ ಕಾಡುತಿದೆ ಇಂದು ವಿರಹದ ಬೇಗೆ
ನೀಡಬಾರದೆ ಚೂರು ಒಲವ ಹಸಿರು.

ಸುಳಿವುದದು ಬಿರುಗಾಳಿ ಮೈಗೆ ಕಿಚ್ಚನು ಹಚ್ಚಿ
ಬೆಂಕಿಯಾಡುವ ಮನವು ಹುಚ್ಚಾಗಿದೆ
ತೆಗಳುವುದು ಸರಿಯೇನು? ಈ ಬಿಸಿಯ ಗಾಳಿಯನು
ನಿನ್ನೊಲವ ಕಾಯುವುದು ಹೆಚ್ಚಾಗಿದೆ.

ಯಾವುದೋ ಧಾಟಿಯಲಿ ಯಾವುದೋ ರಾಗದಲಿ
ಹಾಡುವಾತನ ಕೊರಳು ದಣಿದುಹೋಗಿ
ನಿನ್ನ ಪ್ರೀತಿಯ ಸ್ವಲ್ಪ ಪಡೆದು ಬಾ ಎನುತಲಿದೆ
ಬರೆವ ಪದಗಳ ಸಾಲು ಮರವೆಯಾಗಿ

ನಾಳೆದಿನ ಮಧ್ಯಾಹ್ನ ಕೆಂಪುಹೂಗಳ ಬನದಿ
ನಿನ್ನ ಕರೆಯಲು ಬರುವೆ, ನೀನು ಬರುವೆ
ಎಂದೆನುವ ಮಾತಿನಲಿ ಇಷ್ಟು ದಿನ ಕಾದಿರುವೆ
ಇನ್ನೆರಡು ದಿನವೇನು? ಕಾಯುತಿರುವೆ.

Saturday, February 7, 2015

ಹೂವು-ಹುಡುಗಿ

ಮೇಲು ಮಹಡಿಯವರೆಗೆ ಹಬ್ಬಿ ನಿಂತಿದೆ ಜಾಜಿ
ಹೂವ ನೋಡುವುದೇನು, ಎಂಥ ಸೊಗಸು
ಕೆಳಗೆಳೆದು ಬಳ್ಳಿಯನು ಹೂವ ಬಿಡಿಸುವ ಅವಳು
ಜಾಜಿಮಲ್ಲಿಗೆಗಿಂತ ಸೂಜಿ ಬಿರುಸು.

ನೆರೆಮನೆಯ ಕಣ್ಣುಗಳ ಜೊತೆಗೆ ಸೇರವು ಕಣ್ಣು
ಹಾದಿಯಲಿ ನಾ ಬರಲು ಒಂದು ನೋಟ;
ಅಮ್ಮನೆಲ್ಲಿಹಳೆಂದು ಖಾತ್ರಿಪಡಿಸುವ ಕೂಗು
ಹೂವುಗಳು ಮಿತಿಯೆನುವ ಮೋಸದಾಟ

ಗುನುಗುವಳು, ಒಂದೆರಡು ಸಾಲಿನಲಿ ನಿಲಿಸುವಳು
ಹೊಸತೊಂದು ಹಾಡನ್ನು ಹೊಸೆಯುವವಳು
ಯಾರಾದರೂ ಅವಳ ಕರೆಯೆ ಬೇಸರಪಟ್ಟು
ಮುನಿಸಿನಲಿ ಬಂದವರ ಬಯ್ಯುವವಳು

ಮೊನ್ನೆ ಹೀಗೆಯೆ ಸಂಜೆ ಅವಳ ಮನೆ ಬಾಗಿಲಿಗೆ
ಯಾವುದೋ ಧ್ಯಾನದಲಿ ಹೋದೆ ನಾನು;
ಅವಳು ಸೀರೆಯನುಟ್ಟು ತಂದು ಕೊಟ್ಟಳು ಕಾಫಿ
ಯಾರಿಗೋ ತಂದಿಟ್ಟ ಸಿಹಿಗಳನ್ನು

ಜಾಜಿಹೂವಿದೆ ಇಂದು ಕೊಯ್ಯುವರು ಇಲ್ಲಿಲ್ಲ
ದಾರಿಯೂ ಎಂದಿನದೆ, ಕಲ್ಲು ಮುಳ್ಳು
ನೆರೆಮನೆಯ ಜನಕೆಲ್ಲ ಮದುವೆಯಾಗಿದೆಯೇನೊ
ಬೇಸರದಿ ಬಾಗುತಿದೆ ಜಾಜಿಗೆಲ್ಲು.

ಸಂಜೆಯ ಪ್ರೀತಿ.

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ
ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ.

ನಾಕ-ನರಕ

ಸ್ವರ್ಗಲೋಕದ ಸಂಜೆ ಕೈಯ್ಯಲ್ಲಿ ಮಧುಪಾತ್ರೆ
ನಾನೊಬ್ಬ ನರಕದವ, ದಣಿದು ಬಂದೆ.
ಹಾಡುತಿಹ ನಲಿಯುತಿಹ ಬೆಡಗ ಬೆಡಗಿಯರೊಡನೆ
ಒಂದು ಕ್ಷಣವಾದರೂ ಸುಖಿಸಲೆಂದೆ.

ನಡೆಯಬೇಕಿದೆ ಮುಂದೆ, ಅಲುಗಲಾರದು ಕಾಲು
ನನ್ನ ಹಿಡಿದಿಟ್ಟವರು ಯಾರು? ನೀನೇ?
ಕೈಯ್ಯ ಮಧುಪಾತ್ರೆಯೂ ತಲುಪಲಾರದು ಬಾಯ
ನನ್ನ ತುಟಿ ನನ್ನ ರುಚಿ ನನ್ನ ಬೇನೆ.

ಬಾಗಿಲನು ತೆರೆದರೂ ಮುಚ್ಚಿ ಮನಸಿನ ಕಿಟಕಿ
ತೊಲಗು ನೀನೆಂಬಂತೆ ನೋಡುವವರು!
ಸ್ವರ್ಗಲೋಕದ ಸಂಜೆ ಸ್ವರ್ಗಜನಕೇ ಇರಲಿ
ನರಕದವ ನಾನಂತು, ಕೆಡುವ ಜನರು.

ನಾಕದೇವರ ಮುಂದೆ ನರಕದಾಳಿಗೆ ಭ್ರಮೆಯು
ಚಾಚಬೇಕೋ ನಾಲ್ಗೆ, ಹಸಿದೊಡಲಿಗೆ
ಮುಷ್ಟಿಯನ್ನವನಿಕ್ಕಿ ಹೊಲಿದು ಬಿಡುವನು ಆಸೆ
ದೇವನೊಲುಮೆಯೆ ತಾನೆ ಕೊನೆಯು ನಮಗೆ