Monday, January 17, 2011

ಬಾಲಿಶ ಕವನಗಳು !! 14 ಮೂಡಣದಿ ರವಿಕಿರಣ...

ಮೂಡಣದಿ ರವಿಕಿರಣ ಬರಸೆಳೆದು ಚುಂಬಿಸಲು
ಬಾನೆಲ್ಲ ನಸು ನಾಚಿ ಕೆಂಪಾಯಿತೆ?
ತಂಗಾಳಿ ಅಲೆಗಳಲಿ ಮಂಜಹನಿ ಮುದ್ದಿಸಲು
ಅರಳು ಮಲ್ಲಿಗೆಗೀಗ ಕಂಪಾಯಿತೆ ?


ಗುಡಿಯಲ್ಲಿ ಮೊಳಗುತಿಹ ವಾದ್ಯ ವೃಂದದ ಸೆಳೆತ
ಹಕ್ಕಿಗಳ ಗೂಡಿನಲ್ಲಿ ಹಾಡಾಯಿತೇ ?
ತುಡಿಯುತಿಹ ಎದೆಗಳಲಿ ಪ್ರೀತಿ ಪ್ರೇಮದ ಧ್ವನಿಯು
ಈ ಬೆರಗು ಕಣ್ಣಿನಲಿ ಮಾತಾಯಿತೆ ?

ಹಚ್ಚ ಹಸುರಿನ ವಸುಧೆ ಹುಚ್ಚು ಬೆಳಕಿನ ಹಿಂದೆ
ಶರವೇಗ, ಮೌನದಲಿ ತಾನೋಡಿತೆ?
ಈ ಕೆಚ್ಚು ಮನದೊಡತಿ ಬಿಚ್ಚು ಮಾತುಗಳಿಂದ
ಒಲವು ಗೆಲವಿನ ರಾಗ ತಾ ನೀಡಿತೇ?

ಪಡುವಣದ ರವಿಯೀಗ ಮುಳುಗಡೆಯ ಹಾದಿಯಲಿ
ಬಾನೆಲ್ಲ ಶೋಕದಲಿ ಕಪ್ಪಾಯಿತೆ?
ಇನ್ನು ಎಲ್ಲಿಯ ಪ್ರೀತಿ? ಯಾವ ರೀತಿಯ ಬಂಧ ?
ಈ ಚಂದ ಬದುಕಿಗೆ ಮುಪ್ಪಾಯಿತೆ ?

೨೦೦೫

1 comment:

Badarinath Palavalli said...

ಒಳ್ಳೆಯ ಭಾವ ಕವಿಯ ಉತ್ತಮ ಭಾವ ಗೀತೆ. ಬಾಲಿಶ ಗೀತೆ ಎನ್ನದಿರಿ, ನಿಮಗೆ ನೀವೇ!

ಕಾವ್ಯದಲ್ಲಿ ಲಯ, ಭಾವ ಮತ್ತು ಸ್ಪಂದನೆಯ ಉತ್ತಮ ಉದಾಹರಣೆ, ಈ ಕವಿತೆ.

"ಇನ್ನು ಎಲ್ಲಿಯ ಪ್ರೀತಿ?
ಯಾವ ರೀತಿಯ ಬಂಧ ?"

ನನಗೆ ಬಹಳ ಹಿಡಿಸಿದ ಸಾಲುಗಳು ಭಟ್ಟರೇ.