Tuesday, April 9, 2013

ಮನೆಗೆ ಮಲ್ಲಿಗೆ ಬಂತು


ಅಂಗಳದ ತುಂಬಾ ನಗುತಿದ್ದ ನಕ್ಷತ್ರ
ಬೆವರಿ ಬಿದ್ದಂತಿತ್ತು ಬೆಳಗಿನಲ್ಲೆ
ಈ ಕಾಡು ಮಲ್ಲಿಗೆಯ ಹೂವುಗಳು ಇಲ್ಲೇಕೆ
ಬಂತೆಂದು ಕೇಳಿದಳು ನನ್ನ ಮಲ್ಲೆ

ಕಾಲುದಾರಿಯ ಹಿಡಿದು ಮನೆಯಿಂದ ಹೊರಟರೆ
ಮೈಲುಗಳ ನಡೆಯಲಿದೆ ಕಾಡಿನಲ್ಲಿ
ಬೆಟ್ಟಗುಡ್ಡವ ಇಳಿದು ಸುತ್ತುತ್ತ ಹೋದರೆ
ಏನು ಸಿಕ್ಕಿತು ಹೇಳು ನಡಿಗೆಯಲ್ಲಿ?

ಕಾಡಿನಾ ಹಾದಿಗಳ ಈ ಮಲ್ಲೆ ಮರೆಸೀತು
ಯಾರಿಡದ ಗೊಬ್ಬರಕೆ ಮುಷ್ಟಿ ಹೂವು
ನಡೆಯುವುದ ಕಲಿಸೀತು; ಕಾಡನ್ನೆ ಉಳಿಸೀತು
ಮರೆಯಬಹುದೇ ಹೀಗೆ ಕಾಲುನೋವು!

ಹೀಗೆ ನಡೆಯುತ ಬರಲು; ತಂದೆ ನಾ ಈ ಲತೆಯ
ಕಾಡಿಂದ ಮನೆವರೆಗೆ ಬಂದಳವಳು
ನಾಡಿನಲು ಸೊಕ್ಕಿದಳು; ಸೊಕ್ಕಿ ಸಿಂಗರದಿಂದ
ಬೆಳಗು ಹೂವರಳಿಸಿ ನಕ್ಕಳವಳು!

ನಾಡು ಕಾಡೇನಿಲ್ಲ ಹೂಗಳಿಗೆ; ಪರಿಮಳಕೆ
ಬೇಲಿ ಕಟ್ಟುವುದೇಕೆ ಈ ಪ್ರೇಮಕೆ?
ನಿನ್ನ ಹಾಗೆಯೆ ನಗುವ ಈ ಪುಟ್ಟ ಮಲ್ಲೆ ಹೂ
ನಗುತಲಿರುವಳು ಹೀಗೆ; ನುಡಿ ಕೋರಿಕೆ.

3 comments:

sunaath said...

ಹೂವುಗಳನ್ನು ಪ್ರೇಮಿಸುವವರಿಗೆ ಯಾವ ಕಾಡಿನಲ್ಲಾದರೂ ಮಲ್ಲಿಗೆಯು ಸಿಕ್ಕೇ ಸಿಗುವುದು!
ಸು.ರಂ.ಯಕ್ಕುಂಡಿಯವರು ಬರೆದ ಕವನವೊಂದರ ಶೀರ್ಷಿಕೆ ಇಲ್ಲಿ ನೆನಪಾಗುತ್ತಿದೆ: "ಹೂವು ಚೆಲ್ಲಿದ ಹಾದಿಯಲ್ಲಿ"!

Badarinath Palavalli said...

ಚಪ್ಪಾಳೆ... ಚಪ್ಪಾಳೆ... ಕಾವ್ಯ ಕಟ್ಟುವ ಈ ನ್ಹಾವಲಹರಿಗೆ ನಾನಂತೂ ಕುಣಿದಾಡಿ ಬಿಟ್ಟಿ. ಟ್ರೀ ಚೀರರ್ಸ್ ಟೂ ಭಟ್ ಜೀ...

Manjunatha Kollegala said...

ಕಾಡಿನಾ ಹಾದಿಗಳ ಈ ಮಲ್ಲೆ ಮರೆಸೀತು
ಯಾರಿಡದ ಗೊಬ್ಬರಕೆ ಮುಷ್ಟಿ ಹೂವು
ನಡೆಯುವುದ ಕಲಿಸೀತು; ಕಾಡನ್ನೆ ಉಳಿಸೀತು
ಮರೆಯಬಹುದೇ ಹೀಗೆ ಕಾಲುನೋವು!

ಸೊಗಸಾದ ಸಾಲುಗಳು, ಸೊಗಸಾದ ಕವನ!