Saturday, June 6, 2015

ಅವಳು ಹಳ್ಳಿಯ ಹುಡುಗಿ

ಅವಳು ಹಳ್ಳಿಯ ಹುಡುಗಿ ನಗರ ಚೆಲುವನ ಕಂಡು ಮದುವೆಯಾಯಿತು ಮೊನ್ನೆ; ತಿಂಗಳಾಯ್ತು ಬಿದ್ದ ಅಕ್ಷತೆಕಾಳು ಹೆರಳ ಸಂಧಿಯ ತೊರೆದು ನಗರ ಜೀವನದೊಲುಮೆ ಜೊತೆಗೆ ಬಂತು. ಬಾಗಿಲನು ತೆರೆದಿರಿಸಿ ಕೂರದಿರು ಎಂದಿಹನು ಯಾವ ಕಳ್ಳರ ಭಯವೊ ತಿಳಿಯದಲ್ಲ! ಹೊಸಿಲು ದಾಟುವ ಮೊದಲು ಯೋಚನೆಯ ಸರಮಾಲೆ ಅವಳ ಕೇಳುವ ಕಿವಿಯು ಸಿಗುವುದಿಲ್ಲ ಸಂಜೆಯಾದರೆ ಅವಳು ನೆನೆಯುವಳು ಊರನ್ನು ತುಳಸಿ ಹೂವಿನ ಎದುರು ದೀಪವನ್ನು ಕರುವನಾಡಿಸುವಾಗ ಹಸು ತಿನ್ನಬಯಸುವುದು ಮುಡಿದು ಬಾಡಿದ ಹೆರಳ ಹೂಗಳನ್ನು. ದೂರದಲಿ ಸದ್ದಾಗಿ ವಾಸ್ತವಕೆ ಬರುವವಳು ಅವನ ದಾರಿಯ ಕಾಯ್ವ ಹೆಣ್ಣುಮಗಳು ಮನೆಯ ನೆನಪಲಿ ಮಿಡಿದ ಕಂಬನಿಯ ಒರೆಸುವಳು ಒಳಮನೆಯ ಕೋಣೆಯಲಿ ಹಣತೆಯಿರುಳು.

1 comment:

sunaath said...

ಹಳ್ಳಿ ಹಾಗು ನಗರಗಳ ಬದುಕಿನ ಭಿನ್ನತೆಯನ್ನು ಸೊಗಸಾಗಿ ತೋರಿಸಿರುವಿರಿ. ದೇವರ ಎದುರಿನಲ್ಲಿರುವ ನಂದಾದೀಪಕ್ಕೂ,
ಝಗಝಗಿಸುವ ವಿದ್ಯುತ್ ದೀಪಗಳಿಗೂ ಇದೇ ಅಲ್ಲವೆ?