Wednesday, July 14, 2010

ಹೊಸ ಹಾಡು

ಇಂದೇ ಕಂಡೆ ಕನ್ನಡಿಯಲಿ ನಾಳಿನಾ ಮುಖ
ಎಂದೂ ತೊರೆದು ಹೋಗದಂತ ತೀರದಾ ದುಃಖ
ಕೃಷ್ಣನೊಲುಮೆ ಕಾದಂತೆ ಚೆಲುವೆ ರಾಧಿಕ
ನಾನೂ ಕಾಯುತಿರುವೆ ನಲಿವಿನಮೃಥದಾ ಸುಖ !!

Monday, July 12, 2010

ನೀನು ದೂರಾದಾಗ ನಾನೇನು ಅಳುತಿಲ್ಲ !!

ನೀನು ದೂರಾದಾಗ ನಾನೇನು ಅಳುತಿಲ್ಲ
ಹೆಪ್ಪುಗಟ್ಟಿದೆಯಿಲ್ಲಿ ಕಣ್ಣ ನೀರು 
ಮತ್ತೆ ಜಾರಿದೆ ಧರೆಗೆ ನಳನಳಿಸುತಿಹ ಮರವು 
ಕಡಿದೆಯಲ್ಲೇ ಅದರ ತಾಯಿಬೇರು 


ಅಂದು ನೀ ಬಂದಾಗ ಬಂಧಗಳ ಬೆಸೆದಾಗ 
ನನ್ನ ನೋವಿನ ಗಿಡಕೆ ಪ್ರೀತಿ ಹೂವು 
ಎಲ್ಲೋ ಮರುಗಿದ ದನಿಯು ನಿನ್ನ ಸಾಮೀಪ್ಯದಲಿ 
ಗಾನವಾಯಿತು ಮರೆತು ಎಲ್ಲ ನೋವು 


ಸಾಯಲಾರದೆ ನೆನಪು ; ಮತ್ತೆ ಮರುಕಳಿಸುವುದು 
ಕಾಡುವುದು ಎಲ್ಲ ಕಡೆ ನಿನ್ನ ನೆನೆದು 
ಮರೆಯಲಾರದೆ ನಿನ್ನ ಸೇರಲಾರದೆ ನಿನ್ನ 
ಹೇಳಲಾರೆನು ಮನಕೆ ; ಮಾತೆ ಬರದು 


ನೀ ಕೊಟ್ಟ ಸ್ನೇಹವನು ಇಟ್ಟಿರುವೆ ಎದೆಯೊಳಗೆ 
ಕಾಯುತಿಹೆ ನಾನದನು ಹಿಂದೆ ಕೊಡಲು 
ನೀನದನು ಪಡೆದುಕೋ ಮತ್ತೆ ಹೋದರು ಸರಿಯೇ 
ಸ್ವೀಕರಿಸಲೇಬೇಕು ; ನಾನು ಮತ್ತೆ ನಗಲು 


ಕೆ ಈಶ್ವರ ಕಿರಣ 
೧೬.೦೮.೨೦೦೫ 

Wednesday, May 26, 2010

ನಾನೊಂದು ಮುತ್ತಲ್ಲ ಬರಿ ಹೊಳೆವ ಕಲ್ಲು !


ನಾನೊಂದು ಮುತ್ತಲ್ಲ  ಬರಿ ಹೊಳೆವ ಕಲ್ಲು !

ಸಾವಿರ ಸಾವಿರ ಮುತ್ತು ಸಿಗುವುದು ಸಾಗರದಾಳದಲ್ಲಿ
ನನ್ನೇ ಏಕೆ ಆರಿಸಿದೆ ಮೋಹದ ಆತುರದಲ್ಲಿ ?

ಹೊಸ ಮುತ್ತ ಹುಡುಕಿನ್ನು ಹಳೆ ಕಲ್ಲ ಕಳೆದು
ಆಗದೀ ಸಾಗರವು ಎಂದಿಗೂ ಬರಿದು

ಹುಡುಕಾಡಿ ದಣಿದರೇ ಬಾ ಎನ್ನ ಕಡೆಗೆ
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ

Ishwara Bhat K
Date : 20-05-2010, Thursday

Friday, March 19, 2010

ಮೂರು ಲೋಕ

೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .

೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .

೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

೦೪.೦೨.೨೦೦೫

Thursday, March 18, 2010

ಅವಳ ಪ್ರೀತಿಗೆ ನನ್ನ ಬದುಕಿಗೆ .. !

೧. ಅವಳಿಗೆ
ಬಾಳ ಬಂಧನದ ಹೊರೆಗಾದೆ ನೀನು ನೊಗ
ಆಗಲಾರೆನು ನಾನು ನೊಗಕೆ ಹೊರೆಯು !!
೨. ಪ್ರೀತಿಗೆ
ಗುರಿಯಿರದೆ ಶರವೆಸೆದೆ !
ಮರಣ ತಪ್ಪಿತು , ಉಳಿಸಿಹೋಯಿತು ನೋವ
ಬಾರದೇ ಮರಳಿ ಬಾಣ ?!
೩.ನನಗೆ
ಮಾಸಿ ಹೋಗಿದೆ ನೆನಪು ಎಂದು
ಮೋಸಹೋಗಿದೆ ಮನಸು ,
ಮರೆತು ಮಲಗಿದೆ ಕನಸ ಗಾಯವು
ವಾಸಿಯಗದೆ ಉಳಿವೆ ಎಂದು !
೪. ಬದುಕಿಗೆ
ಕತ್ತಲನ್ನೇ ಸುಟ್ಟ ಬೆಳಕು
ಕಣ್ಣಿಗೆ ಬಿದ್ದಾಗ
ಬೆಳಕೇ ಸುಟ್ಟುಹೋಯಿತು.